Vijay Nair and Rouse Avenue Courts
Vijay Nair and Rouse Avenue Courts  Vijay Nair (creativemornings)
ಸುದ್ದಿಗಳು

ದೆಹಲಿ ಅಬಕಾರಿ ನೀತಿ ಪ್ರಕರಣ: ಆಪ್‌ನ ಸಂವಹನ ಉಸ್ತುವಾರಿಯನ್ನು 5 ದಿನ ಸಿಬಿಐ ಕಸ್ಟಡಿಗೆ ನೀಡಿದ ದೆಹಲಿ ನ್ಯಾಯಾಲಯ

Bar & Bench

ದೆಹಲಿ ಅಬಕಾರಿ ನೀತಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಆಮ್ ಆದ್ಮಿ ಪಕ್ಷದ (ಎಎಪಿ) ಸಂವಹನ ಉಸ್ತುವಾರಿ ವಿಜಯ್ ನಾಯರ್ ಅವರನ್ನು ಐದು ದಿನಗಳ  ಸಿಬಿಐ ವಶಕ್ಕೆ ಒಪ್ಪಿಸಿದೆ.

ನಾಯರ್ ಅವರನ್ನು 7 ದಿನಗಳ ಕಾಲ ವಶಕ್ಕೆ ನೀಡುವಂತೆ ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿಯ ರೋಸ್‌ ಅವೆನ್ಯೂ ನ್ಯಾಯಾಲಯದ ವಿಶೇಷ ಸಿಬಿಐ ನ್ಯಾಯಾಧೀಶ ಎಂ ಕೆ ನಾಗ್‌ಪಾಲ್‌ ಈ ಆದೇಶ ನೀಡಿದ್ದಾರೆ.

ತನಿಖೆಯು ಆರಂಭಿಕ ಹಂತದಲ್ಲಿದ್ದು, ಸಂಪೂರ್ಣ ಸಂಚು, ಸಾರ್ವಜನಿಕ ಸೇವಕರು ಸೇರಿದಂತೆ ವಿವಿಧ ಆರೋಪಿತ ವ್ಯಕ್ತಿಗಳ ಪಾತ್ರವನ್ನು ಬಹಿರಂಗಪಡಿಸಲು ಮಾತ್ರವಲ್ಲದೆ ಅಕ್ರಮವಾಗಿ ಸಂಪಾದಿಸಿದ ಹಣವನ್ನು ಪತ್ತೆ ಹಚ್ಚಲು ಕೂಡ ವಿವರವಾದ ಕಸ್ಟೋಡಿಯಲ್‌ ತನಿಖೆ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ.

ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಂತಹ ದೊಡ್ಡ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂದು ವಿಚಾರಣೆ ಸಂದರ್ಭದಲ್ಲಿ ಸಿಬಿಐ ವಾದಿಸಿತು. ಸಿಬಿಐ ಪರ ವಕೀಲ ಪಂಕಜ್ ಗುಪ್ತಾ ವಾದ ಮಂಡಿಸಿದರು. ನಾಯರ್ ಅವರನ್ನು ಹಿರಿಯ ವಕೀಲೆ ರೆಬೆಕಾ ಜಾನ್ ಪ್ರತಿನಿಧಿಸಿದ್ದರು.

ದೆಹಲಿ ಅಬಕಾರಿ ನೀತಿ 2021-22 ಕುರಿತು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ಸಿಬಿಐ ತನಿಖೆಗೆ ಶಿಫಾರಸು ಮಾಡಿದ ಬಳಿಕ ಎಫ್‌ಐಆರ್‌ ದಾಖಲಿಸಲಾಗಿತ್ತು. ಆ ಮೂಲಕ ಅಬಕಾರಿ ಇಲಾಖೆ ಉಸ್ತುವಾರಿ ಹೊತ್ತಿದ್ದ ಉಪ ಮುಖ್ಯಮಂತ್ರಿ ಸಿಸೋಡಿಯಾ ಅವರನ್ನು ನೇರವಾಗಿ ಗುರಿ ಮಾಡಲಾಗಿತ್ತು. ಇದರ ಬೆನ್ನಲ್ಲೇ ನೀತಿ ಹಿಂಪಡೆಯುವುದಾಗಿ ದೆಹಲಿ ಸರ್ಕಾರ  ಘೋಷಿಸಿತ್ತು.