Atomberg Fans and Bombay High Court 
ಸುದ್ದಿಗಳು

ಸೀಲಿಂಗ್ ಫ್ಯಾನ್‌ಗಳ ವಿನ್ಯಾಸ ನಕಲು: ಆಟಂಬರ್ಗ್‌ಗೆ ಮಧ್ಯಂತರ ಪರಿಹಾರ ನಿರಾಕರಿಸಿದ ಬಾಂಬೆ ಹೈಕೋರ್ಟ್

ಪ್ರತಿವಾದಿಗಳ ವಿರುದ್ಧ ಮಧ್ಯಂತರ ಪರಿಹಾರಗಳನ್ನು ಯಶಸ್ವಿಯಾಗಿ ಪಡೆಯಲು ಕಾನೂನಿಡಿ ಅಗತ್ಯವಿದ್ದ ಇನ್ನಷ್ಟು ಅಂಶಗಳನ್ನು ಮಂಡಿಸಲು ಆಟಂಬರ್ಗ್‌ಗೆ ಸಾಧ್ಯವಾಗಿಲ್ಲ ಎಂದ ನ್ಯಾಯಾಲಯ.

Bar & Bench

ತನ್ನ ಸೀಲಿಂಗ್‌ ಫ್ಯಾನ್‌ಗಳ ವಿನ್ಯಾಸಗಳನ್ನು ನಕಲು ಮಾಡಲಾಗಿದೆ ಎಂದು ಲೂಕರ್‌ ಎಲೆಕ್ಟ್ರಿಕ್‌ ಟೆಕ್ನಾಲಜೀಸ್‌ ಪ್ರೈ ಲಿಮಿಟೆಡ್‌ ವಿರುದ್ಧ ಮಾಡಿದ್ದ ಆರೋಪಗಳಿಗೆ ಸಂಬಂಧಿಸಿದಂತೆ ಆಟಂಬರ್ಗ್‌ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ಗೆ ಯಾವುದೇ ಮಧ್ಯಂತರ ಪರಿಹಾರ ನೀಡಲು ಬಾಂಬೆ ಹೈಕೋರ್ಟ್ ಸೋಮವಾರ ನಿರಾಕರಿಸಿದೆ [ಆಟಂಬರ್ಗ್‌ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಲುಕರ್ ಎಲೆಕ್ಟ್ರಿಕ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ನಡುವಣ ಪ್ರಕರಣ].

ಸೀಲಿಂಗ್ ಫ್ಯಾನ್‌ಗಳನ್ನು ತಯಾರಿಸುವುದಕ್ಕೆ ತಡೆ ನೀಡಲು ನ್ಯಾಯಮೂರ್ತಿ ಮನೀಶ್ ಪಿತಾಲೆ ಅವರಿದ್ದ ಏಕಸದಸ್ಯ ಪೀಠ ನಿರಾಕರಿಸಿತು. ಆಟಂಬರ್ಗ್ ತನ್ನ ಪರವಾಗಿ ಪ್ರಾಥಮಿಕ ಪ್ರಕರಣ ಮಂಡಿಸಲು ಇಲ್ಲವೇ ಮಧ್ಯಂತರ ಪರಿಹಾರ ನೀಡಿದೆ ಹೋದರೆ ತನಗೆ ಸರಿಪಡಿಸಲಾಗದ ನಷ್ಟ ಉಂಟಾಗುತ್ತದೆ ಎಂಬುದನ್ನು ಸಾಬೀತುಪಡಿಸಲು ಆಟಂಬರ್ಗ್‌ ವಿಫಲವಾಗಿದೆ ಎಂದು ಅದು ಹೇಳಿದೆ.

ಪ್ರತಿವಾದಿಗಳ ವಿರುದ್ಧ ಮಧ್ಯಂತರ ಪರಿಹಾರಗಳನ್ನು ಯಶಸ್ವಿಯಾಗಿ ಪಡೆಯಲು ಕಾನೂನಿಡಿ ಅಗತ್ಯವಿದ್ದ ಇನ್ನಷ್ಟು ಅಂಶಗಳನ್ನು ಮಂಡಿಸಲು ಆಟಂಬರ್ಗ್‌ಗೆ ಸಾಧ್ಯವಾಗಿಲ್ಲ ಎಂದು ಪೀಠ ತಿಳಿಸಿದೆ.

ಆಟಂಬರ್ಗ್ ಸೆಪ್ಟಂಬರ್ 8, 2018 ರಂದು  'ಆಟೊಂಬರ್ಗ್ ರೆನೆಸಾ ಸೀಲಿಂಗ್ ಫ್ಯಾನ್' ನ ವಿನ್ಯಾಸವನ್ನು ನೋಂದಾಯಿಸಿತ್ತು. ಲೂಕರ್‌ ಇದೇ ವಿನ್ಯಾಸದ ಎರಡು ಸೀಲಿಂಗ್ ಫ್ಯಾನ್‌ಗಳ ನೋಂದಣಿಯನ್ನು ಮಾರ್ಚ್ 21, 2022ರಂದು ಮೋಸದಿಂದ ಪಡೆದುಕೊಂಡಿದೆ ಎಂದು ಅದು ಆರೋಪಿಸಿತ್ತು.

ಆದರೆ ಪ್ರಶ್ನಿಸಲಾಗಿರುವ ವಿನ್ಯಾಸವು ಇದಾಗಲೇ ಸಾರ್ವಜನಿಕವಾಗಿ ಪ್ರಕಟಿಸಿರುವಂತದ್ದಾಗಿದ್ದು ಇದನ್ನು ಗೊರಿಲ್ಲಾ ಸೀಲಿಂಗ್‌ ಫ್ಯಾನ್ಸ್‌ ಎಂದು ಕರೆಯಲಾಗಿದೆ ಎಂಬ ವಾಸ್ತವ ಸಂಗತಿಯನ್ನು ಆಟಂಬರ್ಗ್‌ ಮುಚ್ಚಿಟ್ಟಿದೆ ಎಂದು ಲೂಕರ್‌ ನ್ಯಾಯಾಲಯದ ಗಮನಕ್ಕೆ ತಂದಿತು. ಅಲ್ಲದೆ ಆಟಂಬರ್ಗ್‌ನ ವಿನ್ಯಾಸದಲ್ಲಿ ಯಾವುದೇ ಅನನ್ಯತೆ ಇಲ್ಲದಿರುವುದರಿಂದ ಅದನ್ನು ಆಟಂಬರ್ಗ್‌ ನೋಂದಾಯಿಸಲು ಸಾಧ್ಯವಿಲ್ಲ ಎಂದು ವಾದಿಸಿತ್ತು.