Android, Google and CCI
Android, Google and CCI 
ಸುದ್ದಿಗಳು

ಮಾರುಕಟ್ಟೆಯಲ್ಲಿನ ಪ್ರಬಲ ಸ್ಥಾನ ದುರುಪಯೋಗ: ಗೂಗಲ್‌ಗೆ ವಿಧಿಸಿರುವ ₹1,337 ಕೋಟಿ ದಂಡ ಎತ್ತಿಹಿಡಿದ ಎನ್‌ಸಿಎಲ್‌ಎಟಿ

Bar & Bench

ಆಂಡ್ರಾಯ್ಡ್‌ ಮೊಬೈಲ್‌ ಸಾಧನ ವ್ಯವಸ್ಥೆಯ ಮಾರುಕಟ್ಟೆಯಲ್ಲಿನ ತನ್ನ ಪ್ರಬಲ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ಗೂಗಲ್‌ಗೆ ವಿಧಿಸಿದ್ದ ರೂ.1,337.76 ಕೋಟಿ ದಂಡದ ಆದೇಶವನ್ನು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ಬುಧವಾರ ಎತ್ತಿಹಿಡಿದಿದೆ.

ಆದಾಗ್ಯೂ ಸಿಸಿಐ ನೀಡಿರುವ ನಾಲ್ಕು ನಿರ್ದೇಶನಗಳನ್ನು ಎನ್‌ಸಿಎಲ್‌ಎಟಿ ಅಧ್ಯಕ್ಷ ನ್ಯಾ. ಅಶೋಕ್‌ ಭೂಷಣ್‌, ತಾಂತ್ರಿಕ ಸದಸ್ಯ ಡಾ. ಅಲೋಕ್‌ ಶ್ರೀವಾಸ್ತವ ಅವರಿದ್ದ ಪೀಠ ಬದಿಗೆ ಸರಿಸಿತು.

ಬದಿಗೆ ಸರಿಸಲಾದ ನಿರ್ದೇಶನಗಳ ವಿವರ ಇಂತಿದೆ:

  • ಮೂಲ ಸಾಧನ ತಯಾರಕರು (ಒಇಎಂಗಳು), ಅಪ್ಲಿಕೇಷನ್‌ ಡೆವಲಪರ್‌ಗಳು ಹಾಗೂ ಅಸ್ತಿತ್ವದಲ್ಲಿರುವ ಅಥವಾ ಸಂಭಾವ್ಯ ಪ್ರತಿಸ್ಪರ್ಧಿಗಳಿಗೆ ಅನನುಕೂಲಕರವಾಗುವಂತೆ ಗೂಗಲ್‌ ತನ್ನ ಪ್ಲೇ ಸೇವೆಗಳ ಅಪ್ಲಿಕೇಷನ್‌ ಪ್ರೋಗ್ರಾಮಿಂಗ್‌ ಇಂಟರ್ಫೇಸ್ (ಎಪಿಐಗಳು) ಬಳಕೆ ನಿರಾಕರಿಸುವಂತಿಲ್ಲ.

  • ಗೂಗಲ್‌ ತನ್ನ ಪೂರ್ವ-ಸ್ಥಾಪಿತ ಅಪ್ಲಿಕೇಶನ್‌ಗಳನ್ನು ಬಳಕೆದಾರರು ತೆಗೆದುಹಾಕುವುದನ್ನು (ಅನ್‌ಇನ್ಸ್ಟಾಲ್) ನಿರ್ಬಂಧಿಸುವಂತಿಲ್ಲ.

  • ಆಪ್ ಸ್ಟೋರ್‌ಗಳ ಡೆವಲಪರ್‌ಗಳಿಗೆ ತಮ್ಮ ಆಪ್ ಸ್ಟೋರ್‌ಗಳನ್ನು ಗೂಗಲ್ ಪ್ಲೇ ಸ್ಟೋರ್ ಮೂಲಕ ವಿತರಿಸಲು ಗೂಗಲ್ ಅನುಮತಿಸತಕ್ಕದ್ದು.

  • ಸೈಡ್-ಲೋಡಿಂಗ್ ಮೂಲಕ ತಮ್ಮ ಅಪ್ಲಿಕೇಶನ್‌ಗಳನ್ನು ವಿತರಿಸಲು ಅಪ್ಲಿಕೇಶನ್ ಡೆವಲಪರ್‌ಗಳ ಸಾಮರ್ಥ್ಯವನ್ನು ಯಾವುದೇ ರೀತಿಯಲ್ಲಿ ಗೂಗಲ್‌ ನಿರ್ಬಂಧಿಸುವಂತಿಲ್ಲ.

ಗೂಗಲ್‌ ನಡೆ ಬಗ್ಗೆ ಸಿಸಿಐ ನಡೆಸಿದ್ದ ತನಿಖೆಯಲ್ಲಿ ಸಹಜ ನ್ಯಾಯದ ತತ್ವಗಳ ಉಲ್ಲಂಘನೆಯಾಗಿಲ್ಲ ಎಂದು ಎನ್‌ಸಿಎಎಲ್‌ಟಿ ತಿಳಿಸಿದೆ. ಇದೇ ವೇಳೆ ಆಂಡ್ರಾಯ್ಡ್ ಫೋನ್‌ಗಳಲ್ಲಿ ಸಂಪೂರ್ಣ ಗೂಗಲ್ ಮೊಬೈಲ್ ಸೇವೆಗಳ (ಜಿಎಂಎಸ್) ಪೂರ್ವ-ಸ್ಥಾಪನೆಯು ಅನ್ಯಾಯದ ಬಳಕೆಗೆ ಕಾರಣವಾಗುತ್ತದೆ ಎಂದು ಆದೇಶ ಹೇಳಿದೆ.