ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನಾ ಸಂಸದ (ಎಂಪಿ) ಸಂಜಯ್ ರಾವುತ್ ಅವರನ್ನು ಆಗಸ್ಟ್ 22ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂಬೈ ನ್ಯಾಯಾಲಯ ಸೋಮವಾರ ಅದೇಶಿಸಿದೆ.
ಹೆಚ್ಚುವರಿಯಾಗಿ ತನ್ನ ವಶಕ್ಕೆ ಒಪ್ಪಿಸಲು ಕೋರಿಲ್ಲ ಎಂದು ಜಾರಿ ನಿರ್ದೇಶನಾಲಯ ಹೇಳಿದ ಬಳಿಕ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ ಸ್ಥಾಪಿತವಾದ ವಿಶೇಷ ನ್ಯಾಯಾಲಯ ಈ ಆದೇಶ ನೀಡಿತು.
ಸಂಸದ ರಾವತ್ ಅವರಿಗೆ ಹೃದ್ರೋಗ ಇರುವುದನ್ನು ವೈದ್ಯಕೀಯ ದಾಖಲೆಗಳ ಮೂಲಕ ಗಮನಿಸಿದ ನ್ಯಾಯಾಧೀಶ ಎಂ.ಜಿ.ದೇಶಪಾಂಡೆ ಅವರು ನ್ಯಾಯಾಂಗ ಬಂಧನದಲ್ಲಿರುವಾಗ ಸಂಸದರಿಗೆ ಅವರ ಔಷಧಿಗಳ ಜೊತೆಗೆ ಮನೆಯಿಂದ ಆಹಾರ ಪೂರೈಸಲು ಅನುಮತಿಸಿದರು. ವೈದ್ಯರ ಸೂಚನೆಯಂತೆ ಸೂಕ್ತ ಔಷಧಗಳನ್ನು ಒದಗಿಸಬೇಕು ಎಂದು ಜೈಲು ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿತು.
ಮುಂಬೈನ ಪತ್ರಾ ಚಾಲ್ ಭೂ ಹಗರಣ ಮತ್ತು ಅದಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ₹ 1 ಕೋಟಿಗೂ ಹೆಚ್ಚು ಹಣ ನೇರವಾಗಿ ಪಡೆದ ಆರೋಪದಡಿ ಆಗಸ್ಟ್ 1 ರ ಮಧ್ಯರಾತ್ರಿ ರಾವತ್ ಅವರನ್ನು ಬಂಧಿಸಲಾಗಿತ್ತು.