A1
ಸುದ್ದಿಗಳು

ಉದ್ಯೋಗಸ್ಥೆ ಒಂಟಿ ತಾಯಿಗೆ ಮಗು ದತ್ತು ಪಡೆಯಲು ಅನುಮತಿ ನಕಾರ: ಸಿವಿಲ್ ನ್ಯಾಯಾಲಯಕ್ಕೆ ಬಾಂಬೆ ಹೈಕೋರ್ಟ್ ಛೀಮಾರಿ

ಉದ್ಯೋಗನಿರತ ಒಂಟಿ ತಾಯಿಗೆ ಮಗುವಿನ ಬಗ್ಗೆ ಸೂಕ್ತ ಕಾಳಜಿ ಮತ್ತು ಗಮನ ನೀಡಲು ಅಸಾಧ್ಯವಾಗುತ್ತದೆ ಎಂಬುದು ಸಿವಿಲ್ ನ್ಯಾಯಾಲಯದ ತರ್ಕವಾಗಿತ್ತು.

Bar & Bench

ವಿಚ್ಛೇದಿತ ಮಹಿಳೆ ʼಉದ್ಯೋಗಸ್ಥೆʼಯಾಗಿರುವುದರಿಂದ ಮಗುವಿನ ಬಗ್ಗೆ ಸೂಕ್ತ ಕಾಳಜಿ ಮತ್ತು ಗಮನ ನೀಡಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕಾಗಿ ಮಗುವನ್ನ ದತ್ತು ತೆಗೆದುಕೊಳ್ಳಲು ಅನುಮತಿ ನಿರಾಕರಿಸಿದ್ದ ಸಿವಿಲ್‌ ನ್ಯಾಯಾಲಯದ ಆದೇಶವನ್ನು ಬಾಂಬೆ ಹೈಕೋರ್ಟ್‌ ರದ್ದುಗೊಳಿಸಿದೆ [ಶಬನಮಜಹಾನ್ ಮೊಯಿನುದ್ದೀನ್ ಅನ್ಸಾರಿ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ಮಹಾರಾಷ್ಟ್ರದ ಭೂಸಾವಲ್‌ನ ಸಿವಿಲ್‌ ನ್ಯಾಯಾಲಯ ನೀಡಿದ ಕಾರಣ ದುಡಿಯುವ ಮಹಿಳೆಗೆ ಸಂಬಂಧಿಸಿದ ಮಧ್ಯಕಾಲೀನ ಯುಗದ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ನ್ಯಾ. ಗೌರಿ ಗೋಡ್ಸೆ ಅವರಿದ್ದ ಏಕಸದಸ್ಯ ಪೀಠ ಆದೇಶದ ವೇಳೆ ಹೇಳಿತು.

“ಗೃಹಿಣಿಯಾಗಿರುವ ಜೈವಿಕ ತಾಯಿ ಮತ್ತು ಉದ್ಯೋಗಸ್ಥೆಯಾದ ದತ್ತು ಪಡೆಯುಲಿರುವ ಒಂಟಿ ತಾಯಿ ನಡುವೆ ಸಕ್ಷಮ ನ್ಯಾಯಾಲಯ ಮಾಡಿದ ಹೋಲಿಕೆ ಕುಟುಂಬಗಳ ಬಗೆಗಿನ ಮಧ್ಯಕಾಲೀನ ಯುಗದ ಸಂಪ್ರದಾಯವಾದಿ ಪರಿಕಲ್ಪನೆಗಳ ಮನಸ್ಥಿತಿಯನ್ನು ಬಿಂಬಿಸುತ್ತದೆ" ಎಂದು ಪೀಠ ಮಂಗಳವಾರ ನೀಡಿದ ಆದೇಶದಲ್ಲಿ ಅಸಮಾಧಾನ ವ್ಯಕ್ತಪಡಿಸಿತು.

ಒಂಟಿ ಪೋಷಕರು ದತ್ತು ಪೋಷಕರಾಗಲು ಕಾನೂನು ಮಾನ್ಯತೆ ನೀಡಿರುವಾಗ ಸಿವಿಲ್‌ ನ್ಯಾಯಾಲಯದ ನಡೆ ಕಾನೂನಿನ ಉದ್ದೇಶವನ್ನು ಮಣಿಸುತ್ತದೆ ಎಂದು ಹೈಕೋರ್ಟ್‌ ಒತ್ತಿಹೇಳಿತು.  

ಸಾಮಾನ್ಯವಾಗಿ, ಕೆಲವು ಅಪರೂಪದ ಸಂದರ್ಭಗಳನ್ನು ಹೊರತುಪಡಿಸಿ ಒಂಟಿ ಪೋಷಕರು ದುಡಿಯಲೇ ಬೇಕಿರುತ್ತದೆ. ಆಗೆಲ್ಲಾ ಕೆಲಸ ಮಾಡುತ್ತಿರುವ ಕಾರಣಕ್ಕೆ ಒಂಟಿ ಪೋಷಕರು ದತ್ತು ಪೋಷಕರಾಗಲು ಅನರ್ಹರು ಎಂದು ತೀರ್ಪು ನೀಡಬೇಕಾದ ಪ್ರಸಂಗ ಬರುತ್ತದೆ ಎಂದು ಹೇಳಿದ ನ್ಯಾಯಾಲಯ ಕೆಳ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿ ಮಗುವನ್ನು ದತ್ತು ತೆಗೆದುಕೊಳ್ಳಲು ಮಹಿಳೆಗೆ ಅವಕಾಶ ಮಾಡಿಕೊಟ್ಟಿತು.