ಹಿರಿಯ ವಕೀಲ ಯತಿನ್ ಓಝಾ
ಹಿರಿಯ ವಕೀಲ ಯತಿನ್ ಓಝಾ 
ಸುದ್ದಿಗಳು

ಯತಿನ್ ಓಝಾ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ: ರೂ 2000 ದಂಡ ವಿಧಿಸಿದ ಗುಜರಾತ್ ಹೈಕೋರ್ಟ್

Bar & Bench

ನ್ಯಾಯಾಲಯ ರೆಜೆಸ್ಟ್ರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಫೇಸ್‌ಬುಕ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿದ್ದ ಗುಜರಾತ್ ಹೈಕೋರ್ಟ್ ವಕೀಲರ ಸಂಘದ (ಜಿಎಚ್‌ಸಿಎಎ) ಅಧ್ಯಕ್ಷ ಯತಿನ್ ಓಝಾ ಅವರಿಗೆ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿಗಳಾದ ಸೋನಿಯಾ ಗೋಕಣಿ ಮತ್ತು ಎನ್ ವಿ ಅಂಜಾರಿಯಾ ಅವರಿದ್ದ ವಿಭಾಗೀಯ ಪೀಠ ರೂ 2000 ದಂಡ ವಿಧಿಸಿದೆ.

ದಂಡ ಪಾವತಿಸಲು ಓಝಾ ಅವರು ವಿಫಲವಾದರೆ ಎರಡು ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ.

ಆದರೂ, ಓಝಾ ಅವರಿಗೆ ಮೇಲ್ಮನವಿ ಸಲ್ಲಿಸಲು ಅನುವು ಮಾಡಿಕೊಡುವಂತೆ, ಮೇಲ್ಮನವಿ ಸಲ್ಲಿಕೆಗೆ ಇರುವ ಶಾಸನಬದ್ಧ ಅವಧಿ ಮುಗಿಯುವವರೆಗೆ ಶಿಕ್ಷೆಯನ್ನು ತಡೆಹಿಡಿಯಲಾಗಿದೆ. ಈ ಕುರಿತಂತೆ ಹಿರಿಯ ವಕೀಲ ಮಿಹಿರ್ ಜೋಶಿ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಪ್ರಕರಣದಲ್ಲಿ ಓಝಾ ಅವರು ತಪ್ಪಿತಸ್ಥ ಎಂದು ಕೋರ್ಟ್ ಮಂಗಳವಾರ ಘೋಷಿಸಿತ್ತು.

ತೀರ್ಪಿನ ಸಾರ ಹೀಗಿದೆ:

"…ಈ ನ್ಯಾಯಾಲಯವು ಭಾರತದ ಸಂವಿಧಾನದ 215 ನೇ ವಿಧಿ ಮತ್ತು 1971 ರ ನ್ಯಾಯಾಂಗ ನಿಂದನೆ ಕಾಯ್ದೆಯ ಸೆಕ್ಷನ್ 15 ರ ಅಡಿಯಲ್ಲಿ ನೀಡಲಾಗಿರುವ ಅಧಿಕಾರವನ್ನು ಚಲಾಯಿಸುವಾಗ, 1971ರ ನ್ಯಾಯಾಂಗ ನಿಂದನೆ ಕಾಯ್ದೆಯ ಸೆಕ್ಷನ್ 2 (ಸಿ) (ಐ) ನ ಅರ್ಥದಲ್ಲಿ ಪ್ರತಿವಾದಿಯನ್ನು (ಓಝಾ) ಕ್ರಿಮಿನಲ್ ನ್ಯಾಯಾಂಗ ನಿಂದನೆ ಶಿಕ್ಷೆಗೆ ಗುರಿಪಡಿಸಿದೆ”

ಸೆಪ್ಟೆಂಬರ್ 30 ರಂದು ನ್ಯಾಯಪೀಠವು ಪ್ರಕರಣದ ಆದೇಶವನ್ನು ಕಾಯ್ದಿರಿಸಿತ್ತು.

