ಮೂರು ದಶಕಗಳ ಹಿಂದೆ ನಡೆದಿದ್ದ ಷೇರು ಮಾರುಕಟ್ಟೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಮಾಜಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಹಾಗೂ ಅದರ ಮೂವರು ಹಾಲಿ ಪೂರ್ಣಾವಧಿ ನಿರ್ದೇಶಕರು ಹಾಗೂ ಇಬ್ಬರು ಬಿಎಸ್‌ಇ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮುಂಬೈ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಬಾಂಬೆ ಹೈಕೋರ್ಟ್ ಮಂಗಳವಾರ ತಡೆ ನೀಡಿದೆ.
ಆದೇಶ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದ ಬುಚ್ ಹಾಗೂ ಉಳಿದಿಬ್ಬರಿಗೆ ನ್ಯಾ. ಎಸ್ ಜಿ ಡಿಗೆ ಅವರು ಪರಿಹಾರ ನೀಡಿದ್ದಾರೆ.
ವಿವರವಾಗಿ ಪರಿಶೀಲಿಸದೆ ಅಥವಾ ಬುಚ್ ಹಾಗೂ ಉಳಿದವರ ಪಾತ್ರ ಇದೆಯೇ ಎಂಬುದನ್ನು ಗಮನಿಸದೆಯೇ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯ ಯಾಂತ್ರಿಕವಾಗಿ ಆದೇಶ ನೀಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಹೈಕೋರ್ಟ್ ತಿಳಿಸಿದೆ.
ದೂರುದಾರರು ಪ್ರತಿಕ್ರಿಯೆಗೆ ಸಮಯಾವಕಾಶ ಕೋರಿದ್ದರು. ಎಲ್ಲಾ ಕಕ್ಷಿದಾರರ ವಾದ ಆಲಿಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ವಿವರವಾಗಿ ಪರಿಶೀಲಿಸದೆಯೇ ಅಥವಾ ಅರ್ಜಿದಾರರ ಪಾತ್ರ ಗಮನಿಸದೆಯೇ ಯಾಂತ್ರಿವಾಗಿ ಆದೇಶ ಹೊರಡಿಸಿರುವಂತೆ ತೋರುತ್ತಿದೆ. ಹೀಗಾಗಿ ಆದೇಶಕ್ಕೆ ತಡೆ ನೀಡಲಾಗಿದೆ ಎಂದು ಹೈಕೋರ್ಟ್ ವಿವರಿಸಿದೆ.
ವಿಶೇಷ ನ್ಯಾಯಾಧೀಶರು ವಿವರವಾಗಿ ಪರಿಶೀಲಿಸದೆ ಯಾಂತ್ರಿಕವಾಗಿ ಆದೇಶ ನೀಡಿದ್ದಾರೆ.ಬಾಂಬೆ ಹೈಕೋರ್ಟ್
1994ರಲ್ಲಿ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಕಂಪನಿಯೊಂದಕ್ಕೆ ಸಂಬಂಧಿಸಿದ ಹಣಕಾಸಿನ ವಂಚನೆ ಮತ್ತು ನಿಯಂತ್ರಣ ಮಾನದಂಡಗಳನ್ನು ಉಲ್ಲಂಘಿಸಿದ ಆರೋಪ ಕುರಿತಂತೆ ವಿಶೇಷ ನ್ಯಾಯಾಲಯ ಆದೇಶ ನೀಡಿತ್ತು. ಬುಚ್ ಅವರಲ್ಲದೆ ಸೆಬಿಯ ಮೂವರು ಹಾಲಿ ಪೂರ್ಣಾವಧಿ ನಿರ್ದೇಶಕರಾದ ಅಶ್ವನಿ ಭಾಟಿಯಾ, ಅನಂತ್ ನಾರಾಯಣ ಜಿ ಮತ್ತು ಕಮಲೇಶ್ ಚಂದ್ರ ವರ್ಷ್ನಿ ಹಾಗೂ ಇಬ್ಬರು ಬಿಎಸ್ಇ ಅಧಿಕಾರಿಗಳಾದ ಪ್ರಮೋದ್ ಅಗರ್ವಾಲ್ ಮತ್ತು ಸುಂದರರಾಮನ್ ರಾಮಮೂರ್ತಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳುವಂತೆ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯ ಸೂಚಿಸಿತ್ತು.
ಸೆಬಿ ಅಧಿಕಾರಿಗಳ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಅಧಿಕಾರಿಗಳ ಪ್ರತಿನಿಧಿಯಾಗಿ ಹಿರಿಯ ವಕೀಲ ಅಮಿತ್ ದೇಸಾಯಿ, ಬುಚ್ ಪರವಾಗಿ ಮತ್ತೋರ್ವ ಹಿರಿಯ ವಕೀಲ ಸುದೀಪ್ ಪಾಸ್ಬೋಲಾ ವಾದ ಮಂಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯ ಆದೇಶಕ್ಕೆ ತಡೆ ನೀಡಿತು.