NEET SUPER SPECIALITY EXAMS 2021
NEET SUPER SPECIALITY EXAMS 2021  
ಸುದ್ದಿಗಳು

ನೀಟ್ ಪಿಜಿ ಪ್ರವೇಶಾತಿಗಾಗಿ ಮುಂದಿನ ವರ್ಷದಿಂದ ಪರಿಷ್ಕೃತ ಪರೀಕ್ಷಾ ಮಾದರಿ: ಸುಪ್ರೀಂಕೋರ್ಟ್‌ಗೆ ಕೇಂದ್ರ

Bar & Bench

ನೀಟ್‌ ಪಿಜಿ ಸೂಪರ್‌ ಸ್ಪೆಷಾಲಿಟಿ ಪರೀಕ್ಷೆಯ ಪರಿಷ್ಕೃತ ಪರೀಕ್ಷಾ ಮಾದರಿಯನ್ನು ಪ್ರಸಕ್ತ ಸಾಲಿನ ಬದಲಿಗೆ 2022ರಿಂದಲೇ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ಬುಧವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಇದೇ ವೇಳೆ, ನೀಟ್‌ ಪಿಜಿ ಎಸ್‌ಎಸ್‌ 2021 ಪರೀಕ್ಷೆಗಳು ಈವರೆಗಿನಂತೆ ಹಳೆಯ ಮಾದರಿಯಲ್ಲಿಯೇ ನಡೆಯಲಿರುವುದನ್ನೂ ಸಹ ಕೇಂದ್ರ ಸರ್ಕಾರವು ಖಚಿತ ಪಡಿಸಿದೆ.

ನ್ಯಾಯಾಲಯದ ಅಭಿಪ್ರಾಯ ಮತ್ತು ಅಭ್ಯರ್ಥಿಗಳ ಹಿತಾಸಕ್ತಿ ಗಮನಿಸಿ 2021ರಲ್ಲಿ ಪರಿಷ್ಕೃತ ಪರೀಕ್ಷಾ ಮಾದರಿ ಜಾರಿಗೊಳಿಸದೇ ಇರಲು ನಿರ್ಧರಿಸಲಾಗಿದೆ ಎಂದು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ನೇತೃತ್ವದ ಪೀಠಕ್ಕೆ ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ತಿಳಿಸಿದರು. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಪರೀಕ್ಷೆ ಹಳೆಯ ಮಾದರಿಯಂತೆ ನಡೆಯಲಿದೆ. ಇದನ್ನೇ ತನ್ನ ಆದೇಶದಲ್ಲಿ ದಾಖಲಿಸಿದ ನ್ಯಾಯಾಲಯ ಅರ್ಜಿಯನ್ನು ವಿಲೇವಾರಿ ಮಾಡಿತು. ಪರಿಷ್ಕೃತ ಪರೀಕ್ಷಾ ಮಾದರಿಯ ಸಿಂಧುತ್ವಕ್ಕೆ ಸಂಬಂಧಿಸಿದಂತೆ ಆದೇಶ ತೀರ್ಪು ನೀಡುವುದಿಲ್ಲ ಎಂದು ಇದೇ ವೇಳೆ ನ್ಯಾಯಾಲಯ ಸ್ಪಷ್ಟಪಡಿಸಿತು.

ನೀಟ್‌ ಪಿಜಿ ಸೂಪರ್ ಸ್ಪೆಷಾಲಿಟಿ 2021ರ ಪರೀಕ್ಷಾ ಮಾದರಿಯಲ್ಲಿನ ಹಠಾತ್‌ ಬದಲಾವಣೆ, ವೈದ್ಯಕೀಯ ಶಿಕ್ಷಣ ವ್ಯಾಪಾರ ಆಗಿರುವುದರ ಸಂಕೇತ ಎಂದು ಸುಪ್ರೀಂಕೋರ್ಟ್‌ ಮಂಗಳವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿತ್ತು. ಮುಂದಿನ ವರ್ಷದಿಂದ ಅಧಿಕಾರಿಗಳು ಹೊಸ ಮಾದರಿ ಜಾರಿಗೊಳಿಸಿದರೆ ಸ್ವರ್ಗವೇನು ಬಿದ್ದುಹೋಗುತ್ತದೆಯೇ ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ವಿಕ್ರಮ್ ನಾಥ್ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ಕುಟುಕಿತ್ತು.

"ನಿಮಗೆ ಅಧಿಕಾರವಿದೆ ಎಂದ ಮಾತ್ರಕ್ಕೆ ಅದನ್ನು (ಈ ರೀತಿ) ಹೀಗೆ ಬಳಸಬಹುದೇ? ಮುಂದಿನ ವರ್ಷದಿಂದ ಅದನ್ನು ಮಾಡಿದ್ದರೆ ಸ್ವರ್ಗವೇನು ಬಿದ್ದು ಹೋಗುತ್ತಿತ್ತೇ? ವಿದ್ಯಾರ್ಥಿಗಳು ತಯಾರಿ ಮಾಡಿಕೊಳ್ಳಲು ಒಂದು ವರ್ಷ ಸಮಯ ನೀಡಿದರೆ ಏನಾಗುತ್ತದೆ. ಮಾದರಿ ಬದಲಿಸುವುದು ತಜ್ಞರ ವಿಷಯವ್ಯಾಪ್ತಿಗೆ ಬರುವಂಥದ್ದು, ಹಾಗಾಗಿ ಅದನ್ನು ತಜ್ಞರು ಮಾಡುವ ರೀತಿಯಲ್ಲಿ ಮಾಡಿ, ಈ ರೀತಿಯಲ್ಲಿ ಅಲ್ಲ. ಇಲ್ಲದೆ ಹೋದರೆ, ಇದು ವೈದ್ಯಕೀಯ ವೃತ್ತಿ ಮತ್ತು ವೈದ್ಯಕೀಯ ನಿಯಂತ್ರಣ ಕೂಡ ವ್ಯವಹಾರವಾಗಿದೆ ಎಂಬ ಸಂದೇಶ ರವಾನಿಸುತ್ತದೆ! ವಿವೇಕ ಮೇಲುಗೈ ಸಾಧಿಸುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಅದು ಹೇಳಿದ್ದು ಇಲ್ಲದಿದ್ದರೆ ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ ಎಂದು ಎಚ್ಚರಿಸಿತ್ತು.

ಪರೀಕ್ಷಾ ಮಾದರಿಯಲಿ ಕೊನೆಯ ಕ್ಷಣದ ದಿಢೀರ್‌ ಬದಲಾವಣೆಯನ್ನು ಪ್ರಶ್ನಿಸಿ ಸ್ನಾತಕೋತ್ತರ ಪದವಿಗೆ ಅರ್ಹರಾದ 41 ವೈದ್ಯರು ಮನವಿ ಸಲ್ಲಿಸಿದ್ದರು. ಇದರಲ್ಲಿ ಪರೀಕ್ಷಾ ಮಾದರಿಯನ್ನು ಸಾಮಾನ್ಯ ವೈದ್ಯಕೀಯಕ್ಕೆ ಸೇರಿದ ವೈದ್ಯಕೀಯ ಅಭ್ಯರ್ಥಿಗಳನ್ನು ಗಮನದಲ್ಲಿರಿಸಿಕೊಂಡು ರೂಪಿಸಲಾಗಿದೆ ಎಂದು ದೂರಲಾಗಿತ್ತು.