Justices Hima Kohli, MR Shah, CJI DY Chandrachud, Justices Krishna Murari and PS Narasimha
Justices Hima Kohli, MR Shah, CJI DY Chandrachud, Justices Krishna Murari and PS Narasimha  
ಸುದ್ದಿಗಳು

ದೆಹಲಿ ಸರ್ಕಾರಕ್ಕೆ ಐಎಎಸ್‌ ಹಾಗೂ ಇತರ ಸೇವಾಧಿಕಾರಿಗಳ ಮೇಲೆ ಮೇಲೆ ನಿಯಂತ್ರಣವಿದೆ: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

Bar & Bench

ಮಹತ್ವದ ತೀರ್ಪೊಂದರಲ್ಲಿ ಭೂಮಿ, ಪೊಲೀಸ್ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಸೇವೆಗಳನ್ನು ಹೊರತುಪಡಿಸಿ ಭಾರತೀಯ ಆಡಳಿತ ಸೇವೆ (ಐಎಎಸ್) ಸೇರಿದಂತೆ ರಾಷ್ಟ್ರ ರಾಜಧಾನಿಯಲ್ಲಿನ ಎಲ್ಲಾ ಸೇವೆಗಳು ಹಾಗೂ ಅಧಿಕಾರಿಗಳ ಮೇಲೆ ದೆಹಲಿ ಸರ್ಕಾರಕ್ಕೆ ನಿಯಂತ್ರಣ ಇದೆ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ [ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶ ಸರ್ಕಾರ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಈ ಸಂಬಂಧ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್,  ನ್ಯಾಯಮೂರ್ತಿಗಳಾದ ಎಂ ಆರ್‌ ಶಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಹಾಗೂ ಪಿ ಎಸ್‌ ನರಸಿಂಹ ಅವರಿದ್ದ ಸಾಂವಿಧಾನಿಕ ಪೀಠ ಸರ್ವಾನುಮತದ ತೀರ್ಪು ನೀಡಿದೆ.

 “41ನೇ ನಮೂದಿನಡಿ ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶ ಸರ್ಕಾರದ ಶಾಸನಾತ್ಮಕ ಅಧಿಕಾರ ಸಾರ್ವಜನಿಕ ಆಡಳಿತ ಸೇವೆಗೂ (ಐಎಎಸ್‌) ವಿಸ್ತರಣೆಯಾಗುತ್ತದೆ. ಈ ಅಧಿಕಾರಿಗಳು ದೆಹಲಿ ಸರ್ಕಾರದಿಂದ ನೇಮಕಗೊಳ್ಳದಿದ್ದರೂ ಅವರ ಮೇಲೆ ಅದು ನಿಯಂತ್ರಣ ಹೊಂದಿದೆ. ಆದಾಗ್ಯೂ, ಇದು ಭೂಮಿ, ಕಾನೂನು ಸುವ್ಯವಸ್ಥೆ ಮತ್ತು ಪೊಲೀಸ್‌ ಇಲಾಖೆಗೆ ಸಂಬಂಧಿಸಿದ ಸೇವೆಗಳಿಗೆ ಅನ್ವಯವಾಗುವುದಿಲ್ಲ. ಭೂಮಿ, ಪೊಲೀಸ್ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಹೊರತಾದ ಸೇವೆ ಹೊರತುಪಡಿಸಿ ಉಳಿದ ಆಡಳಿತಸೇವೆಗಳ ವಿಚಾರದಲ್ಲಿ ಲೆ. ಗವರ್ನರ್‌ ಅವರು ದೆಹಲಿ ಸರ್ಕಾರ ಕೈಗೊಳ್ಳುವ ನಿರ್ಧಾರಗಳಿಗೆ ಬದ್ಧರಾಗಿರುತ್ತಾರೆ” ಎಂದು ಪೀಠ ಹೇಳಿದೆ.