ಓಝಾ ಅವರು ಫೇಸ್‌ಬುಕ್ ನೇರ ಪ್ರಸಾರದ ಮೂಲಕ ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ಗುಜರಾತ್ ನ್ಯಾಯಾಂಗ ರೆಜಿಸ್ಟ್ರಿಯ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದು ಬೇಜಾವಾಬ್ದಾರಿಯುತ, ಉದ್ರೇಕಕಾರಿ ಹಾಗೂ ಅಸಮರ್ಥನೀಯ ಕ್ರಮವಾಗಿತ್ತು ಎಂದು ಹೇಳಿದ್ದ ಕೋರ್ಟ್ ಈ ವರ್ಷದ ಜೂನ್‌ನಲ್ಲಿ, ಅವರ ವಿರುದ್ಧ ಸ್ವಯಂ ಪ್ರೇರಿತವಾಗಿ ಕ್ರಿಮಿನಲ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿತ್ತು.

ಓಝಾ ಮತ್ತು ಹೈಕೋರ್ಟ್ ನಡುವೆ ಸುದೀರ್ಘವಾದ ಮತ್ತು ಹೆಚ್ಚು ಗಮನಸೆಳೆದ ವಾದ ಮಂಡನೆಯಾಯಿತು. ಸುಪ್ರೀಂ ಕೋರ್ಟ್‌ನ ಉಲ್ಲೇಖದ ನಂತರ, ವಕೀಲರು ಅಂತಿಮವಾಗಿ ಕ್ಷಮೆಯಾಚಿಸಿದರು. ಆದರೆ, ಕ್ಷಮೆಯಾಚನೆಯು ಅಪ್ರಾಮಾಣಿಕವಾಗಿದೆ ಎಂದು ಅಭಿಪ್ರಾಯಪಟ್ಟಿದ್ದ ಪೀಠವು ಅದನ್ನು ತಿರಸ್ಕರಿಸಿತ್ತು.

ಆಗಸ್ಟ್ 26 ರಂದು ಹೈಕೋರ್ಟ್‌ನ ಪೂರ್ಣಪೀಠವು ಕೂಡ ಇದೇ ನಿಲುವು ತಾಳಿತ್ತು.

ಓಝಾ ಅವರ ನ್ಯಾಯಾಂಗ ನಿಂದನೆ ಹೇಳಿಕೆಗಳು ಸುಳ್ಳು ಎಂದು ಅಮಿಕಸ್ ಕ್ಯೂರಿ ಅಥವಾ ಇನ್ನಾರೇ ಆಗಲಿ ಪ್ರತಿಪಾದಿಸಲಿಲ್ಲ ಮತ್ತು ಅಮಿಕಸ್ ಕ್ಯೂರಿ ಪ್ರತಿವಾದ ಮಂಡಿಸಲು ಮುಂದಾಗದ ಕಾರಣ ತೀರ್ಪನ್ನು ಕಾಯ್ದಿರಿಸಲಾಗಿತ್ತು.

ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ನೇಮಿಸಿದ ಮೂವರು ನ್ಯಾಯಮೂರ್ತಿಗಳ ಸಮಿತಿಯು ಓಝಾ ಅವರ "ಆಧಾರರಹಿತ" ಹೇಳಿಕೆಗಳನ್ನು ನಿರಾಕರಿಸಿತ್ತು ಎಂದು ಅಮಿಕಸ್ ಕ್ಯೂರಿ ಶಾಲಿನ್ ಮೆಹ್ತಾ ಪ್ರತಿಪಾದಿಸಿದರು. ವಿಚಾರಣೆಯನ್ನು ಮುಕ್ತಾಯಗೊಳಿಸುವ ಮೊದಲು ವರದಿಯನ್ನು ದಾಖಲೆಯಲ್ಲಿ ತೆಗೆದುಕೊಳ್ಳುವಂತೆ ನ್ಯಾಯಾಲಯ ಆದೇಶಿಸಿತು.