Partho Dasgupta, TRP Scam 
ಸುದ್ದಿಗಳು

ಅರ್ನಾಬ್‌ ಗೋಸ್ವಾಮಿ-ಪಾರ್ಥೊ ದಾಸ್‌ಗುಪ್ತ ಆಪ್ತರು: ಬಾಂಬೆ ಹೈಕೋರ್ಟ್‌ಗೆ ಮಹಾರಾಷ್ಟ್ರ ಸರ್ಕಾರದ ವಿವರಣೆ

ಟಿಆರ್‌ಪಿ ಹಗರಣದಲ್ಲಿ ಸಿಲುಕಿ ಜೈಲಿನಲ್ಲಿರುವ ಬ್ರಾಡ್‌ಕಾಸ್ಟ್‌ ಆಡಿಯನ್ಸ್‌ ರೀಸರ್ಚ್‌ ಕೌನ್ಸಿಲ್‌ ಮಾಜಿ ಸಿಇಒ ಪಾರ್ಥೊ ದಾಸ್‌ಗುಪ್ತ ಜಾಮೀನು ಮನವಿಯ ತೀರ್ಪನ್ನು ಬಾಂಬೆ ಹೈಕೋರ್ಟ್‌ ಮಂಗಳವಾರ ಕಾಯ್ದಿರಿಸಿದೆ.

Bar & Bench

ಟೆಲಿವಿಷನ್‌ ರೇಟಿಂಗ್‌ ಪಾಯಿಂಟ್‌ (ಟಿಆರ್‌ಪಿ) ಹಗರಣದಲ್ಲಿ ಸಿಲುಕಿ ಜೈಲಿನಲ್ಲಿರುವ ಬ್ರಾಡ್‌ಕಾಸ್ಟ್‌ ಆಡಿಯನ್ಸ್‌ ರೀಸರ್ಚ್‌ ಕೌನ್ಸಿಲ್‌ (ಬಾರ್ಕ್‌) ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಪಾರ್ಥೊ ದಾಸ್‌ಗುಪ್ತ ಜಾಮೀನು ಮನವಿಯ ತೀರ್ಪನ್ನು ಬಾಂಬೆ ಹೈಕೋರ್ಟ್‌ ಮಂಗಳವಾರ ಕಾಯ್ದಿರಿಸಿದೆ.

ವಿಶೇಷ ಸರ್ಕಾರಿ ಅಭಿಯೋಜಕ ಶಿಶಿರ್‌ ಹಿರೆ ಆನಂತರ ಹಿರಿಯ ವಕೀಲ ಅಬಾದ್‌ ಪಾಂಡಾ ಅವರು ನ್ಯಾಯಮೂರ್ತಿ ಪಿ ಡಿ ನಾಯಕ್‌ ಅವರ ಮುಂದೆ ಸೋಮವಾರ ವಾದ ಪೂರ್ಣಗೊಳಿಸಿದರು.

ಬಾರ್ಕ್‌ನ ಮುಖ್ಯ ನಿರ್ವಹಣಾ ಅಧಿಕಾರಿಯಾದ (ಸಿಒಒ) ರೊಮಿಲ್‌ ರಾಮಗರಿಯಾ ಅವರು ಹಣಕಾಸು ಉಸ್ತುವಾರಿ ಒತ್ತಿದ್ದರೂ ದಾಸ್‌ಗುಪ್ತ ಅವರು ಕಂಪೆನಿಯ ಪ್ರಮುಖ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು ಎಂದು ಹಿರೆ ಹೇಳಿದ್ದಾರೆ. ರಾಮಗರಿಯಾ ಅವರಿಗೆ ಮಂಜೂರಾಗಿರುವ ಜಾಮೀನು ಪ್ರಶ್ನಿಸಿಲು ಸರ್ಕಾರದ ಮನವಿ ಕೋರಲಾಗಿದ್ದು, ಹಸಿರು ನಿಶಾನೆಗಾಗಿ ಕಾಯಲಾಗುತ್ತಿದೆ ಎಂದು ಹಿರೆ ಸ್ಪಷ್ಟಪಡಿಸಿದ್ದಾರೆ.

ರಿಪಬ್ಲಿಕ್‌ ಟಿವಿ ಪ್ರಧಾನ ಸಂಪಾದಕ ಅರ್ನಾಬ್‌ ಗೋಸ್ವಾಮಿ ಅವರ ಜೊತೆ ದಾಸ್‌ಗುಪ್ತ ನಿಕಟ ಸಂಬಂಧ ಹೊಂದಿದ್ದರು ಎಂಬುದನ್ನು‌ ಪೂರಕ ಆರೋಪಪಟ್ಟಿಯ ಜೊತೆ ಸಲ್ಲಿಸಲಾಗಿರುವ ವಾಟ್ಸಾಪ್‌ ಚಾಟ್‌ ದೃಢಪಡಿಸುತ್ತದೆ ಎಂದು ಹಿರೆ ವಾದಿಸಿದ್ದಾರೆ.