ತನ್ನ ನಿರ್ಧಾರದ ಹಿಂದಿನ ಕಾರಣವನ್ನು ವಿವರಿಸಿದ ನ್ಯಾಯಾಲಯ, "ರಾಷ್ಟ್ರಪತಿಗಳು ವಹಿಸಿದಂತೆ ಆಡಳಿತಾತ್ಮಕ ಪಾತ್ರದ ಅಡಿಯಲ್ಲಿ ಲೆ. ಗವರ್ನರ್‌ ಅವರು ಅಧಿಕಾರ ಚಲಾಯಿಸಬೇಕು. ಅವರು ತಮ್ಮ ಕಾರ್ಯಕಾರಿ ಆಡಳಿತವನ್ನು ಶಾಸಕಾಂಗ ಸಭೆಯ ವ್ಯಾಪ್ತಿಯಿಂದ ಹೊರಗಿರುವ ವಿಷಯಗಳಿಗೆ ಮಾತ್ರ ಅನ್ವಯಿಸಬಹುದು... ಮತ್ತು ಇದನ್ನು ಸಂಪೂರ್ಣ ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶ ಸರ್ಕಾರದ ಆಡಳಿತ ಎಂದು ಅರ್ಥೈಸಲಾಗುವುದಿಲ್ಲ. ಹೀಗಲ್ಲದೆ ಹೋದರೆ, ದೆಹಲಿಯಲ್ಲಿ ಪ್ರತ್ಯೇಕ ಚುನಾಯಿತ ಸರ್ಕಾರವನ್ನು ಹೊಂದುವ ನಿರ್ಧಾರ ನಿರರ್ಥಕವಾಗುತ್ತದೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರ ತನ್ನ ಅಧಿಕಾರಿಗಳ ಮೇಲೆ ನಿಯಂತ್ರಣ ಹೊಂದಿರಬೇಕು. ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರಕ್ಕೆ ತನ್ನ ಅಧಿಕಾರಿಗಳನ್ನು ನಿಯಂತ್ರಿಸಲು ಮತ್ತು ಅವರನ್ನು ಉತ್ತರದಾಯಿಗಳನ್ನಾಗಿ ಮಾಡಲು ಅವಕಾಶವಿಲ್ಲದಿದ್ದರೆ ಶಾಸಕಾಂಗ ಮತ್ತು ಸಾರ್ವಜನಿಕರ ಬಗೆಗಿನ ಕಾರ್ಯಾಂಗದ ಜವಾಬ್ದಾರಿಯನ್ನು ದುರ್ಬಲಗೊಳಿಸಿದಂತಾಗುತ್ತದೆ. ಅಧಿಕಾರಿಗಳು ಸರ್ಕಾರಕ್ಕೆ ಸ್ಪಂದಿಸದಿದ್ದರೆ ಸಾಮೂಹಿಕ ಹೊಣೆಗಾರಿಕೆಯನ್ನು ದುರ್ಬಲಗೊಳಿಸಿದಂತಾಗುತ್ತದೆ. ಚುನಾಯಿತ ಸರ್ಕಾರದಿಂದ ತಾವು ಪ್ರತ್ಯೇಕ  ಎಂದು ಅಧಿಕಾರಿಗಳು ಭಾವಿಸಿದರೆ, ತಾವು ಉತ್ತರದಾಯಿಗಳಲ್ಲ ಎಂದು ಅವರು ಭಾವಿಸಿಬಿಡುತ್ತಾರೆ” ಎಂದು ನ್ಯಾಯಾಲಯ ವಿವರಿಸಿದೆ.

ಒಂದು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವು ಸಮವರ್ತಿ ಪಟ್ಟಿಯ ಅಡಿಗೆ ಸಂಬಂಧಿಸಿದ ವಿಷಯಗಳ ಮೇಲೆ ಕಾನೂನು ರೂಪಿಸುವ ಅಧಿಕಾರ ಹೊಂದಿದ್ದರೂ, ಅದು ಅಸ್ತಿತ್ವದಲ್ಲಿರುವ ಕೇಂದ್ರದ ಕಾನೂನಿಗೆ ಒಳಪಟ್ಟಿರುತ್ತದೆ ಎಂದು ತೀರ್ಪು ಹೇಳಿದೆ. ಇದೇ ವೇಳೆ ರಾಜ್ಯಗಳ ಆಡಳಿತವನ್ನು ಕೇಂದ್ರ ಸರ್ಕಾರ ವಹಿಸಿಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಕೂಡ ಪೀಠ ಅಭಿಪ್ರಾಯಪಟ್ಟಿದೆ.