Abu salem, Bombay High Court 
ಸುದ್ದಿಗಳು

ಅವಧಿಪೂರ್ವ ಬಿಡುಗಡೆ ಕೋರಿ ಅಬು ಸಲೇಂ ಅರ್ಜಿ: ಕೇಂದ್ರಕ್ಕೆ ಬಾಂಬೆ ಹೈಕೋರ್ಟ್ ನೋಟಿಸ್‌

ತಾನು 25 ವರ್ಷಗಳಿಗಿಂತ ಹೆಚ್ಚು ಜೈಲು ಶಿಕ್ಷೆ ಅನುಭವಿಸಬಾರದು ಎಂದು ಭಾರತ ಮತ್ತು ಪೋರ್ಚುಗಲ್ ನಡುವೆ ನಡೆದಿರುವ ಹಸ್ತಾಂತರ ಒಪ್ಪಂದದಂತೆ ಈಗಾಗಲೇ ಶಿಕ್ಷೆ ಅವಧಿಯನ್ನು ಪೂರ್ಣಗೊಳಿಸಿದ್ದೇನೆ ಎಂದು ಸಲೇಂ ವಾದಿಸಿದ್ದಾನೆ.

Bar & Bench

1993ರ ಬಾಂಬೆ ಸ್ಫೋಟ ಪ್ರಕರಣದಲ್ಲಿ 25 ವರ್ಷಕ್ಕೂ ಹೆಚ್ಚು ಕಾಲ ಸೆರೆವಾಸ ಅನುಭವಿಸಿದ ತನ್ನನ್ನು ಅವಧಿಪೂರ್ವವಾಗಿ ಬಿಡುಗಡೆ ಮಾಡಬೇಕೆಂದು ಕೋರಿ ಭೂಗತ ಪಾತಕಿ ಅಬು ಸಲೇಂ ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿ ನೋಟಿಸ್‌ ನೀಡಿದೆ [ಅಬು ಸಲೇಮ್ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ತಾನು 25 ವರ್ಷಗಳಿಗಿಂತ ಹೆಚ್ಚು ಜೈಲು ಶಿಕ್ಷೆ ಅನುಭವಿಸಬಾರದು ಎಂದು ಭಾರತ ಮತ್ತು ಪೋರ್ಚುಗಲ್ ನಡುವೆ ನಡೆದಿರುವ ಹಸ್ತಾಂತರ ಒಪ್ಪಂದದಂತೆ ತಾನು ಈಗಾಗಲೇ ಶಿಕ್ಷೆ ಅವಧಿಯನ್ನು ಪೂರ್ಣಗೊಳಿಸಿದ್ದೇನೆ ಎಂದು ಸಲೇಂ ವಾದಿಸಿದ್ದಾನೆ.

ಕೇಂದ್ರ ಸರ್ಕಾರವನ್ನು ಪ್ರಕರಣದಲ್ಲಿ ಪಕ್ಷಕಾರನನ್ನಾಗಿ ಸೇರಿಸಲು ಅರ್ಜಿಗೆ ತಿದ್ದುಪಡಿ ಮಾಡುವುದಕ್ಕೆ ಅಬು ಸಲೇಂಗೆ ಮಾರ್ಚ್ 10ರಂದು ನ್ಯಾಯಮೂರ್ತಿಗಳಾದ ಸಾರಂಗ್ ಕೊತ್ವಾಲ್ ಮತ್ತು ಎಸ್‌ ಎಂ ಮೋದಕ್‌ ಅವರಿದ್ದ ಪೀಠ ಅವಕಾಶ ಮಾಡಿಕೊಟ್ಟಿತು. ಜೊತೆಗೆ ಹೊಸದಾಗಿ ಸೇರ್ಪಡೆಗೊಂಡ ಪ್ರತಿವಾದಿಗೂ ನೋಟಿಸ್‌ ಜಾರಿ ಮಾಡಿತು.

ರಾಜ್ಯ ಸರ್ಕಾರಕ್ಕೆ ಪ್ರತಿಕ್ರಿಯೆ ಸಲ್ಲಿಸಲು ಇದೇ ವೇಳೆ ಸಮಯಾವಕಾಶ ನೀಡಿದ ನ್ಯಾಯಾಲಯ, ಪ್ರಕರಣವನ್ನು ಮಾರ್ಚ್ 26ಕ್ಕೆ ಮುಂದೂಡಿತು.

ಅಬು ಸಲೇಂನ ಮನವಿಯ ಪ್ರಕಾರ, ಆತ ವಿಚಾರಣಾಧೀನ ಕೈದಿಯಾಗಿದ್ದಾಗಿನ ಸಮಯ ಮತ್ತು ಉತ್ತಮ ನಡವಳಿಕೆಗಾಗಿ ಗಳಿಸಿದ ವಿನಾಯಿತಿಗಳನ್ನು ಗಣನೆಗೆ ತೆಗೆದುಕೊಂಡರೆ 25 ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದಾನೆ ಎಂದಾಗುತ್ತದೆ.

2005 ರಿಂದ 2017 ರವರೆಗೆ 11 ವರ್ಷ 9 ತಿಂಗಳು ಮತ್ತು 26 ದಿನಗಳನ್ನು ವಿಚಾರಣಾಧೀನ ಕೈದಿಯಾಗಿ ಕಳೆದಿರುವುದಾಗಿ ಹಾಗೂ 2015 ರಿಂದ 2024 ರವರೆಗೆ ಟಾಡಾ ಪ್ರಕರಣದಲ್ಲಿ ಅಪರಾಧಿಯಾಗಿ 9 ವರ್ಷ 10 ತಿಂಗಳು ಮತ್ತು 4 ದಿನಗಳನ್ನು ಕಳೆದಿರುವುದಾಗಿ ಸಲೇಂ ವಿವರಿಸಿದ್ದಾನೆ.

ಇದಲ್ಲದೆ, ಉತ್ತಮ ನಡವಳಿಕೆಗಾಗಿ 3 ವರ್ಷ ಮತ್ತು 16 ದಿನಗಳ ವಿನಾಯಿತಿಯನ್ನು ಗಳಿಸಿದ್ದೇನೆ, ಪೋರ್ಚುಗಲ್‌ನಲ್ಲಿ ವಿಚಾರಣಾಧೀನ ಕೈದಿಯಾಗಿ ಒಂದು ತಿಂಗಳು ಶಿಕ್ಷೆ ಅನುಭವಿಸಿದ್ದೇನೆ ಎಂದು ಸಲೇಂ ಲೆಕ್ಕೆ ನೀಡಿದ್ದಾನೆ.

ಅವಧಿಪೂರ್ವ ಬಿಡುಗಡೆ ಕೋರಿ ತಾನು ಸಲ್ಲಿಸಿದ್ದ ಮನವಿಯನ್ನು ಡಿಸೆಂಬರ್ 10, 2024 ರಂದು ಮುಂಬೈನ ವಿಶೇಷ ನ್ಯಾಯಾಲಯ ತಿರಸ್ಕರಿಸಿದ್ದ ಹಿನ್ನೆಲೆಯಲ್ಲಿ ಸಲೇಂ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Abu_Salem_v_State_of_Maharashtra.pdf
Preview