Siddique Kappan 
ಸುದ್ದಿಗಳು

ಅಕ್ರಮ ಹಣ ವರ್ಗಾವಣೆ ಪ್ರಕರಣ: ಪತ್ರಕರ್ತ ಸಿದ್ದಿಕ್ ಕಪ್ಪನ್‌ಗೆ ಜಾಮೀನು ನಿರಾಕರಿಸಿದ ಲಖನೌ ನ್ಯಾಯಾಲಯ

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಉತ್ತರ ಪೊಲೀಸರು ಕಪ್ಪನ್ ವಿರುದ್ಧ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 9ರಂದು ಕಪ್ಪನ್ ಅವರಿಗೆ ಜಾಮೀನು ನೀಡಿತ್ತು.

Bar & Bench

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ (ಪಿಎಂಎಲ್‌ಎ) ಜಾರಿ ನಿರ್ದೇಶನಾಲಯ (ಇ ಡಿ) ತನ್ನ ವಿರುದ್ಧ ಹೂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪತ್ರಕರ್ತ ಸಿದ್ದಿಕ್ ಕಪ್ಪನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಲಖನೌ ಸೆಷನ್ಸ್ ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ.

ಅಕ್ಟೋಬರ್ 12 ರಂದು ಜಿಲ್ಲಾ ನ್ಯಾಯಾಧೀಶ ಸಂಜಯ್ ಶಂಕರ್ ಪಾಂಡೆ ಅವರು ಈ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿದ್ದರು. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಉತ್ತರ ಪೊಲೀಸರು ಕಪ್ಪನ್ ವಿರುದ್ಧ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕಳೆದ ಸೆಪ್ಟೆಂಬರ್ 9ರಂದು ಕಪ್ಪನ್‌ ಅವರಿಗೆ ಜಾಮೀನು ನೀಡಿತ್ತು.

ಹಾಥ್‌ರಸ್‌ನಲ್ಲಿ ನಡೆದಿದ್ದ 19 ವರ್ಷದ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವರದಿಗೆಂದು ತೆರಳಿದ್ದ ಮಲಯಾಳಂ ಸುದ್ದಿ ಜಾಲತಾಣ ʼಅರಿಮುಖಂʼ ವರದಿಗಾರ ಮತ್ತು ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟದ (ಕೆಯುಡಬ್ಲ್ಯುಜೆ) ದೆಹಲಿ ಘಟಕದ ಕಾರ್ಯದರ್ಶಿ ಕಪ್ಪನ್  ಹಾಗೂ ಇತರ ಮೂವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿ ಯುಎಪಿಎ ಹಾಗೂ ಪಿಎಂಎಲ್‌ಎ ಕಾಯಿದೆಗಳಡಿ ಪ್ರಕರಣ ದಾಖಲಿಸಿದ್ದರು.

ಯುಎಪಿಎ ಪ್ರಕರಣದಲ್ಲಿ ಕಪ್ಪನ್‌ ಅವರಿಗೆ ಜಾಮೀನು ದೊರೆತಿದ್ದಾದರೂ ಪಿಎಂಎಲ್‌ಎ ಪ್ರಕರಣದಡಿ ಇನ್ನೂ ಜೈಲಿನಲ್ಲೇ ಇದ್ದಾರೆ.