ಸುದ್ದಿಗಳು

ವ್ಹೀಲಿಂಗ್‌ಗೆ ಕಿಡಿ: ಬಿಎನ್‌ಎಸ್‌, ಮೋಟಾರು ಕಾಯಿದೆಗೆ ಕಠಿಣ ತಿದ್ದುಪಡಿ ಮಾಡಲು ಹೈಕೋರ್ಟ್‌ ನಿರ್ದೇಶನ

“ವಿವೇಚನಾರಹಿತ ಚಾಲನೆಯನ್ನು ನಿಯಂತ್ರಿಸಲು ಹಾಲಿ ಇರುವ ಕಾನೂನಿನ ನಿಬಂಧನೆಗಳು ಸಾಕಾಗುವುದಿಲ್ಲ ಎಂಬುದನ್ನು ಶಾಸಕಾಂಗವು ಮನಗಾಣಬೇಕು” ಎಂದಿರುವ ನ್ಯಾಯಾಲಯ.

Siddesh M S

ವ್ಹೀಲಿಂಗ್‌ನಂಥ ಅಪಾಯಕಾರಿ ಚಟುವಟಿಕೆಯನ್ನು ತಡೆಗಟ್ಟಲು ರಾಜ್ಯ ಸರ್ಕಾರವು ಭಾರತೀಯ ನಾಗರಿಕ ಸಂಹಿತೆ (ಬಿಎನ್‌ಎಸ್‌) ಮತ್ತು ಭಾರತೀಯ ಮೋಟಾರು ವಾಹನ ಕಾಯಿದೆಗೆ ಕಠಿಣ ನಿಬಂಧನೆ ಸೇರ್ಪಡೆ ಮಾಡುವ ಮೂಲಕ ಅಗತ್ಯ ತಿದ್ದುಪಡಿ ಮಾಡಬೇಕು ಎಂದು ಈಚೆಗೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಅಭಿಪ್ರಾಯಪಟ್ಟಿದೆ. ಇದೇ ವೇಳೆ ವ್ಹೀಲಿಂಗ್‌ ಪ್ರಕರಣವೊಂದರ ಆರೋಪಿಗೆ ಪದೇ ಪದೇ ಅಂತಹದ್ದೇ ತಪ್ಪು ಎಸಗಿದ ಕಾರಣಕ್ಕೆ ಜಾಮೀನು ನಿರಾಕರಿಸಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿಯ ಅರ್ಬಾಜ್‌ ಖಾನ್‌ ಅಲಿಯಾಸ್‌ ಅರ್ಬಾಜ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ಏಕಸದಸ್ಯ ಪೀಠವು ತಿರಸ್ಕರಿಸಿದೆ.

“ವಿವೇಚನಾರಹಿತ ಚಾಲನೆಯನ್ನು ನಿಯಂತ್ರಿಸಲು ಹಾಲಿ ಇರುವ ಕಾನೂನಿನ ನಿಬಂಧನೆಗಳು ಸಾಕಾಗುವುದಿಲ್ಲ ಎಂಬುದನ್ನು ಶಾಸಕಾಂಗವು ಮನಗಾಣಬೇಕು. ಶಾಸನದ ಕೊರತೆಯನ್ನು ಗಮನಿಸಿ ಹೊಂದಿಕೆಯಾಗುವ ಮತ್ತು ಕಠಿಣ ನಿಬಂಧನೆಯನ್ನು ಬಿಎನ್‌ಎಸ್‌ ಮತ್ತು ಮೋಟಾರು ವಾಹನಗಳ ಕಾಯಿದೆಗೆ ತಿದ್ದುಪಡಿ ಮಾಡಬೇಕು” ಎಂದು ನ್ಯಾಯಪೀಠ ಹೇಳಿದೆ.

“ನ್ಯಾಯಾಲಯವು ತನ್ನ ಅಧಿಕಾರ ಚಲಾಯಿಸುವಾಗ ಏರುಗತಿಯಲ್ಲಿರುವ ಅಪಾಯಕಾರಿಯಾದ ವ್ಹೀಲಿಂಗ್‌ನಂಥ ದುಸ್ಸಾಹಸವನ್ನು ಪರಿಗಣಿಸಬೇಕಿದ್ದು, ಸಮಾಜದ ಮೇಲೆ ಗಂಭೀರ ಪರಿಣಾಮ ಉಂಟು ಮಾಡಿ ಅದರ ಮೂಲಕ ಸಾರ್ವಜನಿಕ ಸುವ್ಯವಸ್ಥೆ ಮತ್ತು ಜನರ ರಕ್ಷಣೆ ಹಾಗೂ ಭದ್ರತೆಯ ಮೇಲೆ ಪರಿಣಾಮ ಉಂಟುಮಾಡುವ ಕೆಲವು ನಿರ್ಲಜ್ಜ ಶಕ್ತಿಗಳನ್ನು ಹುಟ್ಟಡಗಿಸಬೇಕಿದೆ” ಎಂದು ನ್ಯಾಯಾಲಯ ಹೇಳಿದೆ.

"ಹಾಲಿ ಪ್ರಕರಣದಲ್ಲಿ ಅರ್ಜಿದಾರನ ವಿರುದ್ಧದ ಆರೋಪಗಳು ಜಾಮೀನುಸಹಿತವಾಗಿವೆ. ಆದರೆ, ಆತ ಪದೇ ಪದೇ ಇಂತಹ ತಪ್ಪು ಎಸಗಿದ್ದಾನೆ. ಆರೋಪಿ ವಿರುದ್ಧ ಸಕ್ಷಮ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದ ಮಾತ್ರಕ್ಕೆ ಜಾಮೀನು ನೀಡಬೇಕು ಎಂದೇನಿಲ್ಲ” ಎಂದು ನ್ಯಾಯಾಲಯ ಹೇಳಿದೆ.

