ಸುದ್ದಿಗಳು

ಹಿಂದಿ ಚಲನಚಿತ್ರ ‘ಥ್ಯಾಂಕ್ ಗಾಡ್' ಬಿಡುಗಡೆಗೆ ತಡೆ ನೀಡಲು ಬಾಂಬೆ ಹೈಕೋರ್ಟ್ ನಕಾರ

Bar & Bench

ಅಜಯ್ ದೇವಗನ್, ಸಿದ್ಧಾರ್ಥ್ ಮಲ್ಹೋತ್ರಾ  ಹಾಗೂ ರಾಕುಲ್ ಪ್ರೀತ್ ಅಭಿನಯದ ಹಿಂದಿ ಚಿತ್ರ ‘ಥ್ಯಾಂಕ್ ಗಾಡ್ʼ ಬಿಡುಗಡೆಗೆ ತಡೆ ನೀಡಲು ಬಾಂಬೆ ಹೈಕೋರ್ಟ್ ಇತ್ತೀಚೆಗೆ ನಿರಾಕರಿಸಿದೆ.

ಸಿನಿಮಾ ಅಕ್ಟೋಬರ್ 25ರಂದು ಬಿಡುಗಡೆಯಾಗಲಿದೆ ಎಂಬ ಕುರಿತು ಸೆಪ್ಟೆಂಬರ್ 9ರಂದೇ ಘೋಷಿಸಿದ್ದರೂ ತುರ್ತು ಪರಿಹಾರ ಕೋರಿ ಅಕ್ಟೋಬರ್ 18ರಂದು ಅರ್ಜಿ ಸಲ್ಲಿಸಿರುವುದನ್ನು ಗಮನಿಸಿದ ನ್ಯಾ. ಆರ್‌ ಐ ಚಾಗ್ಲಾ ಅವರಿದ್ದ ಏಕ ಸದಸ್ಯ ಪೀಠ, ಸಿನಿಮಾ ಈಗ ನಿರ್ಮಾಣೊತ್ತರ ಹಂತದಲ್ಲಿದೆ (ಪೋಸ್ಟ್‌ ಪ್ರೊಡಕ್ಷನ್‌) ಅದರ ಬಿಡುಗಡೆ ದಿನಾಂಕವನ್ನು ಸೆಪ್ಟೆಂಬರ್ 9, 2022 ರಂದು ಘೋಷಿಸಲಾಗಿತ್ತು ಎಂಬುದು ಸಂಪೂರ್ಣ ತಿಳಿದೂ ಅರ್ಜಿದಾರರು ತುರ್ತು ಮಧ್ಯಂತರ ಪರಿಹಾರ ಕೋರಿದ್ದಾರೆ. ಹೀಗಾಗಿ ಈ ಹಂತದಲ್ಲಿ ಅರ್ಜಿ ಪರಿಗಣಿಸಲು ಸಾಧ್ಯವಿಲ್ಲ ಎಂದಿತು.

ಚಿತ್ರದ ಇಬ್ಬರು ನಿರ್ಮಾಪಕರ ನಡುವಿನ ಒಪ್ಪಂದದ ಬಿಕ್ಕಟ್ಟಿನಿಂದ ಉದ್ಭವಿಸಿದ ಮೊಕದ್ದಮೆಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಡ್ಯಾನಿಷ್‌ ಭಾಷೆಯ ಸಿನಿಮಾವೊಂದನ್ನು ಆಧರಿಸಿದ ʼಥ್ಯಾಂಕ್‌ ಗಾಡ್‌ʼ ಚಿತ್ರ ನಿರ್ಮಾಣದ ವಿಶೇಷ ಹಕ್ಕುಗಳನ್ನು ಫಿರ್ಯಾದಿ ಅಜುರೆ ಎಂಟರ್‌ಟೈನ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್‌ ಪಡೆದಿತ್ತು. ಅಜುರೆ ಏಕಮಾತ್ರ ಮತ್ತು ವಿಶೇಷ ರಿಮೇಕ್‌ ಹಕ್ಕು ಪಡೆಯುವ ಅನುಸಾರವಾಗಿ ಮಾರುತಿ ಎಂಟರ್‌ಪ್ರೈಸಸ್‌ ಚಿತ್ರವನ್ನು ಜಂಟಿಯಾಗಿ ನಿರ್ಮಿಸಲು ಅಜುರೆಯನ್ನು ಸಂಪರ್ಕಿಸಿತ್ತು.

ಆದರೆ ಹೆಸರಾಂತ ಆಡಿಯೊ ಸಂಸ್ಥೆ ಟಿ- ಸೀರಿಸ್‌  ಮತ್ತು ಮಾರುತಿ ತಾನು ಮಾಡಿಕೊಂಡಿದ್ದ ಒಪ್ಪಂದವನ್ನು ಉಲ್ಲಂಘಿಸಿದ್ದು ತನ್ನನ್ನು ಒಳಗೊಳ್ಳದೆ ಚಿತ್ರದ ಟ್ರೇಲರ್‌ಗಳನ್ನು ನಿರ್ಮಿಸಿವೆ ಎಂದು ಅಜುರೆ ನ್ಯಾಯಾಲಯದ ಮೆಟ್ಟಿಲೇರಿತ್ತು. ವಿಚಾರಣೆ ವೇಳೆ ತುರ್ತು ಪರಿಹಾರ ನೀಡಲು ನಿರಾಕರಿಸಿದ್ದರೂ ಅರ್ಜಿಗೆ ಪ್ರತಿಕ್ರಿಯಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿ ಪ್ರಕರಣವನ್ನು ನ್ಯಾಯಾಲಯ ನವೆಂಬರ್ 22ಕ್ಕೆ ಮುಂದೂಡಿದೆ.