ಸುದ್ದಿಗಳು

ಕೋವಿಡ್ ಉಲ್ಬಣ: ಪ್ರಕರಣಗಳ ದಾಖಲಾತಿ ಗಡುವು ವಿಸ್ತರಣೆಗಾಗಿ ಸುಪ್ರೀಂ ಮೊರೆ ಹೋದ ಎಸ್‌ಸಿಎಒಆರ್‌ಎ

ಕೋವಿಡ್ ಸಾಂಕ್ರಾಮಿಕದ ಮೊದಲ ಅಲೆ ವೇಳೆ 2020ರ ಮಾರ್ಚ್‌ನಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ್ದ ಆದೇಶವನ್ನು ಮತ್ತೆ ಜಾರಿಗೊಳಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.

Bar & Bench

ದೇಶದೆಲ್ಲೆಡೆ ಕೋವಿಡ್‌ ಪ್ರಕರಣಗಳು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಸಾಮಾನ್ಯ ಮತ್ತು ವಿಶೇಷ ಕಾನೂನುಗಳಡಿಯ ಪ್ರಕರಣಗಳನ್ನು ದಾಖಲಿಸಲು ಇರುವ ಗಡುವನ್ನು ಅಮಾನತುಗೊಳಿಸುವಂತೆ ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್ ಆನ್ ರೆಕಾರ್ಡ್ ಅಸೋಸಿಯೇಷನ್ (ಎಸ್‌ಸಿಎಒಆರ್‌ಎ) ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದೆ.

ಈ ನಿಟ್ಟಿನಲ್ಲಿ ಕೋವಿಡ್ ಸಾಂಕ್ರಾಮಿಕದ ಮೊದಲ ಅಲೆ ಉಂಟಾದಾಗ 2020ರ ಮಾರ್ಚ್‌ನಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ್ದ ಆದೇಶವನ್ನು ಮತ್ತೆ ಜಾರಿಗೊಳಿಸುವಂತೆ ಎಸ್‌ಸಿಎಒಆರ್‌ಎ ಅರ್ಜಿಯಲ್ಲಿ ಕೋರಲಾಗಿದೆ. ವಕೀಲ ಅಭಿನವ್ ರಾಮಕೃಷ್ಣ ಅವರ ಮೂಲಕ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಒಮಿಕ್ರಾನ್ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ವಕೀಲ ಸಮುದಾಯ, ದಾವೆದಾರರು ಮತ್ತು ನ್ಯಾಯಾಧೀಶರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ನ್ಯಾಯಾಲಯ ಮಾರ್ಚ್ 15, 2020 ರಿಂದ ಜಾರಿಗೆ ಬರುವಂತೆ ಮಾರ್ಚ್ 23, 2020 ರಂದು ಎಲ್ಲಾ ಸಾಮಾನ್ಯ ಮತ್ತು ವಿಶೇಷ ಕಾನೂನುಗಳಡಿಯ ಪ್ರಕರಣಗಳನ್ನು ದಾಖಲಿಸಲು ಇದ್ದ ಗಡುವನ್ನ ವಿಸ್ತರಿಸಿತ್ತು. ನಂತರವೂ ಕಾಲಕಾಲಕ್ಕೆ ಗಡುವು ವಿಸ್ತರಣೆ ಮಾಡಲಾಗಿತ್ತು. ಆದರೆ ಕೋವಿಡ್ ಪ್ರಕರಣಗಳು ಇಳಿಮುಖವಾದ ಬಳಿಕ ನ್ಯಾಯಾಲಯ ಮಾರ್ಚ್ 8, 2021ರಂದು ಆದೇಶ ಹಿಂಪಡೆದಿತ್ತು.

ಈಗ ಸಾಂಕ್ರಾಮಿಕ ರೋಗದ ಪ್ರಕರಣಗಳು ಹೆಚ್ಚುತ್ತಿರುವುದನ್ನು ಹಾಗೂ ದೇಶ ಒಮಿಕ್ರಾನ್‌ ಭೀತಿ ಎದುರಿಸುತ್ತಿರುವುದನ್ನು ಪ್ರಸ್ತಾಪಿಸಿರುವ ಸಂಘ ನ್ಯಾಯಿಕ ಹಿತದೃಷ್ಟಿಯಿಂದ ಪರಿಸ್ಥಿತಿಯಲ್ಲಿ ಉಂಟಾಗಿರುವ ದಿಢೀರ್‌ ಬದಲಾವಣೆಯ ಹಿನ್ನೆಲೆಯಲ್ಲಿ ಪ್ರಸ್ತುತ ಅರ್ಜಿಯನ್ನು ಪುರಸ್ಕರಿಸಬೇಕೆಂದು ವಿನಂತಿಸಿದೆ.