ಸುದ್ದಿಗಳು

ಆಮ್ಲಜನಕ ಪೂರೈಕೆಯಿಲ್ಲದೆ ಸಂಭವಿಸುವ ರೋಗಿಗಳ ಸಾವು ನರಮೇಧಕ್ಕಿಂತ ಕಡಿಮೆ ಅಲ್ಲ: ತನಿಖೆಗೆ ಅಲಾಹಾಬಾದ್ ಹೈಕೋರ್ಟ್ ಆದೇಶ

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಸಂಗತಿಗಳು ಬಡ ಜನರು ತಮ್ಮ ಆತ್ಮೀಯರ ಪ್ರಾಣ ಉಳಿಸಿಕೊಳ್ಳಲು ಆಮ್ಲಜನಕ ಸಿಲಿಂಡರ್‌ಗಳಿಗಾಗಿ ಯಾಚಿಸುತ್ತಿರುವುದನ್ನು ತೋರಿಸುತ್ತವೆ ಎಂದು ನ್ಯಾಯಾಲಯ ಹೇಳಿದೆ.

Bar & Bench

ಸಾಮಾಜಿಕ ಮಾಧ್ಯಮಗಳಲ್ಲಿ ಆಮ್ಲಜನಕ ಪೂರೈಸುವಂತೆ ನಾಗರಿಕರು ಯಾಚಿಸುತ್ತಿರುವ ಸುದ್ದಿಗಳು ವೈರಲ್‌ ಆಗುತ್ತಿದ್ದಂತೆ ಅಲಾಹಾಬಾದ್‌ ಹೈಕೋರ್ಟ್‌ ಉತ್ತರ ಪ್ರದೇಶ ಸರ್ಕಾರ ಮತ್ತು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. “ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆಯಾಗದೆ ಕೋವಿಡ್‌ ರೋಗಿಗಳ ಸಾವು ಸಂಭವಿಸುತ್ತಿರುವುದು ಅಪರಾಧ ಕೃತ್ಯವಾಗಿದ್ದು ನರಮೇಧಕ್ಕಿಂತ ಕಡಿಮೆಯಲ್ಲ ಎಂದು ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಆಧರಿಸಿ ನ್ಯಾಯಮೂರ್ತಿಗಳಾದ ಅಜಿತ್ ಕುಮಾರ್ ಮತ್ತು ಸಿದ್ಧಾರ್ಥ ವರ್ಮಾ ಅವರಿದ್ದ ಪೀಠ ಮೀರತ್‌ ಮತ್ತು ಲಖನೌ ಆಸ್ಪತ್ರೆಗಳಲ್ಲಿ ಸಂಭವಿಸಿದ ಸಾವುಗಳ ಕುರಿತು ತನಿಖೆ ನಡೆಸುವಂತೆ ಆದೇಶಿಸಿತು.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿರುವ ಸಂಗತಿಗಳು ಬಡ ಜನರು ತಮ್ಮ ನೆಚ್ಚಿನ ಮತ್ತು ಆತ್ಮೀಯರ ಪ್ರಾಣ ಉಳಿಸಿಕೊಳ್ಳಲು ಆಮ್ಲಜನಕ ಸಿಲಿಂಡರ್‌ಗಳಿಗಾಗಿ ಯಾಚಿಸುತ್ತಿರುವುದನ್ನು ಮತ್ತು ಜಿಲ್ಲಾಡಳಿತ ಹಾಗೂ ಪೋಲೀಸ್‌ ಅಧಿಕಾರಿಗಳು ಅವರಿಗೆ ಕಿರುಕುಳ ನೀಡುತ್ತಿರುವದನ್ನು ನ್ಯಾಯಾಲಯ ಗಮನಿಸಿದೆ.

