1990ರಲ್ಲಿ ಕಾಶ್ಮೀರದಲ್ಲಿ ನಡೆದ ಪಂಡಿತರ ಹತ್ಯಾಕಾಂಡ ಕುರಿತು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಅಥವಾ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಯಿಂದ ತನಿಖೆ ನಡೆಸಬೇಕು ಎಂದು ಕೋರಿ ಕಾಶ್ಮೀರಿ ಪಂಡಿತರ ಸಂಘಟನೆಯೊಂದು ಸುಪ್ರೀಂಕೋರ್ಟ್‌ಗೆ ಕ್ಯುರೇಟೀವ್ ಅರ್ಜಿ (ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ತಿರಸ್ಕೃತವಾದ ನಂತರವೂ ಪರಿಹಾರ ಕೋರಿ ಸಲ್ಲಿಸಬಹುದಾದ ಅಂತಿಮ ಮನವಿ) ಸಲ್ಲಿಸಿದೆ.
ಹಿಂಸಾಚಾರದ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು 2017ರಲ್ಲಿ ವಜಾಗೊಳಿಸಿದ್ದ ಸುಪ್ರೀಂ ಕೋರ್ಟ್ ತೀರ್ಪನ್ನು ʼರೂಟ್ಸ್ ಇನ್ ಕಾಶ್ಮೀರ್ʼ ಸಂಘಟನೆ ಸಲ್ಲಿಸಿರುವ ಅರ್ಜಿ ಪ್ರಶ್ನಿಸಿದೆ. ತೀರ್ಪಿನ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ "ಘಟನೆ ನಡೆದು 27ಕ್ಕೂ ಹೆಚ್ಚು ವರ್ಷಗಳು ಕಳೆದಿವೆ. ಇದರಿಂದ ಅರ್ಜಿಯ ಉದ್ದೇಶ ಫಲಪ್ರದವಾಗದು. ಪುರಾವೆಗಳು ಲಭ್ಯ ಇರುವುದಿಲ್ಲ" ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿತ್ತು.
ಪ್ರಸ್ತುತ ಅರ್ಜಿಯ ಪ್ರಮುಖಾಂಶಗಳು
- 1989- 90, 1997 ಮತ್ತು 1998 ರ ಅವಧಿಯಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ನಡೆಸಿದ್ದ ಯಾಸಿನ್ ಮಲಿಕ್ ಮತ್ತು ಫಾರೂಕ್ ಅಹ್ಮದ್ ದಾರ್ @ ಬಿಟ್ಟಾ ಕರಾಟೆ, ಜಾವೇದ್ ನಲ್ಕಾ ಮತ್ತಿತರ ಭಯೋತ್ಪಾದಕರ ವಿರುದ್ಧ ಜಮ್ಮು ಕಾಶ್ಮೀರ ಪೊಲೀಸರು 26 ವರ್ಷ ಕಳೆದರೂ ತನಿಖೆ ನಡೆಸಿಲ್ಲ.
- 1989-90, 1997 ಮತ್ತು 1998 ರಲ್ಲಿ ಕಾಶ್ಮೀರಿ ಪಂಡಿತರ ವಿರುದ್ಧ ನಡೆದ ಎಲ್ಲಾ ಅಪರಾಧಗಳ ಎಫ್‌ಐಆರ್/ ತನಿಖೆಯನ್ನು ಸಿಬಿಐ ಅಥವಾ ಎನ್‌ಐಎ ಇಲ್ಲವೇ ಅಂತಹ ಯಾವುದೇ ಸ್ವತಂತ್ರ ತನಿಖಾ ಸಂಸ್ಥೆಗೆ ವರ್ಗಾಯಿಸಬೇಕು.
- ಕಾಶ್ಮೀರಿ ಪಂಡಿತರ ಹತ್ಯೆಗಳಿಗೆ ಸಂಬಂಧಿಸಿದ ಎಲ್ಲಾ ಎಫ್‌ಐಆರ್‌ಗಳು/ಪ್ರಕರಣಗಳನ್ನು ಕಾಶ್ಮೀರದಿಂದ ಬೇರೆ ರಾಜ್ಯಕ್ಕೆ (ಮೇಲಾಗಿ ದೆಹಲಿಯ ಎನ್‌ಸಿಟಿ ರಾಜ್ಯ) ವರ್ಗಾಯಿಸುವುದು. ಇದರಿಂದ ಸಾಕ್ಷಿಗಳ ರಕ್ಷಣೆ ಸಾಧ್ಯ. ಆ ಸಾಕ್ಷಿಗಳು ಪೊಲೀಸರು ಮತ್ತು ನ್ಯಾಯಾಲಯಗಳನ್ನು ಸಂಪರ್ಕಿಸಲು ಹಿಂಜರಿಯುವುದು ತಪ್ಪುತ್ತದೆ.
- ಭಾರತೀಯ ವಾಯುಪಡೆಯ 4 ಅಧಿಕಾರಿಗಳ ಭೀಕರ ಹತ್ಯೆ ಘಟನೆಗೆ ಸಂಬಂಧಿಸಿದಂತೆ ಯಾಸಿನ್ ಮಲಿಕ್ ವಿರುದ್ಧ ಸಿಬಿಐ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ಪೂರ್ಣಗೊಳಿಸಿ ಕಾನೂನು ಕ್ರಮ ಜರುಗಿಸುವುದು.
- ಕಾಶ್ಮೀರಿ ಪಂಡಿತರ ಹತ್ಯಾಕಾಂಡಗಳ ತನಿಖೆಗಾಗಿ ಸ್ವತಂತ್ರ ಸಮಿತಿ ಅಥವಾ ಆಯೋಗದ ನೇಮಕ ಮಾಡುವುದು.
ಏನಿದು ಕ್ಯುರೇಟೀವ್ ಅರ್ಜಿ?
ಇದು ಕುಂದುಕೊರತೆಗಳ ಪರಿಹಾರಕ್ಕಾಗಿ ಇರುವ ಕೊನೆಯ ನ್ಯಾಯಾಂಗ ಸಾಧನ. ರೂಪಾ ಅಶೋಕ್ ಹುರ್ರಾ ಮತ್ತು ಅಶೋಕ್ ಹುರ್ರಾ ನಡುವಣ ಪ್ರಕರಣದಲ್ಲಿ ತೀರ್ಪು ನೀಡುವಾಗ ಸುಪ್ರೀಂಕೋರ್ಟ್ ಈ ಅರ್ಜಿಯನ್ನು ಪರಿಚಯಿಸಿತು. ಇಂತಹ ಅರ್ಜಿಯನ್ನು ಗೌಪ್ಯವಾಗಿ ನ್ಯಾಯಾಧೀಶರು ವಿಚಾರಣೆ ನಡೆಸುತ್ತಾರೆ. ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಲು ಹಿರಿಯ ವಕೀಲರ ಪ್ರಮಾಣಪತ್ರ ಅಗತ್ಯ. ಪ್ರಸ್ತುತ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧಕ್ಷ ವಿಕಾಸ್ ಸಿಂಗ್ ಪ್ರಮಾಣಪತ್ರ ನೀಡಿದ್ದಾರೆ.