ಸುದ್ದಿಗಳು

ಸಿಬಿಐ ಮಹಾ ನಿರ್ದೇಶಕ ಜೈಸ್ವಾಲ್ ವಜಾ ಕೋರಿ ಅರ್ಜಿ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಬಾಂಬೆ ಹೈಕೋರ್ಟ್

1985ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಜೈಸ್ವಾಲ್ ಅವರು ಮೇ 25, 2021ರಂದು ಸಿಬಿಐ ನಿರ್ದೇಶಕರಾಗಿ ನೇಮಕಗೊಂಡಿದ್ದರು.

Bar & Bench

ಸಿಬಿಐ ಮಹಾ ನಿರ್ದೇಶಕ ಹುದ್ದೆಗೆ ಸುಬೋಧ್ ಕುಮಾರ್ ಜೈಸ್ವಾಲ್ ಅವರ ನೇಮಕಾತಿ ಮಾಡಿರುವುದನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್‌ ಗುರುವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

ಜುಲೈ 18ರೊಳಗೆ ಉತ್ತರ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ನೇತೃತ್ವದ ಪೀಠ ಪ್ರಕರಣವನ್ನು ಜುಲೈ 28ಕ್ಕೆ ಪಟ್ಟಿ ಮಾಡಿದೆ. 1985ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಜೈಸ್ವಾಲ್ ಅವರು ಮೇ 25, 2021ರಂದು ಸಿಬಿಐ ನಿರ್ದೇಶಕರಾಗಿ ನೇಮಕಗೊಂಡಿದ್ದರು.

ಜೈಸ್ವಾಲ್ ಅವರಿಗೆ ಭ್ರಷ್ಟಾಚಾರ ಪ್ರಕರಣಗಳ ತನಿಖೆಯಲ್ಲಿ ಅನುಭವವಿಲ್ಲ. ಅವರ ವಿಶ್ವಾಸಾರ್ಹತೆ ಅನುಮಾನಾಸ್ಪದವಾಗಿರುವುದರಿಂದ ಸಿಬಿಐ ಮುಖ್ಯಸ್ಥರಾಗಿ ಅವರನ್ನು ಮುಂದುವರೆಸುವುದನ್ನು ಮಹಾರಾಷ್ಟ್ರದ ನಿವೃತ್ತ ಸಹಾಯಕ ಪೊಲೀಸ್ ಕಮಿಷನರ್ ಆಗಿರುವ ರಾಜೇಂದ್ರಕುಮಾರ್ ತ್ರಿವೇದಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಹಾಗೂ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರ ತ್ರಿಸದಸ್ಯ ಸಮಿತಿಯ ಶಿಫಾರಸು ಆಧರಿಸಿ ಸಂಪುಟ ನೇಮಕಾತಿ ಸಮಿತಿಯು ಅವರ ಹೆಸರನ್ನು ಹುದ್ದೆಗೆ ಅನುಮೋದಿಸಿತ್ತು. ಅವರು ಸಿಬಿಐ ಮುಖ್ಯಸ್ಥರಾಗಿ ಎರಡು ವರ್ಷಗಳ ಅಧಿಕಾರಾವಧಿ ಹೊಂದಿದ್ದಾರೆ