Subramanian Swamy
Subramanian Swamy 
ಸುದ್ದಿಗಳು

ಆರು ವಾರಗಳಲ್ಲಿ ಬಂಗಲೆ ಹಸ್ತಾಂತರಿಸುವಂತೆ ಸುಬ್ರಮಣಿಯನ್ ಸ್ವಾಮಿಗೆ ಸೂಚಿಸಿದ ದೆಹಲಿ ಹೈಕೋರ್ಟ್

Bar & Bench

ಮಾಜಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ತಮ್ಮ ದೆಹಲಿ ಬಂಗಲೆಯನ್ನು ಸರ್ಕಾರಕ್ಕೆ ಹಸ್ತಾಂತರಿಸಬೇಕೆಂದು ದೆಹಲಿ ಹೈಕೋರ್ಟ್‌ ಬುಧವಾರ ಸೂಚಿಸಿದೆ [ಡಾ. ಸುಬ್ರಮಣಿಯನ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ತಮಗೆ ಬೆದರಿಕೆ ಇರುವುದನ್ನು ಪರಿಗಣಿಸಿ 2016ರಿಂದ ತಾವು ವಾಸಿಸುತ್ತಿದ್ದ ಬಂಗಲೆಯನ್ನು ಮರು ಮಂಜೂರು ಮಾಡಬೇಕೆಂದು ಕೋರಿ ಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಯಶವಂತ್‌ ವರ್ಮಾ ಅವರಿದ್ದ ಏಕಸದಸ್ಯ ಪೀಠ ವಿಲೇವಾರಿ ಮಾಡಿತು. ಬಂಗಲೆಯನ್ನು ಆರು ವಾರಗಳೊಳಗೆ ಎಸ್ಟೇಟ್‌ ಅಧಿಕಾರಿಯ ವಶಕ್ಕೆ ನೀಡುವಂತೆ ನ್ಯಾಯಾಲಯ ಸೂಚಿಸಿದೆ.

"ಐದು ವರ್ಷದ ಅವಧಿಗೆ ಮನೆ ಹಂಚಿಕೆ ಮಾಡಲಾಗಿದ್ದು ಈ ಅವಧಿ ಕೊನೆಗೊಂಡಿದೆ ಎಂದು ನ್ಯಾಯಾಲಯಕ್ಕೆ ತಿಳಿದು ಬಂದಿದೆ. ಝಡ್ ವರ್ಗದ ಭದ್ರತೆ ಪಡೆಯುುತ್ತಿರುವವರಿಗೆ ಸರ್ಕಾರಿ ವಸತಿ ಸೌಕರ್ಯ ಕಡ್ಡಾಯ ಅಥವಾ ಅಗತ್ಯ ಎನ್ನುವ ಯಾವುದೇ ವಿಚಾರವನ್ನು ನ್ಯಾಯಾಲಯದಲ್ಲಿ ಮಂಡಿಸಿಲ್ಲ” ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ದೆಹಲಿಯಲ್ಲಿ ಸ್ವಾಮಿ ಅವರಿಗೆ 2016ರ ಜನವರಿಯಲ್ಲಿ 5 ವರ್ಷಗಳ ಅವಧಿಗೆ ಬಂಗಲೆ ಮಂಜೂರಾಗಿತ್ತು.  2022ರ ಏಪ್ರಿಲ್‌ನಲ್ಲಿ ತಮ್ಮ ರಾಜ್ಯಸಭಾ ಸದಸ್ಯತ್ವ ಕೊನೆಗೊಂಡಿದ್ದರೂ ಅವರು ಅಲ್ಲಿಯೇ ವಾಸಿಸುತ್ತಿದ್ದರು.

ಇಂದು ಕೇಂದ್ರ ಸರ್ಕಾರ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಸಂಜಯ್‌ ಜೈನ್‌ ಅವರು ಸ್ವಾಮಿ ಅವರಿಗೆ ಒದಗಿಸಲಾಗಿದ್ದ ಭದ್ರತೆಯನ್ನು ಕಡಿಮೆ ಮಾಡದಿದ್ದರೂ ಅವರಿಗೆ ವಸತಿ ಒದಗಿಸುವ ಬಾಧ್ಯತೆ ಸರ್ಕಾರದ್ದಲ್ಲ. ಸ್ವಾಮಿ ಅವರಿಗೆ ದೆಹಲಿಯಲ್ಲಿ ಮನೆ ಇದ್ದು ಅವರು ಅಲ್ಲಿಗೆ ಸ್ಥಳಾಂತರಗೊಳ್ಳಬಹುದು. ಅವರಿಗೆ ಭದ್ರತೆ ಒದಗಿಸಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಭದ್ರತಾ ಸಂಸ್ಥೆಗಳು ಕೈಗೊಳ್ಳುತ್ತವೆ ಎಂದರು. ಸ್ವಾಮಿ ಅವರನ್ನು ಹಿರಿಯ ನ್ಯಾಯವಾದಿ ಜಯಂತ್‌ ಮೆಹ್ತಾ ಪ್ರತಿನಿಧಿಸಿದ್ದರು.