KK Venugopal 
ಸುದ್ದಿಗಳು

ಪೋಕ್ಸೋ ಲೈಂಗಿಕ ದೌರ್ಜನ್ಯ ಕುರಿತ ಬಾಂಬೆ ಹೈಕೋರ್ಟ್ ವಿವಾದಾತ್ಮಕ ತೀರ್ಪು: ಸುಪ್ರೀಂ ಕೋರ್ಟ್‌ನಲ್ಲಿ ಎಜಿ ತೀವ್ರ ಆಕ್ಷೇಪ

"ಇದೊಂದು ಅತಿರೇಕದ ಆದೇಶ... ಇದರರ್ಥ ಯಾರಾದರೂ ಶಸ್ತ್ರಚಿಕಿತ್ಸೆಯ ಕೈಗವಸು ಧರಿಸಿ ಮಗುವನ್ನು ಶೋಷಣೆ ಮಾಡಬಹುದು ಮತ್ತು ತನಿಖೆಯಿಲ್ಲದೆ ತಪ್ಪಿಸಿಕೊಳ್ಳಬಹುದು" ಎಂದು ಎಜಿ ಹೇಳಿದರು.

Bar & Bench

ಬಾಲಕಿಯ ಬಟ್ಟೆ ತೆಗೆಯದೆ ಆಕೆಯ ಸ್ತನ ಮುಟ್ಟಿದರೆ ಅದನ್ನು ಪೊಕ್ಸೊ ಕಾಯಿದೆಯ ಸೆಕ್ಷನ್ 7ರ ಅಡಿ ಲೈಂಗಿಕ ದೌರ್ಜನ್ಯ ಎಂದು ವ್ಯಾಖ್ಯಾನಿಸಲಾಗದು ಎಂಬುದಾಗಿ ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠ ನೀಡಿದ್ದ ತೀರ್ಪಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌ ಪ್ರಕರಣದ ಆರೋಪಿಗಳಿಗಾಗಿ ವಕೀಲರನ್ನು ನೇಮಿಸಲು ತನ್ನ ಕಾನೂನು ಸೇವೆಗಳ ಸಮಿತಿಗೆ ಸೂಚಿಸಿದೆ.

ಸುಪ್ರೀಂಕೋರ್ಟ್‌ನ ಯಾವುದೇ ವಕೀಲರು ಅಥವಾ ಅಡ್ವೊಕೇಟ್‌ ಆನ್‌ ರೆಕಾರ್ಡ್‌ಗಳು ಆರೋಪಿಯನ್ನು ಪ್ರತಿನಿಧಿಸುವಂತೆ ನ್ಯಾಯಮೂರ್ತಿಗಳಾದ ಯು ಯು ಲಲಿತ್ ಮತ್ತು ಅಜಯ್ ರಾಸ್ತೋಗಿ ಅವರಿದ್ದ ಪೀಠ ಕರೆ ನೀಡಿತು.

ಜನವರಿ 19ರಂದು ಹೈಕೋರ್ಟ್‌ ನೀಡಿದ್ದ ತೀರ್ಪಿನ ವಿರುದ್ಧ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌, ಮಹಾರಾಷ್ಟ್ರ ಸರ್ಕಾರ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಪೀಠವು ನಡೆಸಿತು. ಇಂದು ವಾದ ಮಂಡಿಸಿದ ಎಜಿ ವೇಣುಗೋಪಾಲ್‌ ನ್ಯಾಯಾಲಯ ನೀಡಿದ ಆದೇಶದ ನಂತರ ನಾನು ಅರ್ಜಿಯನ್ನು ಸಲ್ಲಿಸದೇ ಇರಲಾಗಲಿಲ್ಲ. ಇದು ಅತಿರೇಕದ ಆದೇಶ ಎಂದರು.

ಇದರರ್ಥ ಯಾರಾದರೂ ಶಸ್ತ್ರಚಿಕಿತ್ಸೆಯ ಕೈಗವಸು ಧರಿಸಿ ಮಗುವನ್ನು ಶೋಷಣೆ ಮಾಡಬಹುದು ಮತ್ತು ತನಿಖೆಯಿಲ್ಲದೆ ತಪ್ಪಿಸಿಕೊಳ್ಳಬಹುದು. ಆರೋಪಿ ಸಲ್ವಾರ್‌ ಎಳೆಯಲು ಯತ್ನಿಸಿದರೂ ಜಾಮೀನು ನೀಡಲಾಗಿದೆ. ಈ ತೀರ್ಪು ಮಹಾರಾಷ್ಟ್ರದಲ್ಲಿ ನ್ಯಾಯಾಧೀಶರಿಗೆ ಪೂರ್ವನಿದರ್ಶವಾಗುತ್ತದೆ. ಲೈಂಗಿಕ ದೌರ್ಜನ್ಯದ ವ್ಯಾಖ್ಯಾನಕ್ಕೆ ಉತ್ತಮ ವ್ಯಾಖ್ಯಾನದ ಅಗತ್ಯವಿದೆ ಎಂದು ಅವರು ಹೇಳಿದರು. ಕಳೆದ ಒಂದು ವರ್ಷದಲ್ಲಿ ಪೋಕ್ಸೊ ಕಾಯಿದೆಯಡಿ 43,000 ಅಪರಾಧಗಳನ್ನು ದಾಖಲಿಸಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಗಮನಸೆಳೆದರು.

