ಸುದ್ದಿಗಳು

ಚರ್ಚೆಯೇ ಇಲ್ಲದೆ ಕೃಷಿ ಕಾಯಿದೆ ರದ್ದತಿ ಮಸೂದೆ ಅಂಗೀಕರಿಸಿದ ಲೋಕಸಭೆ

Bar & Bench

ವಿವಾದಾತ್ಮಕವಾದ ಮೂರು ಕೃಷಿ ಕಾಯಿದೆಗಳನ್ನು ರದ್ದುಗೊಳಿಸುವ ಕೃಷಿ ಕಾನೂನು ರದ್ದತಿ ಮಸೂದೆ- 2021ಕ್ಕೆ ಲೋಕಸಭೆ ಅಂಗೀಕಾರದ ಮುದ್ರೆಯೊತ್ತಿದೆ. ಯಾವುದೇ ಚರ್ಚೆಯಿಲ್ಲದೆ ಧ್ವನಿ ಮತದ ಮೂಲಕ ಮಸೂದೆಯನ್ನು ಅಂಗೀಕರಿಸಲಾಯಿತು.

ಲೋಕಸಭೆ ಜಾಲತಾಣದಲ್ಲಿ ಲೋಕಸಭೆ ದಿನಚರಿ ಮಾಹಿತಿ ಪ್ರಕಾರ ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್ ಅವರು ಈ ಕೆಳಗಿನ ಮೂರು ಕಾಯಿದೆಗಳನ್ನು ರದ್ದುಪಡಿಸುವ ಮಸೂದೆ ಮಂಡಿಸಿದರು.

· ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸುಗಮಗೊಳಿಸುವಿಕೆ) ಕಾಯಿದೆ-2020

· ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಹಾಗೂ ಕೃಷಿ ಸೇವೆಗಳ ಒಪ್ಪಂದ ಕಾಯಿದೆ- 2020

· 2020ರ ಅಗತ್ಯ ಸರಕುಗಳ (ತಿದ್ದುಪಡಿ) ಕಾಯಿದೆ- 2020

"ಈ ಕಾನೂನುಗಳ ವಿರುದ್ಧ ಕೇವಲ ರೈತರ ಸಣ್ಣ ಗುಂಪೊಂದು ಪ್ರತಿಭಟಿಸುತ್ತಿದೆಯಾದರೂ, ನಾವು ಸ್ವಾತಂತ್ರ್ಯದ 75 ನೇ ವರ್ಷದ - ಆಜಾದಿ ಕಾ ಅಮೃತ್ ಮಹೋತ್ಸವ ಆಚರಿಸುತ್ತಿರುವಾಗ, ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆ ಮತ್ತು ಅಭಿವೃದ್ಧಿಯ ಹಾದಿಯಲ್ಲಿ ಸಾಗುವುದು ಈಗಿನ ಅಗತ್ಯವಾಗಿದೆ” ಎಂದು ಮಾಹಿತಿ ನೀಡಲಾಗಿದೆ,

ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 19 ರಂದು ರಾಷ್ಟ್ರವನ್ನುದ್ದೇಶಿಸಿ ಮಾಡಿದ ವಿಶೇಷ ಭಾಷಣದಲ್ಲಿ ಮೊದಲ ಬಾರಿಗೆ 3 ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರ ಪ್ರಕಟಿಸಿದ್ದರು.

ಪಂಜಾಬ್, ಹರ್ಯಾಣ ಮಾತ್ರವಲ್ಲದೆ ಉತ್ತರ ಪ್ರದೇಶದ ಪಶ್ಚಿಮ ಭಾಗದ ರೈತರು ದೆಹಲಿ ಗಡಿ ಭಾಗದಲ್ಲಿ ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಜನವರಿ 12 ರಂದು ಸುಪ್ರೀಂ ಕೋರ್ಟ್ ಕಾಯಿದೆ ಜಾರಿಗೆ ತಡೆ ನೀಡಿತ್ತು.

ಎಲ್ಲಾ ಪಕ್ಷಗಳು ಮತ್ತು ಪಾಲುದಾರರ ಅಹವಾಲು ಕೇಳಲು ಅನುಕೂಲವಾಗುವಂತೆ ಸಮಿತಿ ರಚಿಸಲು ನಿರ್ದೇಶಿಸಿದ್ದ ಸುಪ್ರೀಂಕೋರ್ಟ್‌ ಆ ಕುರಿತು ವರದಿ ಸಲ್ಲಿಸುವಂತೆ ಸೂಚಿಸಿತ್ತು. ಸಮಿತಿ ಮಾರ್ಚ್‌ನಲ್ಲಿ ವರದಿ ಸಲ್ಲಿಸಿತ್ತು. ಆದರೆ ನ್ಯಾಯಾಲಯ ಪ್ರಕರಣ ಆಲಿಸಿರಲಿಲ್ಲ. ಕಾಯಿದೆ ಪ್ರಶ್ನಿಸಿರುವ ಅರ್ಜಿಗಳಲ್ಲದೆ ದೆಹಲಿ ಗಡಿ ಭಾಗದಲ್ಲಿ ರೈತರು ರಸ್ತೆ ನಿರ್ಬಂಧಿಸಿರುವುದರ ವಿರುದ್ಧ ಸಲ್ಲಿಸಲಾದ ವಿವಿಧ ಅರ್ಜಿಗಳು ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇವೆ.

ಕೃಷಿ ಕಾಯಿದೆ ಕುರಿತು ಲೋಕಸಭೆ ಜಾಲತಾಣದಲ್ಲಿ ಪ್ರಕಟಿಸಲಾದ ಮಾಹಿತಿಯನ್ನು ಇಲ್ಲಿ ಓದಿ:

Statement_and_Objects_of_Farm_Laws_Repeal_Bill__2021.pdf
Preview