Supreme Court, Gangubai kathiawadi
ʼಗಂಗೂಬಾಯಿ ಕಾಠಿಯಾವಾಡಿʼ ಚಿತ್ರ ಬಿಡುಗಡೆಯಾಗದಂತೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಕಾಠಿಯಾವಾಡಿ ಅವರ ದತ್ತುಪುತ್ರ ಎಂದು ಹೇಳಿಕೊಂಡಿದ್ದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ.
ಸಿನಿಮಾ ನಾಳೆ ಬಿಡುಗಡೆಯಾಗಲಿದ್ದು ಇಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆ ಕೆ ಮಹೇಶ್ವರಿ ಅವರಿದ್ದ ಪೀಠ ವಿಚಾರಣೆ ನಡೆಸಿತು. ಸಿನಿಮಾವನ್ನು ಇನ್ನೂ ನೋಡದೇ ಇರುವ ಹಂತದಲ್ಲಿ ನ್ಯಾಯಾಲಯ ವ್ಯವಹರಿಸುತ್ತಿದೆ ಎಂದು ಚಿತ್ರ ನಿರ್ಮಾಪಕಿ ಆಲಿಯಾ ಭಟ್ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿಗಳಾದ ಆರ್ಯಮಾ ಸುಂದರಂ ಆಕ್ಷೇಪಿಸಿದರು.
ಸೆನ್ಸಾರ್ ಸರ್ಟಿಫಿಕೇಟ್ ನೀಡಲಾಗಿದೆ, ಆದ್ದರಿಂದ ಕಾನೂನಾತ್ಮಕ ಹಕ್ಕನ್ನು ಚಲಾಯಿಸಬಾರದು ಎನ್ನುವವರು ಬಲವಾದ ಕಾರಣವನ್ನು ತೋರಿಸಬೇಕು. ವಾಸ್ತವವಾಗಿ ಅರ್ಜಿದಾರರು ಗಂಗೂಬಾಯಿ ಅವರ ದತ್ತುಪುತ್ರ ಎಂಬುದಕ್ಕೆ ಪುರಾವೆ ಏನು? ಪಡಿತರ ಚೀಟಿ ಹೊರತುಪಡಿಸಿ ಅವರ ಬಳಿ ಬೇರಾವುದೇ ಸಾಕ್ಷಿಗಳಿಲ್ಲ ಎಂದರು. ಅಲ್ಲದೆ ಕಾಠಿಯಾವಾಡಿ ಬದುಕಿದ್ದ ಪ್ರದೇಶದ ಚಿತ್ರಣ ಕುರಿತು ವ್ಯಕ್ತವಾಗಿರುವ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ವಕೀಲರು ಮಹಿಳೆ ಇಂತಹ ಹಿನ್ನೆಲೆಯಿಂದ ಬಂದು ಸಮಾಜಕ್ಕೆ ಏನನ್ನಾದರೂ ಮಾಡಿದ್ದರೆ ಅದಕ್ಕೆ ನಾಚಿಕೆಪಡುವಂಥದ್ದು ಏನೂ ಇಲ್ಲ ಎಂದರು. ಹಿರಿಯ ನ್ಯಾಯವಾದಿ ಮುಕುಲ್ ರೋಹಟ್ಗಿ ಇದಕ್ಕೆ ಧ್ವನಿಗೂಡಿಸಿದರು. ʼಪದ್ಮಾವತ್ ಚಿತ್ರ ನಿಷೇಧ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಈ ಹಿಂದೆ ತಿರಸ್ಕರಿಸಿರುವ ವಿಚಾರವನ್ನು ಅವರು ಇದೇ ವೇಳೆ ಪ್ರಸ್ತಾಪಿಸಿದರು.
ಅರ್ಜಿದಾರರ ಪರವಾಗಿ ವಾದಿಸಿದ ವಕೀಲ ರಾಕೇಶ್ ಸಿಂಗ್ ಮಾನನಷ್ಟ ಎಂಬುದು ಸಂಬಂಧಪಟ್ಟ ವ್ಯಕ್ತಿಗೆ ಮಾತ್ರವಲ್ಲದೆ ಅವರ ಕುಟುಂಬದ ಇತರ ಸದಸ್ಯರಿಗೂ ಅನ್ವಯಿಸುತ್ತದೆ ಎಂದರು. ಕಾಠಿಯಾವಾಡಿ ಮಗನನ್ನು ದತ್ತು ಪಡೆದಿದ್ದಾರೆಯೇ ಎಂಬ ನ್ಯಾಯಾಲಯದ ಪ್ರಶ್ನೆಗೆ ಯಾವುದೇ ಅಧಿಕೃತ ದಾಖಲೆ ಇಲ್ಲ ಎಂಬ ಉತ್ತರ ದೊರೆಯಿತು.