Justice Gautam Patel, Bombay High Court
Justice Gautam Patel, Bombay High Court 
ಸುದ್ದಿಗಳು

ಡೆಕ್ಕನ್‌ ಚಾರ್ಜರ್ಸ್‌ಗೆ ₹4,800 ಕೋಟಿ ಪಾವತಿಸಲು ಬಿಸಿಸಿಐಗೆ ಆದೇಶಿಸಿದ್ದ ನಿರ್ಣಯ ತಿರಸ್ಕರಿಸಿದ ಬಾಂಬೆ ಹೈಕೋರ್ಟ್‌

Bar & Bench

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಿಂದ (ಐಪಿಎಲ್‌) ಡೆಕ್ಕನ್‌ ಚಾರ್ಜರ್ಸ್‌ ತಂಡವನ್ನು ಕಾನೂನುಬಾಹಿರವಾಗಿ ವಜಾ ಮಾಡಲಾಗಿದ್ದರಿಂದ ಡೆಕ್ಕನ್‌ ಕ್ರಾನಿಕಲ್‌ ಹೋಲ್ಡಿಂಗ್ಸ್‌ ಲಿಮಿಟೆಡ್‌ಗೆ (ಡಿಸಿಎಚ್‌ಎಲ್‌) ರೂ. 4,800 ಕೋಟಿ ರೂಪಾಯಿ ಪಾವತಿಸುವಂತೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ನಿರ್ದೇಶಿಸಿದ್ದ ಮಧ್ಯಸ್ಥಿಕೆದಾರರ ನಿರ್ಣಯವನ್ನು ಬುಧವಾರ ಬಾಂಬೆ ಹೈಕೋರ್ಟ್‌ ಬದಿಗೆ ಸರಿಸಿದೆ.

ಡಿಸಿಎಚ್‌ಎಲ್‌ನ ಫ್ರಾಂಚೈಸಿ ತಂಡವಾದ ಡೆಕ್ಕನ್‌ ಚಾರ್ಜರ್ಸ್‌ಗೆ ಬಿಸಿಸಿಐ ವಜಾ ನೋಟಿಸ್‌ ನೀಡಿದ್ದು ಕಾನೂನುಬಾಹಿರವೇ ಎಂಬುದನ್ನು ನಿರ್ಧರಿಸಲು 2012ರಲ್ಲಿ ಏಕೈಕ ಮಧ್ಯಸ್ಥಿಕೆದಾರರನ್ನಾಗಿ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಸಿ ಕೆ ಠಕ್ಕರ್‌ ಅವರನ್ನು ನೇಮಿಸಲಾಗಿತ್ತು. ಅವರು ನೀಡಿದ್ದ ಆದೇಶವನ್ನು ನ್ಯಾ. ಗೌತಮ್‌ ಪಟೇಲ್‌ ಬದಿಗೆ ಸರಿಸಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ಮಧ್ಯಸ್ಥಿಕೆದಾರರಾದ ಠಕ್ಕರ್‌ ನಿರ್ಣಯ ಹೊರಡಿಸಿದ್ದು, ಅದರ ಬೆನ್ನಿಗೇ ತೀರ್ಪನ್ನು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

ಐಪಿಎಲ್‌ನಿಂದ ಡೆಕ್ಕನ್‌ ಚಾರ್ಜರ್ಸ್‌ ತಂಡವನ್ನು ವಜಾ ಮಾಡಿದ್ದು ಕಾನೂನುಬಾಹಿರ ಎಂದಿದ್ದ ಮಧ್ಯಸ್ಥಿಕೆದಾರರು ಡಿಸಿಎಚ್‌ಎಲ್‌ಗೆ ರೂ. 4,814.67 ಕೋಟಿ ಪರಿಹಾರದ ಜೊತೆಗೆ 2012ರಿಂದ ಅನ್ವಯವಾಗುವಂತೆ ಶೇ. 10ರಷ್ಟು ಬಡ್ಡಿ ಪಾವತಿಸುವಂತೆ ಕಳೆದ ವರ್ಷ ಆದೇಶಿಸಿದ್ದರು ಎಂದು ವರದಿಯಾಗಿತ್ತು. 2012ರಲ್ಲಿ ಐದನೇ ಆವೃತ್ತಿಯ ಐಪಿಎಲ್‌ ನಡೆಯುತ್ತಿದ್ದಾಗ ವಿವಾದ ಸೃಷ್ಟಿಯಾಗಿತ್ತು.

ಡಿಎಚ್‌ಸಿಎಲ್‌ಗೆ ಫ್ರಾಂಚೈಸಿ ವಜಾ ನೋಟಿಸ್‌ ಅನ್ನು ಬಿಸಿಸಿಐ 2012ರ ಸೆಪ್ಟೆಂಬರ್‌ನಲ್ಲಿ ನೀಡಿತ್ತು. ಮೊದಲಿಗೆ ವಜಾ ಆದೇಶಕ್ಕೆ ಬಾಂಬೆ ಹೈಕೋರ್ಟ್‌ ತಡೆ ನೀಡಿತ್ತು. ಡಿಸಿಎಚ್‌ಎಲ್‌ ರೂ. 100 ಕೋಟಿ ಬ್ಯಾಂಕ್‌ ಭದ್ರತೆ ಒದಗಿಸಲು ವಿಫಲವಾದ ಹಿನ್ನೆಲೆಯಲ್ಲಿ 2012ರ ಅಕ್ಟೋಬರ್‌ನಲ್ಲಿ ತಡೆಯಾಜ್ಞೆ ಅಂತಿಮಗೊಳಿಸಲಾಗಿತ್ತು ಎಂದು ʼಹಿಂದೂಸ್ತಾನ್‌ ಟೈಮ್ಸ್‌ʼ ದೈನಿಕ ವರದಿ ಮಾಡಿತ್ತು.

ಆ ಬಳಿಕ ಮಧ್ಯಸ್ಥಿಕೆ ಪ್ರಕ್ರಿಯೆಯನ್ನು ಡಿಎಚ್‌ಸಿಎಲ್‌ ಆರಂಭಿಸಿದ್ದು, ಏಕೈಕ ಮಧ್ಯಸ್ಥಿಕೆದಾರರನ್ನಾಗಿ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಸಿ ಕೆ ಠಕ್ಕರ್‌ ಅವರನ್ನು ನೇಮಿಸಲಾಗಿತ್ತು. ಠಕ್ಕರ್‌ ಅವರು ರೂ. 4,800 ಕೋಟಿಯನ್ನು ಪರಿಹಾರವನ್ನಾಗಿ ಡಿಎಚ್‌ಸಿಎಲ್‌ಗೆ ಪಾವತಿಸುವಂತೆ ಬಿಸಿಸಿಐಗೆ ನಿರ್ದೇಶಿಸಿದ್ದರು. ಈ ಆದೇಶವನ್ನು ಬಾಂಬೆ ಹೈಕೋರ್ಟ್‌ಗೆ ಈಗ ಬದಿಗೆ ಸರಿಸಿದೆ.