Hijab and Bombay High Court  
ಸುದ್ದಿಗಳು

ಕಾಲೇಜಿನಲ್ಲಿ ಹಿಜಾಬ್‌ಗೆ ನಿರ್ಬಂಧ: ವಿದ್ಯಾರ್ಥಿಗಳ ಮನವಿ ವಜಾಗೊಳಿಸಿದ ಬಾಂಬೆ ಹೈಕೋರ್ಟ್

ಕಾಲೇಜಿನ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಎ ಎಸ್ ಚಂದೂರ್ಕರ್ ಮತ್ತು ರಾಜೇಶ್ ಪಾಟೀಲ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

Bar & Bench

ತಮ್ಮ ಧರ್ಮ ಪ್ರತಿನಿಧಿಸುವ ಬುರ್ಖಾ, ನಖಾಬ್‌, ಪದಕ, ಟೊಪ್ಪಿಗೆ ಅಥವಾ ಸ್ಟೋಲ್‌ ರೀತಿಯ ಬಟ್ಟೆ ಧರಿಸುವುದಕ್ಕೆ ಕಾಲೇಜು ಆಡಳಿತ ಮಂಡಳಿ ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ  ಮುಂಬೈ ಕಾಲೇಜೊಂದರ ಒಂಬತ್ತು ವಿದ್ಯಾರ್ಥಿಗಳು ಸಲ್ಲಿಸಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ  [ಜೈನಾಬ್ ಚೌಧರಿ ಮತ್ತಿತರರು ಹಾಗೂ ಚೆಂಬೂರ್ ಟ್ರಾಂಬೆ ಎಜುಕೇಶನ್ ಸೊಸೈಟಿಯ ಎನ್‌ ಜಿ ಆಚಾರ್ಯ ಮತ್ತು ಡಿ ಕೆ ಮರಾಠೆ ಕಾಲೇಜು ನಡುವಣ ಪ್ರಕರಣ].

ಕಾಲೇಜಿನ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಎ ಎಸ್ ಚಂದೂರ್ಕರ್‌ ಮತ್ತು ರಾಜೇಶ್ ಪಾಟೀಲ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

ಜೂನ್ 4ರ ಹೊಸ ಶೈಕ್ಷಣಿಕ ವರ್ಷದಿಂದ ವಸ್ತ್ರ ಸಂಹಿತೆ ಜಾರಿಗೆ ತರಲು ಉದ್ದೇಶಿಸಲಾಗಿತ್ತು. ವಸ್ತ್ರ ಸಂಹಿತೆಯ ಮಾರ್ಗಸೂಚಿಗಳನ್ನು ಅಧ್ಯಾಪಕರು ಎರಡನೇ ಮತ್ತು ಮೂರನೇ ವರ್ಷದ ಪದವಿ ವಿದ್ಯಾರ್ಥಿಗಳಿಗೆ ವಾಟ್ಸಾಪ್‌ ಮೂಲಕ ನೀಡಿದ್ದರು. ಇದನ್ನು ಒಂಬತ್ತು ವಿದ್ಯಾರ್ಥಿಗಳು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

ಕಾಲೇಜಿನ ಮಾರ್ಗಸೂಚಿಗಳು ಕಾನೂನುಬಾಹಿರ, ನಿರಂಕುಶ ಮತ್ತು ಅಸಮಂಜಸ. ಮುಂಬೈ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ಮತ್ತು ಮಹಾರಾಷ್ಟ್ರ ಸರ್ಕಾರದಿಂದ ನೆರವು ಪಡೆದಿರುವ ಕಾಲೇಜಿಗೆ ಅಂತಹ ನಿರ್ಬಂಧ ವಿಧಿಸುವ ಅಧಿಕಾರ ಇಲ್ಲ. ಯಾವ ಸೆಕ್ಷನ್‌ ಪ್ರಕಾರ ನಿರ್ದಿಷ್ಟ ಉಡುಪುಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ ಎಂಬುದನ್ನು ಕಾಲೇಜು ಆಡಳಿತ ಮಂಡಳಿ ವಿವರಿಸಿಲ್ಲ. ನಖಾಬ್ ಮತ್ತು ಹಿಜಾಬ್ ಅರ್ಜಿದಾರರ ಧಾರ್ಮಿಕ ನಂಬಿಕೆಯ ಅವಿಭಾಜ್ಯ ಅಂಗವಾಗಿದ್ದು ತರಗತಿಯಲ್ಲಿ ನಖಾಬ್ ಮತ್ತು ಹಿಜಾಬ್ ಧರಿಸುವುದನ್ನು ಮುಂದುವರಿಸುವುದು ತಮ್ಮ ಇಚ್ಛೆ. ಇದು ಆಯ್ಕೆ ಮತ್ತು ಖಾಸಗಿತನದ ಹಕ್ಕಿನ ಭಾಗ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.