ಸಾಕಷ್ಟು ಆಮ್ಲಜನಕ ಪೂರೈಕೆ ಇದೆ ಎಂಬ ಸರ್ಕಾರದ ವಾದಕ್ಕೆ ವ್ಯತಿರಿಕ್ತವಾದುದನ್ನು ಸಾಮಾಜಿಕ ಜಾಲತಾಣದ ವೀಡಿಯೊಗಳು ಬಿಂಬಿಸಿವೆ.
ಅಲಹಾಬಾದ್ ಹೈಕೋರ್ಟ್

ಹೃದಯ ಕಸಿ ಮತ್ತು ಮೆದುಳಿನ ಶಸ್ತ್ರಚಿಕಿತ್ಸೆ ನಡೆಸುವಷ್ಟು ವಿಜ್ಞಾನ ಮುಂದುವರೆದಿರುವ ಈ ದಿನಗಳಲ್ಲಿ ನಾವು ನಮ್ಮ ಜನರನ್ನು ಈ ರೀತಿ ಸಾಯಲು ಬಿಡುವುದು ಸಾಧ್ಯವೇ ಎಂದು ಪೀಠ ಆಕ್ರೋಶ ವ್ಯಕ್ತಪಡಿಸಿತು. ಅಲ್ಲದೆ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿರುವ ಪೀಠವು ಲಖನೌ ಮತ್ತು ಮೀರತ್‌ನ ಜಿಲ್ಲಾ ನ್ಯಾಯಾಧೀಶರು 48 ಗಂಟೆಗಳಲ್ಲಿ ಸುದ್ದಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ ಮುಂದಿನ ವಿಚಾರಣೆ ಹೊತ್ತಿಗೆ ವರದಿ ಸಲ್ಲಿಸುವಂತೆ ಆದೇಶಿಸಿತು.

ರಾಜ್ಯದಲ್ಲಿ ಎದ್ದಿರುವ ಕೋವಿಡ್‌ ಬಿಕ್ಕಟ್ಟಿನ ಕುರಿತಂತೆ ಕಳೆದ ತಿಂಗಳು ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಅರ್ಜಿಯ ವಿಚಾರಣೆ ವೇಳೆ ಈ ಆದೇಶ ಹೊರಡಿಸಲಾಗಿದೆ.

ಈ ದಿನಗಳಲ್ಲಿ ಹೃದಯ ಕಸಿ ಮತ್ತು ಮೆದುಳಿನ ಶಸ್ತ್ರಚಿಕಿತ್ಸೆ ಸಹ ನಡೆಯುತ್ತಿರುವಷ್ಟು ವಿಜ್ಞಾನವು ಎಷ್ಟು ಮುಂದುವರಿದಿದೆ ಎಂದು ನಾವು ನಮ್ಮ ಜನರನ್ನು ಈ ರೀತಿ ಸಾಯಲು ಬಿಡಬಹುದು ಎಂದು ಅದು ಹೇಳಿದೆ.

ಇತ್ತೀಚೆಗೆ ಉತ್ತರಪ್ರದೇಶದಲ್ಲಿ ನಡೆದಿದ್ದ ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ಮತಗಟ್ಟೆ ಪ್ರತಿನಿಧಿಗಳು ಕೋವಿಡ್‌ನಿಂದ ಸಾವನ್ನಪ್ಪಿದ ಘಟನೆ ಕುರಿತಂತೆ ಪ್ರತಿಕ್ರಿಯಿಸಲು ರಾಜ್ಯ ಚುನಾವಣಾ ಆಯೋಗಕ್ಕೆ ನ್ಯಾಯಾಲಯ ಸೂಚಿಸಿತ್ತು. ಆದರೆ ಆಯೋಗದ ಪ್ರತಿಕ್ರಿಯೆ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಾಲಯ “ಈ ವಿಚಾರದಲ್ಲಿ ಆಯೋಗದ ಜಡತ್ವವನ್ನು ಸಹಿಸಲಾಗದು” ಎಂದು ಎಚ್ಚರಿಸಿತು. ಮತ ಎಣಿಕೆ ವೇಳೆ ಕೂಡ ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸದಿರುವುದಕ್ಕೆ ಅದು ತೀವ್ರ ಅತೃಪ್ತಿ ವ್ಯಕ್ತಪಡಿಸಿತು.

ಪ್ರಕರಣದ ಮುಂದಿನ ವಿಚಾರಣೆ ಮೇ 7ಕ್ಕೆ ನಿಗದಿಯಾಗಿದೆ. ಆದೇಶದ ಪೂರ್ಣಪಠ್ಯವನ್ನು ಇಲ್ಲಿ ಓದಿ:

Suo_motu_covid_case_Allahabad_High_Court_order.pdf
Preview