ದೇಶದೆಲ್ಲೆಡೆ ಕೋವಿಡ್ ಪ್ರಕರಣಗಳು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಸಾಮಾನ್ಯ ಮತ್ತು ವಿಶೇಷ ಕಾನೂನುಗಳಡಿಯ ಪ್ರಕರಣಗಳನ್ನು ದಾಖಲಿಸಲು ಇರುವ ಕಾಲಮಿತಿ ಸಡಿಲಿಸಲು ಸುಪ್ರೀಂಕೋರ್ಟ್ ಸೋಮವಾರ ಸಮ್ಮತಿ ಸೂಚಿಸಿದೆ.
ಕಾಲಮಿತಿ ಸಡಿಲಿಸುವಂತೆ ಕೋರಿ ಸುಪ್ರೀಂಕೋರ್ಟ್ ಅಡ್ವೊಕೇಟ್ಸ್ ಆನ್ ರೆಕಾರ್ಡ್ ಅಸೋಸಿಯೇಷನ್ (ಎಸ್‌ಸಿಎಒಆರ್‌ಎ) ಸಲ್ಲಿಸಿದ್ದ ಮನವಿಯನ್ನು ಅಂಗೀಕರಿಸಿರುವುದಾಗಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಹಾಗೂ ಸೂರ್ಯಕಾಂತ್ ಅವರಿದ್ದ ಪೀಠ ಹೇಳಿತು.
ಈ ಕುರಿತ ವಿವರವಾದ ಆದೇಶ ನಂತರ ಸುಪ್ರೀಂಕೋರ್ಟ್ ಜಾಲತಾಣದಲ್ಲಿ ಪ್ರಕಟವಾಗಲಿದ್ದು ಯಾವುದಕ್ಕೆ ಸಡಿಲಿಕೆ ಅನ್ವಯವಾಗಲಿದೆ ಎಂಬ ಹೆಚ್ಚಿನ ಮಾಹಿತಿ ಇದರಲ್ಲಿ ದೊರೆಯಲಿದೆ.
ಮಾರ್ಚ್ 2020ರಂದು ಸುಪ್ರೀಂಕೋರ್ಟ್ ನೀಡಿದ್ದ ಮೂಲ ಆದೇಶವು ಅಕ್ಟೋಬರ್ 1, 2021 ರವರೆಗೆ ಜಾರಿಯಲ್ಲಿರುವುದರಿಂದ 2021ರ ಅಕ್ಟೋಬರ್ 2ರಿಂದ ಸಡಿಲಿಕೆ ನೀಡಬೇಕು ಎಂದು ಅಟಾರ್ನಿ ಜನರಲ್ (ಎಜಿ) ಕೆ ಕೆ ವೇಣುಗೋಪಾಲ್ ವಿನಂತಿಸಿದ್ದರು. ಆದೇಶ ನೀಡುವ ಮೊದಲು ಎಜಿ ಅವರು ಸಲ್ಲಿಸಿರುವ ಟಿಪ್ಪಣಿ ಪರಿಶೀಲಿಸಿಸುವುದಾಗಿ ಪೀಠ ಹೇಳಿತು.