“ಇಬ್ಬರ ನಡುವೆ ಅಪಾರವಾದ ಸಂದೇಶ ಸಂವಹನವಾಗಿದ್ದು ಈ ಬಗ್ಗೆ ತನಿಖೆ ನಡೆಸಬೇಕಿದೆ. ನೆಟ್‌ವರ್ಕ್‌ನ ಮುಖ್ಯಸ್ಥರು ಮತ್ತು ದಾಸ್‌ಗುಪ್ತ ಅವರು ಆಪ್ತ ಸ್ನೇಹಿತರಾಗಿದ್ದಾರೆ. ಒಂದು ಸಂದರ್ಭದಲ್ಲಿ ಗೋಸ್ವಾಮಿ ಅವರು ದಾಸ್‌ಗುಪ್ತ ತಮ್ಮ ಎರಡನೇ ಪ್ರಾಣ ಎಂದು ಹೇಳಿದ್ದಾರೆ,” ಎಂದು ಹಿರೆ ನೆನಪಿಸಿದರು.

ರಾಜ್ಯ ಸರ್ಕಾರದ ಪ್ರತ್ಯುತ್ತರ ವಾದಕ್ಕೆ ಸಂಬಂಧಿಸಿದಂತೆ ಹಿರಿಯ ವಕೀಲ ಅಬಾದ್‌ ಪಾಂಡಾ ಮತ್ತು ವಕೀಲ ಅರ್ಜುನ್‌ ಸಿಂಗ್‌ ಠಾಕೂರ್‌ ಅವರು ಜಾಮೀನು ಮನವಿಯ ವಿಚಾರಣೆಯು ದಾಸ್‌ಗುಪ್ತ ಅವರ ಮುಗ್ಧತೆಯನ್ನು ನಿರ್ಧರಿಸುವ ಹಂತವಲ್ಲ ಎಂದಿದ್ದಾರೆ.

ಬಾರ್ಕ್‌ಗೆ ಸಲ್ಲಿಸಲಾಗುವ ದತ್ತಾಂಶವು ಅಪಾರ ಪ್ರಮಾಣದಲ್ಲಿದ್ದನ್ನು ಅದನ್ನು ತಿರುಚುವುದು ಅಷ್ಟು ಸುಲಭವಲ್ಲ. “ಬಾರ್ಕ್‌ನಲ್ಲಿ ಆಧಾರ್‌ನ ನಾಲ್ಕು ಪಟ್ಟು ದತ್ತಾಂಶ ಸಂಗ್ರಹಿಸಲಾಗಿದೆ” ಎಂದು ಅವರು ವಾದಿಸಿದ್ದಾರೆ. ಬಾರ್ಕ್‌ ಮಾರ್ಗಸೂಚಿಯನ್ನು ದಾಸ್‌ಗುಪ್ತ ಅನುಸರಿಸಬೇಕಿತ್ತು ಎಂಬ ಹಿರೆ ಅವರ ವಾದಕ್ಕೆ ಪ್ರತಿಕ್ರಿಯಿಸಿದ ಪಾಂಡಾ ಅವರು ಮಾರ್ಗಸೂಚಿ ಉಲ್ಲಂಘನೆಯು ನಾಗರಿಕ ಹೊಣೆಗಾರಿಕೆಯೇ ವಿನಾ ಕ್ರಿಮಿನಲ್‌ ಹೊಣೆಗಾರಿಕೆಯಲ್ಲ ಎಂದಿದ್ದಾರೆ.

ಆರೋಪಿಯು ನ್ಯಾಯಾಂಗ ವಶದಲ್ಲಿದ್ದಾಗ ಅವರನ್ನು ಸರಿಯಾದ ರೀತಿಯಲ್ಲಿ ವಿಚಾರಣೆಗೆ ಒಳಪಡಿಸಿಲ್ಲ. ವಿಚಾರಣೆ ಮತ್ತು ತನಿಖೆ ಪೂರ್ಣಗೊಳ್ಳದೇ ಇರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಆರೋಪಪಟ್ಟಿಯನ್ನು ಯಾವುದೇ ಕಾರಣಕ್ಕೂ ಸಲ್ಲಿಸಬಾರದಿತ್ತು ಎಂದು ಇದೇ ವೇಳೆ ಅವರು ವಾದಿಸಿದರು. ವಾದ-ಪ್ರತಿವಾದವನ್ನು ಆಲಿಸಿದ ಪೀಠವು ತೀರ್ಪು ಕಾಯ್ದಿರಿಸಿದೆ.