“ಮೊದಲಿಗೆ ವ್ಹೀಲಿಂಗ್‌ ವಿಸ್ತೃತವಾದ ನಗರ ಪ್ರದೇಶಗಳ ಹೆದ್ದಾರಿಗಳಿಗೆ ಸೀಮಿತವಾಗಿತ್ತು. ಈಗ ಈ ಅಪಾಯಕಾರಿ ಚಟುವಟಿಕೆಯು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಿದೆ. ಯುವ ಸಮುದಾಯವು ವ್ಹೀಲಿಂಗ್‌ ಎದೆಗಾರಿಕೆ ಎಂದು ನಂಬಿದ್ದು, ಇಂಥ ಚಟುವಟಿಕೆಯಿಂದ ಆಗಬಹುದಾದ ಗಂಭೀರ ಹಾನಿಯ ಬಗ್ಗೆ ಅರಿವಿಲ್ಲ. ವ್ಹೀಲಿಂಗ್‌ ದ್ವಿಚಕ್ರ ವಾಹನ ಚಾಲಕ, ಹಿಂಬದಿಯ ಸವಾರ ಮಾತ್ರವಲ್ಲದೇ ಸಾಮಾನ್ಯ ಜನರಿಗೂ ಗಂಭೀರ ಬೆದರಿಕೆಯಾಗಿದೆ. ಈ ಕೃತ್ಯದಲ್ಲಿ ತೊಡಗುವ ವಿವೇಚನಾರಹಿತ ಕೆಲವು ಯುವಕರು ನಿಸ್ಸಂಶಯವಾಗಿ ಸಮಾಜದ ಸ್ವಾಸ್ಥ್ಯ ಮತ್ತು ನೆಮ್ಮದಿಗೆ ಭಂಗ ಉಂಟು ಮಾಡುತ್ತಿದ್ದಾರೆ” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: 2024ರ ಅಕ್ಟೋಬರ್‌ 9ರಂದು ದಸರಾ ಅಂಗವಾಗಿ ಸಂಜೆ 4.30ರ ವೇಳೆಗೆ ಗಂಗಾವತಿಯ ಹೇಮಗುಡ್ಡ ದುರ್ಗಮ್ಮ ದೇವಸ್ಥಾನದ ಬಳಿ ಮೂವರು ಯಮಹಾ ಆರ್‌ಎಕ್ಸ್‌ ಬೈಕಿನಲ್ಲಿ ವ್ಹೀಲಿಂಗ್‌ ಮಾಡುತ್ತಿದ್ದರು. ದೂರುದಾರ ಪೊಲೀಸರು ಗಸ್ತಿನಲ್ಲಿದ್ದು, ಅವರನ್ನು ಹಿಡಿಯಲು ಮುಂದಾದಾಗ ಬೈಕ್‌ ಆಯತಪ್ಪಿ, ವ್ಹೀಲಿಂಗ್‌ ಮಾಡುತ್ತಿದ್ದವರು ನೆಲಕ್ಕೆ ಬಿದ್ದಿದ್ದರು.

ಆಗ ಪೊಲೀಸರು ಅವರ ನೆರವಿಗೆ ಧಾವಿಸಿದ್ದು, ನೆಲಕ್ಕೆ ಬಿದ್ದ ಗಾಯಾಳುಗಳು ಪೊಲೀಸರನ್ನು ನಿಂದಿಸಲಾರಂಭಿಸಿದ್ದರು. ಅಲ್ಲದೇ, ಪೊಲೀಸರ ಮೇಲೆಯೇ ಹಲ್ಲೆ ನಡೆಸಿ, ಅವರ ಫೋನ್‌ ಕಸಿದು ತುಂಗಭದ್ರಾ ಕ್ಯಾನಲ್‌ಗೆ ಎಸೆದಿದ್ದರು. ಇದನ್ನು ಪೊಲೀಸರು ಪ್ರಶ್ನಿಸಿದ್ದರು.

ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಬಿಎನ್‌ಎಸ್‌ ಸೆಕ್ಷನ್‌ಗಳಾದ 132, 109(1), 121(1), 115(1), 352, 351(2), 238 ಜೊತೆಗೆ ಸೆಕ್ಷನ್‌ 3(5), 281, 125, 125(a) ಹಾಗೂ ಮೋಟಾರು ವಾಹನ ಕಾಯಿದೆ ಸೆಕ್ಷನ್‌ 183, 184, 192, 196 ಮತ್ತು 177ರ ಅಡಿ ಪ್ರಕರಣ ದಾಖಲಿಸಿದ್ದರು. ಆನಂತರ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿತ್ತು.

ಅರ್ಜಿದಾರ ಅರ್ಬಾಜ್‌ ಪರವಾಗಿ ವಕೀಲ ಸಾದಿಕ್‌ ಎನ್‌ ಗೂಡಾವಾಲಾ, ಪ್ರಾಸಿಕ್ಯೂಷನ್‌ ಪರವಾಗಿ ವಕೀಲೆ ಗಿರಿಜಾ ಎಸ್‌. ಹಿರೇಮಠ ವಾದಿಸಿದ್ದರು.

Arbaz Khan Vs State of Karnataka.pdf
Preview