ತನ್ನ 12 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದ 54 ವರ್ಷದ ವ್ಯಕ್ತಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠ ಇತ್ತೀಚೆಗೆ ಎತ್ತಿಹಿಡಿದಿದೆ.
ಈ ಎಫ್ಐಆರ್ ಮಗಳ ತಾಯಿಯ ಆಜ್ಞೆಯ ಮೇರೆಗೆ ದಾಖಲಿಸಲಾದ ಸುಳ್ಳು ಮೊಕದ್ದಮೆಯಲ್ಲ ಎಂದು ನ್ಯಾಯಮೂರ್ತಿಗಳಾದ ವಿಭಾ ಕಂಕಣವಾಡಿ ಮತ್ತು ಅಭಯ್ ವಾಘವಾಸೆ ಅವರಿದ್ದ ವಿಭಾಗೀಯ ಪೀಠ ಹೇಳಿದೆ.
ಸ್ವಂತ ಮಗಳ ಮೇಲೆ ಅತ್ಯಾಚಾರ ಎಸಗಿರುವುದು ಘೋರ ಅಪರಾಧವಾಗಿದ್ದು ಶಿಕ್ಷೆ ನೀಡಿರುವ ತೀರ್ಪು ಸಂಪೂರ್ಣ ಕಾನೂನುಬದ್ಧವಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ತನ್ನ ಅಪ್ರಾಪ್ತ ವಯಸ್ಕ ಮಗಳ ಮೇಲೆ ಅತ್ಯಾಚಾರವೆಸಗಿದ್ದಕ್ಕಾಗಿ ಏಪ್ರಿಲ್ 2016ರಲ್ಲಿ ಶಿಕ್ಷೆ ವಿಧಿಸಿದ್ದ ಪೋಕ್ಸೊ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ರಾಜು ಸೂರ್ಯವಂಶಿ ಎಂಬಾತ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ.
ಬಾಲಕಿಯು ಮೇಲ್ಮನವಿದಾರನ ಮಗಳಾಗಿರುವುದರಿಂದ ಆಕೆ ಒತ್ತಡಕ್ಕೆ ಒಳಗಾಗಿ ಘಟನೆಯ ಸಮಯದಲ್ಲಿ ಅಳು, ಪ್ರತಿರೋಧ ತೋರದಿರಬಹುದು ಎಂದು ಪೀಠ ಅಭಿಪ್ರಾಯಪಟ್ಟಿದೆ.
"ಅಂತಹ ಹುಡುಗಿಯರ ಮಾನಸಿಕ ಸ್ಥಿತಿಯನ್ನು ಪರಿಗಣಿಸಬೇಕಿದ್ದು ಆ ಪರಿಸ್ಥಿತಿಯಲ್ಲಿ ಎಲ್ಲಾ ಹುಡುಗಿಯರು ಒಂದೇ ರೀತಿ ವರ್ತಿಸುವುದಿಲ್ಲ ಎಂಬ ಅಂಶವನ್ನು ಪರಿಗಣಿಸಬೇಕು. ಇದು ಕಠಿಣ ಪರಿಸ್ಥಿತಿಯನ್ನು ಎದುರಿಸುವ ನಿರ್ದಿಷ್ಟ ವ್ಯಕ್ತಿಯ ಮನೋಧರ್ಮವನ್ನು ಅವಲಂಬಿಸಿರುತ್ತದೆ" ಎಂದು ಪೀಠ ನುಡಿದಿದೆ.
ತನ್ನ ಪತ್ನಿಯ ‘ವಿವಾಹೇತರ ಸಂಬಂಧʼತನಗೆ ತಿಳಿದಾಗಿನಿಂದ ಆಕೆ ತನ್ನ ಮಗಳನ್ನು ಸುಳ್ಳು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸುವಂತೆ ಒತ್ತಾಯಿಸಿದ್ದಾಳೆ ಎಂಬ ಮೇಲ್ಮನವಿದಾರನ ವಾದವನ್ನು ನ್ಯಾಯಾಲಯ ತಳ್ಳಿಹಾಕಿತು.
ಸೇಡು ತೀರಿಸಿಕೊಳ್ಳಲು ತಾಯಿ ಮಗಳನ್ನು ಇಂತಹ ಸ್ಥಿತಿಗೆ ದೂಡುವುದಿಲ್ಲ. ಜೊತೆಗೆ ತಂದೆಯ ವಿರುದ್ಧ ನಿಲ್ಲುವಂತೆ ಮಗಳನ್ನು ಕೇಳುವುದಿಲ್ಲ ಎಂದ ಪೀಠ, ತಂದೆಯ ಮನವಿಯನ್ನು ವಜಾಗೊಳಿಸಿತು.