ವಿಚಾರವಾದಿ, ಕಮ್ಯುನಿಸ್ಟ್ ಪಕ್ಷದ ರಾಜಕಾರಣಿ ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳಕ್ಕೆ (ಎಟಿಎಸ್) ವರ್ಗಾಯಿಸುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಪನ್ಸಾರೆ ಕುಟುಂಬಸ್ಥರು ಅರ್ಜಿ ಸಲ್ಲಿಸಿದ್ದಾರೆ.
ತನಿಖೆಯನ್ನು ಸಿಐಡಿಯಿಂದ ಎಟಿಎಸ್‌ಗೆ ವರ್ಗಾಯಿಸುವಂತೆ ಪನ್ಸಾರೆ ಅವರ ಮಗಳು ಮತ್ತು ಸೊಸೆ ಅರ್ಜಿ ಸಲ್ಲಿಸಿದ್ದಾರೆ. ಪನ್ಸಾರೆ ಹಾಗೂ ವಿಚಾರವಾದಿ ನರೇಂದ್ರ ದಾಭೋಲ್ಕರ್, ಸಂಶೋಧಕ ಎಂ ಎಂ ಕಲಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಹಿಂದೆ ದೊಡ್ಡ ಪಿತೂರಿ ಅಡಗಿದೆ ಎಂದು ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ದೆರೆ ಮತ್ತು ವಿಜಿ ಬಿಷ್ತ್ ಅವರಿದ್ದ ಪೀಠದ ಎದುರು ಪನ್ಸಾರೆ ಪರ ವಕೀಲ ಅಭಯ್ ನೇವಗಿ ವಾದ ಮಂಡಿಸಿದರು.
ಧಾಬೋಲ್ಕರ್ ಪ್ರಕರಣದಲ್ಲಿ ಇದಾಗಲೇ ತನಿಖೆ ಪ್ರಾರಂಭವಾಗಿರುವುದರಿಂದ ಅದನ್ನು ವರ್ಗಾಯಿಸಲು ಸಾಧ್ಯವಾಗದು, ಆದರೆ ಪನ್ಸಾರೆ ಪ್ರಕರಣವನ್ನು ವರ್ಗಾಯಿಸಬಹುದು ಎಂದು ಅವರು ಹೇಳಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಸರ್ಕಾರಕ್ಕೆ ನೋಟಿಸ್ ನೀಡಿ ಪ್ರತಿಕ್ರಿಯೆ ಕೇಳಿದೆ.
ನಾಲ್ಕೂ ಕೊಲೆಗಳಿಗೆ ಪರಸ್ಪರ ಸಂಬಂಧ ಇದ್ದು ದಾಳಿಯ ಹಿಂದಿನ ಸೂತ್ರಧಾರ ಒಬ್ಬನೇ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಆದ್ದರಿಂದ ಆ ಸೂತ್ರಧಾರನನ್ನು ಪತ್ತೆ ಹಚ್ಚಲು ಎಟಿಎಸ್‌ಗೆ ತನಿಖೆ ವರ್ಗಾಯಿಸುವಂತೆ ಅರ್ಜಿ ಕೋರಿದೆ.