ತನ್ನ ವಿರುದ್ಧ ಜಾರಿ ನಿರ್ದೇಶನಾಲಯ ಹೂಡಿದ್ದ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಜಿಯಾಬಾದ್ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಪತ್ರಕರ್ತೆ ರಾಣಾ ಅಯ್ಯೂಬ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ವಿ ರಾಮಸುಬ್ರಮಣಿಯನ್ ಮತ್ತು ಜೆ ಬಿ ಪರ್ದಿವಾಲಾ ಅವರಿದ್ದ ಪೀಠ “ಸೆಕ್ಷನ್ 3 ಪಿಎಂಎಲ್‌ಎ ಅಡಿಯಲ್ಲಿ ಪಟ್ಟಿ ಮಾಡಿರುವ ಆರು ಚಟುವಟಿಕೆಗಳಲ್ಲಿ ಯಾವುದಾದರೊಂದು ನಡೆದಿದ್ದರೂ ಅದು ಅಕ್ರಮ ಹಣ ವರ್ಗಾವಣೆಯಡಿ ನಡೆದ ಅಪರಾಧದ ಸ್ಥಳವಾಗುತ್ತದೆ. ಯಾವ ಸ್ಥಳ ಎನ್ನುವ ಪ್ರಶ್ನೆಯು ಸಾಕ್ಷ್ಯಗಳನ್ನು ಆಧರಿಸಿ ನಿರ್ಧರಿಸುವಂತಹದ್ದಾಗಿದೆ. ಹಾಗಾಗಿ, ನಾವು ಈ ವಿಷಯವನ್ನು ವಿಚಾರಣಾ ನ್ಯಾಯಾಲಯದ ಮುಂದೆ ಪ್ರಸ್ತಾಪಿಸಲು ಮುಕ್ತವಾಗಿರಿಸುತ್ತೇವೆ. ಅರ್ಜಿಯನ್ನು ವಜಾಗೊಳಿಸಿದ್ದೇವೆ," ಎಂದು ನ್ಯಾಯಾಲಯ ಹೇಳಿತು. ಪತ್ರಕರ್ತೆ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಕಳೆದ ವಾರ ಕಾಯ್ದಿರಿಸಿತ್ತು.
ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ ರಾಣಾ ಅವರ ವಿರುದ್ಧ ಜಾರಿ ನಿರ್ದೇಶನಾಲಯ ಹೂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಜಿಯಾಬಾದ್ ವಿಚಾರಣಾ ನ್ಯಾಯಾಲಯ ಆಕೆಗೆ ಸಮನ್ಸ್ ನೀಡಿತ್ತು. ಐಪಿಸಿ, ಮಾಹಿತಿ ತಂತ್ರಜ್ಞಾನ ತಿದ್ದುಪಡಿ ಕಾಯಿದೆ ಮತ್ತು ಕಪ್ಪುಹಣ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಗಾಜಿಯಾಬಾದ್‌ನ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 2021ರಲ್ಲಿ ರಾಣಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಇದನ್ನು ಆಧರಿಸಿ ಜಾರಿ ನಿರ್ದೇಶನಾಲಯ ರಾಣಾ ವಿರುದ್ಧ ಅಕ್ರಮ ಹಣ ವರ್ಗಾವಣೆ ಕುರಿತ ತನಿಖೆ ಆರಂಭಿಸಿತ್ತು.
ಜಾರಿ ನಿರ್ದೇಶನಾಲಯದ ಪ್ರಕಾರ, ಅಯ್ಯೂಬ್ ಅವರು ಆನ್‌ಲೈನ್ ವೇದಿಕೆಯಾದ ಕೆಟ್ಟೊದಲ್ಲಿ ನಿಧಿಸಂಗ್ರಹ ಅಭಿಯಾನ ಪ್ರಾರಂಭಿಸುವ ಮೂಲಕ ದತ್ತಿನಿಧಿ ಹೆಸರಿನಲ್ಲಿ ಸಾರ್ವಜನಿಕರಿಂದ ಅಕ್ರಮ ಹಣ ಸಂಪಾದಿಸಿದ್ದಾರೆ. ಮೂರು ವಿವಿಧ ಆನ್‌ಲೈನ್ ಅಭಿಯಾನಗಳ ಮೂಲಕ ವಿವಿಧ ಅವಘಡಗಳ ಸಂತ್ರಸ್ತರ ನೆರವಿಗೆಂದು ರಾಣಾ ಅಯ್ಯೂಬ್ ಒಟ್ಟು ರೂ. 2.69 ಕೋಟಿ ಚಂದಾ ಸಂಗ್ರಹಿಸಿದ್ದರು. ಇದರಲ್ಲಿ ಕೇವಲ ರೂ. 29 ಲಕ್ಷವನ್ನು ಮಾತ್ರವೇ ಅವರು ಉದ್ದೇಶಿತ ಪರಿಹಾರ ಚಟುವಟಿಕೆಗಳಿಗೆ ವಿನಿಯೋಗಿಸಿದ್ದು ಉಳಿದ ಹಣವನ್ನು ವೈಯಕ್ತಿಕ ಬಳಕೆಗೆ ಇರಿಸಿಕೊಂಡಿದ್ದರು ಎನ್ನುವುದು ಇ ಡಿ ಆಪಾದನೆ. ಈ ಹಿನ್ನೆಲೆಯಲ್ಲಿ ಆಕೆಯ ಖಾತೆಯಲ್ಲಿದ್ದ ರೂ. 1.7 ಕೋಟಿ ಹಣವನ್ನು ಇ ಡಿ ಮುಟ್ಟುಗೋಲು ಹಾಕಿಕೊಂಡಿದೆ.