ಕಾಲೇಜು ಆಡಳಿತ ಮಂಡಳಿಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅನಿಲ್ ಅಂತೂರಕರ್, ಸಂವಿಧಾನದ 25ನೇ ವಿಧಿಯ ಅಡಿಯಲ್ಲಿ ಸಿಖ್ ಪೇಟದಂತಹ ಕೆಲವು ಉಡುಪುಗಳನ್ನು ಧರಿಸುವುದು ಧಾರ್ಮಿಕ ಮೂಲಭೂತ ಹಕ್ಕಿಗೆ ಒಳಪಟ್ಟಿದೆ. ಈ ರೀತಿ ಸಾಬೀತಾಗದ ವಿನಾ ಎಲ್ಲರಿಗೂ ವಸ್ತ್ರ ಸಂಹಿತೆ ಅನ್ವಯಿಸುತ್ತದೆ. ಮೇಲ್ನೋಟಕ್ಕೆ, ಅರ್ಜಿದಾರರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗದ ಕಾರಣ ಮನವಿ ಆಧಾರರಹಿತವಾಗಿದೆ. ಯಾರಾದರೂ ಸಂಪೂರ್ಣ ಕೇಸರಿ ವಸ್ತ್ರ ಧರಿಸಿ ಕಾಲೇಜಿಗೆ ಬಂದರೆ, ಕಾಲೇಜು ಅದನ್ನೂ ವಿರೋಧಿಸುತ್ತದೆ ಎಂದು ವಾದಿಸಿದರು. ಇದಕ್ಕೆ ಅರ್ಜಿದಾರರ ಪರ ವಕೀಲ ಅಲ್ತಾಫ್‌ ಖಾನ್‌ ವಿರೋಧ ವ್ಯಕ್ತಪಡಿಸಿದರು.

ವಾದಗಳನ್ನು ಆಲಿಸಿದ ನ್ಯಾಯಾಲಯ ಕಾಲೇಜು ಆಡಳಿತದ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿ ಅರ್ಜಿ ವಜಾಗೊಳಿಸಿತು.

ಕರ್ನಾಟಕದ ಪ್ರಕರಣ

ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸದಂತೆ ನಿಷೇಧಿಸಲು ರಾಜ್ಯದ ಸರ್ಕಾರಿ ಕಾಲೇಜುಗಳಿಗೆ ಅಧಿಕಾರ ನೀಡಿ 2022ರಲ್ಲಿ ಕರ್ನಾಟಕ ಸರ್ಕಾರ ಹೊರಡಿಸಿದ್ದ ಆದೇಶದ ಸಿಂಧುತ್ವ ಕುರಿತು ಸುಪ್ರೀಂ ಕೋರ್ಟ್ ಇನ್ನಷ್ಟೇ ಅಂತಿಮ ತೀರ್ಪು ನೀಡಬೇಕಿದೆ.

ಹಿಜಾಬ್ ನಿಷೇಧವನ್ನು ಕರ್ನಾಟಕ ಹೈಕೋರ್ಟ್‌ ಮಾರ್ಚ್ 2022ರಲ್ಲಿ ಎತ್ತಿ ಹಿಡಿದಿತ್ತು, ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠ ಅಕ್ಟೋಬರ್ 2022ರಲ್ಲಿ ಭಿನ್ನ ತೀರ್ಪು ನೀಡಿತ್ತು. ಹೀಗಾಗಿ ಪ್ರಕರಣವನ್ನು ಸರ್ವೋಚ್ಚ ನ್ಯಾಯಾಲಯದ ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿತ್ತು. ಪ್ರಕರಣ ಸದ್ಯ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ.