ದಂಪತಿ ಶಾಂತಿಯುತವಾಗಿ ಬದುಕಲು ಅನುಕೂಲಕರ ವಾತಾವರಣ ಸೃಷ್ಟಿಸುವುದು ಪತಿ- ಪತಿಯ ಪರಸ್ಪರ ಕರ್ತವ್ಯವಾಗಿದ್ದು ಗಂಡನನ್ನು ಹೆಂಡತಿಗಿಂತಲೂ ಉನ್ನತ ಸ್ಥಾನದಲ್ಲಿಡುವುದು ಸ್ವೀಕಾರಾರ್ಹವಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಈಚೆಗೆ ತಿಳಿಸಿದೆ [ದೀಪನ್ವಿತಾ ದಾಸ್ ಮತ್ತು ಮೊಲೊಯ್ ದಾಸ್ ನಡುವಣ ಪ್ರಕರಣ].
ಸಂತೋಷಕರ ದಾಂಪತ್ಯಕ್ಕೆ ಹೆಂಡತಿ ಹಿತಕರ ವಾತಾವರಣ ಸೃಷ್ಟಿಸಿದಾಗ ಪತಿ ಉತ್ತಮ ಭೂಮಿಕೆ ಒದಗಿಸುತ್ತಾನೆ ಎಂಬ ಕೌಟುಂಬಿಕ ನ್ಯಾಯಾಲಯದ ಅಭಿಪ್ರಾಯಕ್ಕೆ ನ್ಯಾಯಮೂರ್ತಿಗಳಾದ ಹರೀಶ್ ಟಂಡನ್ ಮತ್ತು ಮಧುರೇಶ್ ಪ್ರಸಾದ್ ಅವರಿದ್ದ ಪೀಠ ಆಕ್ಷೇಪ ವ್ಯಕ್ತಪಡಿಸಿತು.
ಈ ಅವಲೋಕನ ಪುರಾತನ ಕಲ್ಪನೆಯಾಗಿದ್ದು ಸಮಾಜ ಪ್ರಗತಿಯಾಗುತ್ತಿದ್ದಂತೆ ಇದು ಗೌಣವಾಗಿದೆ. ವಿಭಿನ್ನ ವಾತಾವರಣದಲ್ಲಿ ಬೆಳೆದ ಇಬ್ಬರು ಏಕಮುಖವಾಗಿರದಂತಹ ಅನುಕೂಲಕರ ವಾತಾವರಣ ಸೃಷ್ಟಿಸಲು ಪರಸ್ಪರ ಅಥವಾ ಸಾಮೂಹಿಕ ಕರ್ತವ್ಯ ನಿರ್ವಹಿಸಬೇಕು" ಎಂದು ಹೈಕೋರ್ಟ್ ತಿಳಿಸಿತು.
ವೈವಾಹಿಕ ಜೀವನದಲ್ಲಿ ಸಾಮಾನ್ಯವಾಗಿರುವ ಕ್ಷುಲ್ಲಕ ವಿಷಯಗಳನ್ನು ಪರಿಹರಿಸುವುದು ಗಂಡ ಮತ್ತು ಹೆಂಡತಿ ಇಬ್ಬರ ಸಾಮೂಹಿಕ ಕರ್ತವ್ಯ ಎಂದು ಪೀಠ ಹೇಳಿದೆ.
"ಭಾರತದ ಸಂವಿಧಾನ ಕೂಡ ಲಿಂಗ ಸಮಾನತೆಗೆ ಮನ್ನಣೆ ನೀಡಿದ್ದು ಗಂಡನನ್ನು ಹೆಂಡತಿಗಿಂತ ಮೇಲಿರಿಸುವುದು ಸ್ವೀಕಾರಾರ್ಹವಲ್ಲ" ಎಂದು ಪೀಠ ಹೇಳಿತು.
ಕೌಟುಂಬಿಕ ನ್ಯಾಯಾಲಯ ವಾಸ್ತವಾಂಶಗಳನ್ನು ಭಾವನಾತ್ಮಕವಾಗಿ ಮತ್ತು ಅನುಚಿತ ರೀತಿಯಲ್ಲಿ ಮೆಚ್ಚಿಕೊಂಡಿದೆ ಎಂದು ಹೈಕೋರ್ಟ್ ಟೀಕಿಸಿತು.
ತೀರ್ಪಿನ ಅವಲೋಕನಗಳು ಒಪ್ಪುವಂತೆ ಇಲ್ಲವಾದ್ದರಿಂದ ಅದನ್ನು ಬದಿಗೆ ಸರಿಸಲಾಗಿದೆ. ಆದ್ದರಿಂದ ಪರಿಹಾರ ಕೋರಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದ್ದು ಹೆಂಡತಿ ವೈವಾಹಿಕ ಹಕ್ಕುಗಳ ಮರು ಸ್ಥಾಪನೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿತು.
ತನ್ನ ಹೆಂಡತಿ ತನ್ನನ್ನು ನಿಂದಿಸುತ್ತಾಳೆ. ತನ್ನ ತಾಯಿಯನ್ನು ಹೊಡೆಯುತ್ತಾಳೆ. ತನ್ನ ಮತ್ತು ತನ್ನ ಕುಟುಂಬದ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಕ್ರೌರ್ಯ ಮೆರೆದಿದ್ದಾಳೆ ಎಂದು ಪತಿ ದೂರಿದ್ದರು.
ಆದರೆ ಈ ಹೇಳಿಕೆಯನ್ನು ಪತ್ನಿ ವಿರೋಧಿಸಿದ್ದರು. ಗಂಡ ಮತ್ತು ಆತನ ಕುಟುಂಬದಿಂದ ತಾನು ಮಾನಸಿಕ ಕ್ರೌರ್ಯಕ್ಕೆ ಒಳಗಾಗಿದ್ದಾಗಿ ವಾದಿಸಿದ್ದರು.
ಹೆಂಡತಿಯ ವಿರುದ್ಧ ತೀರ್ಪು ನೀಡಿದ ಕೌಟುಂಬಿಕ ನ್ಯಾಯಾಲಯ ಪುರಾವೆಗಳನ್ನು ವಿಶ್ಲೇಷಿಸಿದ ರೀತಿಯನ್ನು ಹೈಕೋರ್ಟ್ ಚರ್ಚಿಸಿತು. ಪತ್ನಿ ಮೊದಲು ವಿವಾಹ ವಿಚ್ಛೇದನಕ್ಕೆ ಮನವಿ ಮಾಡಿದ್ದರೂ ನಂತರ ವೈವಾಹಿಕ ಹಕ್ಕು ಮರುಸ್ಥಾಪಿಸುವಂತೆ ಕೋರಿದ್ದರು.
ಪತ್ನಿ ಆರಂಭದಲ್ಲಿ ವೈವಾಹಿಕ ಹಕ್ಕುಗಳನ್ನು ಮರುಸ್ಥಾಪಿಸಲು ಅರ್ಜಿ ಸಲ್ಲಿಸಲಿಲ್ಲ ಎಂಬ ಆಧಾರದ ಮೇಲೆ ಇಂತಹ ತೀರ್ಪು ನೀಡಿದ್ದು ತಪ್ಪು ಎಂದು ಹೈಕೋರ್ಟ್ ತಿಳಿಸಿದೆ.
ಪತಿ ವೈವಾಹಿಕ ಮನೆಯಿಂದ ಹೊರಹೋಗುವ ಬಗ್ಗೆ ಪತ್ನಿಯಷ್ಟೇ ದೂರು ದಾಖಲಿಸಿರುವುದರಿಂದ ಪತ್ನಿ ತನ್ನ ಅತ್ತೆ ಮಾವ ಹಾಗೂ ಪತಿಯ ವಿರುದ್ಧ ಪ್ರಕರಣ ದಾಖಲಿಸಿರುವುದು ಕ್ರೌರ್ಯ ಎಂಬ ಕೌಟುಂಬಿಕ ನ್ಯಾಯಾಲಯದ ಅವಲೋಕನ ಸರಿಯಲ್ಲ ಎಂದು ಅದು ತಿಳಿಸಿದೆ.
ದೂರಿನಲ್ಲಿ ಯಾರನ್ನೂ ಬಂಧಿಸಲಾಗಿಲ್ಲ ಮತ್ತು ಇದು ಹಿಂದೂ ವಿವಾಹ ಕಾಯಿದೆಯಡಿ ಕ್ರೌರ್ಯವಾಗುವುದಿಲ್ಲ ಎಂದು ಪೀಠ ವಿವರಿಸಿದೆ.
[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]