Shahi Mosque, Shri Krishna Janmasthan
Shahi Mosque, Shri Krishna Janmasthan 
ಸುದ್ದಿಗಳು

[ಬ್ರೇಕಿಂಗ್] ಕೃಷ್ಣ ಜನ್ಮಭೂಮಿಯಲ್ಲಿ ಈದ್ಗಾ ಮಸೀದಿ ತೆರವು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಜಾಗೊಳಿಸಿದ ಮಥುರಾ ನ್ಯಾಯಾಲಯ

Bar & Bench

ಕೃಷ್ಣ ಜನ್ಮಭೂಮಿಯಲ್ಲಿ ಶಾಹಿ ಈದ್ಗಾ ಮಸೀದಿ ನಿರ್ಮಿಸಲಾಗಿರುವುದನ್ನು ತೆರವುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಿವಿಲ್ ಮೊಕದ್ದಮೆಯ ವಿಚಾರಣೆ ನಡೆಸಲು ಮಥುರಾ ನ್ಯಾಯಾಲಯವು ಬುಧವಾರ ನಿರಾಕರಿಸಿದೆ.

ಎಡಿಜೆ ಛಾಯಾ ಶರ್ಮಾ ಅವರು ಆದೇಶ ಹೊರಡಿಸಿದ್ದು, ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ-1991 ಅಡಿ ಅರ್ಜಿ ಒಪ್ಪಿಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂಬ ಕಾರಣ ನೀಡಿ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿತು.

ಭೂ ಒತ್ತುವರಿ ಮತ್ತು ಮಸೀದಿ ತೆರೆವುಗೊಳಿಸುವಂತೆ ಕೋರಿ ಶ್ರೀಕೃಷ್ಣ ವಿರಾಜಮಾನ್ ಅವರು ತಮ್ಮ ವಾದಮಿತ್ರರ ಮೂಲಕ ಸಿವಿಲ್ ಪ್ರಕರಣ ದಾಖಲಿಸಿದ್ದರು.

“ಶ್ರೀಕೃಷ್ಣ ವಿರಾಜಮಾನ್ ದೇವರಿಗೆ ಸೇರಿದ ಮಥುರಾದ ಕತ್ರ ಕೇಶವ್ ದೇವ್ ನಗರದಲ್ಲಿರುವ ಖೇವತ್ ನಂಬರ್ 225ರಲ್ಲಿ ಸುನ್ನಿ ಕೇಂದ್ರ ವಕ್ಫ್ ಮಂಡಳಿಯ ಒಪ್ಪಿಗೆಯ ಮೇರೆಗೆ ಈದ್ಗಾ ಮಸೀದಿ ಟ್ರಸ್ಟ್ ನ ನಿರ್ವಹಣಾ ಸಮಿತಿಯು ಭೂಮಿ ಒತ್ತುವರಿ ಮಾಡಿಕೊಂಡಿರುವ ಜಾಗ ಮತ್ತು ಅಲ್ಲಿ ನಿರ್ಮಿಸಿರುವ ಕಟ್ಟಡವನ್ನು ತೆರವುಗೊಳಿಸುವಂತೆ’ ಮನವಿಯಲ್ಲಿ ವಿವರಿಸಲಾಗಿತ್ತು.

"ಭಾರತದಲ್ಲಿ ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿರುವ ಹಿಂದೂ ಕಾನೂನಿನ ಪ್ರಕಾರ ದೇವರಿಗೆ ಸೇರಿದ ಆಸ್ತಿಯು ದೇವರದ್ದಾಗಿಯೇ ಉಳಿಯಲಿದೆ. ದೇವರಿಂದ ವಶಪಡಿಸಿಕೊಳ್ಳಲಾದ ಆಸ್ತಿಯನ್ನು ನಾಶಪಡಿಸಿಲ್ಲವಾದರೆ ಅಥವಾ ಕಳೆದುಕೊಂಡಿಲ್ಲವಾದರೆ ಆಕ್ರಮಣಕಾರು ಅಥವಾ ದಾಳಿಕೋರರಿಂದ ಮುಕ್ತಿಗೊಂಡ ಬಳಿಕ ಆಸ್ತಿಯನ್ನು ಮತ್ತೆ ಪಡೆದುಕೊಳ್ಳಬಹುದು, ಮರು ಸ್ವಾಧೀನ ಮಾಡಿಕೊಳ್ಳಬಹುದಾಗಿದೆ” ಎಂದೂ ವಾದಿಸಲಾಗಿತ್ತು.

ಕ್ರಿಸ್ತ ಶಕ 31.07.1658 ರಿಂದ 3.03.1707 ವರೆಗೆ ಭಾರತದಲ್ಲಿ ಆಳ್ವಿಕೆ ನಡೆಸಿದ್ದ ಇಸ್ಲಾಂನ ಕಟ್ಟಾ ಅನುಯಾಯಿಯಾದ ಮೊಘಲ್ ದೊರೆ ಔರಂಗಜೇಬ್, ಭಾರತದಲ್ಲಿದ್ದ ಹಲವು ಹಿಂದೂ ಧಾರ್ಮಿಕ ಕೇಂದ್ರಗಳು ಹಾಗೂ ದೇವಸ್ಥಾನಗಳನ್ನು ನಾಶ ಮಾಡಲು ಆದೇಶಿಸಿದ್ದ. “ಕ್ರಿಸ್ತ ಶಕ 1669-70ರಲ್ಲಿ ಮಥುರಾದ ಶ್ರೀಕೃಷ್ಣನ ಜನ್ಮಸ್ಥಳವಾದ ಕತ್ರ ಕೇಶವ್ ದೇವ್ ದೇವಸ್ಥಾನವನ್ನೂ ನಾಶ ಮಾಡಲು ಔರಂಗಜೇಬ್ ಆದೇಶಿಸಿದ್ದ. ಈ ಕೆಲಸದಲ್ಲಿ ಔರಂಗಜೇಬ್‌ನ ಸೇನೆ ಭಾಗಶಃ ಯಶಸ್ವಿಯಾಗಿತ್ತು. ಅಲ್ಲಿ ಅಧಿಕಾರದ ದರ್ಪ ತೋರಿ ಕಟ್ಟಡ ನಿರ್ಮಿಸಿ ಅದಕ್ಕೆ ಈದ್ಗಾ ಮಸೀದಿ ಎಂದು ನಾಮಕರಣ ಮಾಡಲಾಗಿದೆ” ಎಂದು ಮನವಿಯಲ್ಲಿ ವಿವರಿಸಲಾಗಿತ್ತು. “ಜನ್ಮಭೂಮಿ ಟ್ರಸ್ಟ್‌” ತನ್ನ ಆಸ್ತಿಯನ್ನು ಸಂರಕ್ಷಿಸಿ ಉಳಿಸುವ ಕೆಲಸವನ್ನು ಮಾಡುವಲ್ಲಿ ವಿಫಲವಾಗಿತ್ತು. 1958ರಿಂದ ಟ್ರಸ್ಟ್‌ ನಿಷ್ಕ್ರಿಯವಾಗಿದೆ ಎಂದು ಶ್ರೀಕೃಷ್ಣ ದೇವರು ಮನವಿಯಲ್ಲಿ ವಿವರಿಸಿದ್ದಾರೆ.