ಪ್ರಕರಣದಲ್ಲಿ ಹಿರಿಯ ವಕೀಲ ಸಿದ್ಧಾರ್ಥ ದವೆ ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ ನೇಮಕ ಮಾಡಿದ್ದರೂ ಆರೋಪಿಗಳನ್ನು ಪ್ರತಿನಿಧಿಸುವವರು ಯಾರೂ ಇಲ್ಲ ಎಂಬುದನ್ನು ನ್ಯಾಯಾಲಯದ ಗಮನಿಸಿತು.

"ಎಲ್ಲಾ ಪ್ರಕರಣಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಶೋಕಾಸ್ ನೋಟಿಸ್ ನೀಡಲಾಗಿದೆ. ಆದರೆ, ಆರೋಪಿಗಳ ಪರವಾಗಿ ಯಾರೂ ಹಾಜರಾಗಿಲ್ಲ. ಆಗಸ್ಟ್ 6ರ ಹೊತ್ತಿಗೆ ವಕೀಲ ದವೆ ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ ನೇಮಿಸಲಾಗಿದೆ. ಆರೋಪಿಯನ್ನು ಪ್ರತಿನಿಧಿಸದ ಕಾರಣ, ಸುಪ್ರೀಂಕೋರ್ಟ್‌ನ ಯಾವುದೇ ವಕೀಲರು ಆರೋಪಿಗಳ ಪರವಾಗಿ ಹಾಜರಾಗುವಂತೆ ಮಾಡಲು ನಾವು ಸುಪ್ರೀಂಕೋರ್ಟ್‌ ಕಾನೂನು ಸೇವಾ ಸಮಿತಿ ನಿರ್ದೇಶಿಸುತ್ತೇವೆ” ಎಂದು ಪೀಠ ತಿಳಿಸಿತು. ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 14 ರಂದು ನಡೆಯಲಿದೆ.

ಹನ್ನೆರಡು ವರ್ಷದ ಬಾಲಕಿಯ ಬಟ್ಟೆ ತೆಗೆಯದೆ ಆಕೆಯ ಸ್ತನ ಮುಟ್ಟಿದರೆ ಅದು ಐಪಿಸಿ ಸೆಕ್ಷನ್ 354 ರ ಅಡಿಯಲ್ಲಿ ಮಹಿಳೆಯ ಘನತೆಗೆ ಧಕ್ಕೆ ತರುವ ವ್ಯಾಖ್ಯಾನದಡಿ ಮಾತ್ರ ಬರುತ್ತದೆ ಎಂದು ಬಾಂಬೆ ಹೈಕೋರ್ಟ್‌ ತಿಳಿಸಿತ್ತು. ಪೊಕ್ಸೊ ಕಾಯಿದೆಯ ಸೆಕ್ಷನ್‌ 8ರ ಅಡಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದವರಿಗೆ 3ರಿಂದ 5 ವರ್ಷ ಶಿಕ್ಷೆ ವಿಧಿಸಬಹುದಾಗಿದ್ದರೆ ಐಪಿಸಿ ಸೆಕ್ಷನ್‌ 354 ರ ಅಡಿಯಲ್ಲಿ ಜೈಲು ಶಿಕ್ಷೆಯ ಅವಧಿ ಕೇವಲ 1ರಿಂದ 5 ವರ್ಷಗಳು.

ಕಠಿಣ ಸ್ವರೂಪದ ಶಿಕ್ಷೆ ನೀಡುವಾಗ ಗಂಭೀರ ಆರೋಪಗಳು ಮತ್ತು ದೃಢ ಪುರಾವೆಗಳ ಅಗತ್ಯವಿದೆ ಎಂದು ಬಾಂಬೆ ಹೈಕೋರ್ಟ್‌ ಅಭಿಪ್ರಾಯಪಟ್ಟಿತ್ತು. ಅಪರಾಧಕ್ಕೆ ವಿಧಿಸಲಾಗುವ ಶಿಕ್ಷೆ ಅಪರಾಧದ ಗಂಭೀರತೆಗೆ ತಕ್ಕನಾಗಿರಬೇಕು ಎಂದು ಹೇಳಿತ್ತು.

ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರು “ಇದು (ಬಾಂಬೆ ಹೈಕೋರ್ಟ್‌ನ) ಬಹಳ ಗೊಂದಲಮಯ ತೀರ್ಪು” ಎಂದು ನ್ಯಾಯಾಲಯಕ್ಕೆ ತಿಳಸಿದ ನಂತರ ಅಂದಿನ ಸುಪ್ರೀಂಕೋರ್ಟ್‌ ಮುಖ್ಯನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರಿದ್ದ ಪೀಠ ತೀರ್ಪಿಗೆ ಜನವರಿ 27 ರಂದು ತಡೆಯಾಜ್ಞೆ ನೀಡಿತ್ತು.