ಸುದ್ದಿಗಳು

ಕೋವಿಡ್‌ ಬಿಕ್ಕಟ್ಟು ಎದುರಿಸಲು ತಜ್ಞರ ಕಾರ್ಯಪಡೆ ರಚಿಸಿದ ಸುಪ್ರೀಂ ಕೋರ್ಟ್‌; ಆಮ್ಲಜನಕ, ಔಷಧಗಳ ಹಂಚಿಕೆಗೆ ಒತ್ತು

ವಿವಿಧ ರಾಜ್ಯಗಳಿಗೆ ಆಮ್ಲಜನಕ ಹಂಚಿಕೆ ಸಂಬಂಧ ಎದ್ದಿರುವ ಸಮಸ್ಯೆಗಳ ಬಗ್ಗೆ ಕಾರ್ಯಪಡೆ ಗಮನ ಹರಿಸಲಿದೆ. ಜೊತೆಗೆ ಅಗತ್ಯ ಔಷಧಗಳ ಲಭ್ಯತೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಪರಿಶೀಲಸಿ ಅವುಗಳ ಬಗ್ಗೆ ಸಲಹೆ ನೀಡುತ್ತದೆ.

Bar & Bench

ದೇಶಕ್ಕೆ ಎದುರಾಗಿರುವ ಗಂಭೀರ ಕೋವಿಡ್‌ ಸಂಕಷ್ಟದ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಆಮ್ಲಜನಕ ಪೂರೈಕೆಯನ್ನು ಸುಗಮಗೊಳಿಸುವುದು ಸೇರಿದಂತೆ ವಿವಿಧ ಕೋವಿಡ್‌ ಸಮಸ್ಯೆಗಳಿಗೆ ವೈಜ್ಞಾನಿಕ ಮತ್ತು ಪರಿಣತ ಜ್ಞಾನವನ್ನು ಆಧರಿಸಿ ಪರಿಹಾರ ಕಂಡುಕೊಳ್ಳಲು ಅನುಕೂಲವಾಗುವಂತೆ ಸುಪ್ರೀಂಕೋರ್ಟ್‌ 12 ಸದಸ್ಯರ ರಾಷ್ಟ್ರೀಯ ಕಾರ್ಯಪಡೆ (ಎನ್‌ಟಿಎಫ್‌) ರಚಿಸಿದೆ.

ದೇಶದ ವಿವಿಧ ಭಾಗಗಳ ವೈದ್ಯಕೀಯ ತಜ್ಞರು ಮತ್ತು ವೈದ್ಯರು ಕಾರ್ಯಪಡೆಯ ಸದಸ್ಯರಾಗಿದ್ದು ಕೇಂದ್ರ ಸರ್ಕಾರದ ಸಂಪುಟ ಕಾರ್ಯದರ್ಶಿಯನ್ನು ಅದರ ಸಂಚಾಲಕರಾಗಿ ನೇಮಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ವಿವಿಧ ರಾಜ್ಯಗಳಿಗೆ ಆಮ್ಲಜನಕ ಹಂಚಿಕೆಯನ್ನು ಸುಸೂತ್ರಗೊಳಿಸಲು ಗಮನ ಹರಿಸುವುದು, ಅಗತ್ಯ ಔಷಧಗಳ ಲಭ್ಯತೆ ಖಚಿತಪಡಿಸಿಕೊಳ್ಳುವುದು ಹಾಗೂ ಭವಿಷ್ಯದ ತುರ್ತು ಪರಿಸ್ಥಿತಿಗೆ ಸನ್ನದ್ಧವಾಗುವ ದೃಷ್ಟಿಯಿಂದ ಎನ್‌ಟಿಎಫ್‌ ಕೆಲಸ ಮಾಡಲಿದೆ. ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌ ಮತ್ತು ಎಂ ಆರ್‌ ಶಾ ಅವರಿದ್ದ ಪೀಠ ಈ ಆದೇಶ ಜಾರಿ ಮಾಡಿದೆ.

ಎನ್‌ಟಿಎಫ್ ಸ್ಥಾಪನೆಯ ಹಿಂದಿನ ತಾರ್ಕಿಕತೆಯನ್ನು ವಿವರಿಸಿದ ನ್ಯಾಯಾಲಯ, ಅಂತಹ ಕಾರ್ಯಪಡೆ ಸ್ಥಾಪಿಸುವುದರಿಂದ ನಿರ್ಧಾರ ಕೈಗೊಳ್ಳುವವರಿಗೆ ತಾತ್ಕಾಲಿಕ ಪರಿಹಾರಕ್ಕಿಂತಲೂ ಶಾಶ್ಬತ ಪರಿಹಾರಕ್ಕೆ ಮುಂದಾಗಲು ಸಾಧ್ಯವಾಗುತ್ತದೆ ಎಂದಿದೆ. ಇದರಿಂದ ಭವಿಷ್ಯದ ಅಗತ್ಯತೆಗಳನ್ನು ವೈಜ್ಞಾನಿಕ ಮತ್ತು ಅನುಭವದ ತಳಹದಿಯ ಮೇಲೆ ಈಡೇರಿಸಿಕೊಳ್ಳಬಹುದು ಎಂದು ಪೀಠ ವಿವರಿಸಿದೆ.

ರಾಷ್ಟ್ರೀಯ ಕಾರ್ಯಪಡೆ ಸದಸರ ವಿವರ

(i) ಡಾ. ಭಬತೋಷ್ ಬಿಸ್ವಾಸ್‌, ಕೊಲ್ಕತ್ತಾದ ಪಶ್ಚಿಮ ಬಂಗಾಳ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ;

(ii) ಡಾ.ದೇವೇಂದರ್ ಸಿಂಗ್ ರಾಣಾ, ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆ ಆಡಳಿತ ಮಂಡಳಿ ಅಧ್ಯಕ್ಷರು

(iii) ಡಾ.ದೇವಿ ಪ್ರಸಾದ್ ಶೆಟ್ಟಿ, ಬೆಂಗಳೂರಿನ ನಾರಾಯಣ ಹೆಲ್ತ್‌ಕೇರ್‌ನ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರು ;

(iv) ಡಾ.ಗಗನ್‌ದೀಪ್ ಕಾಂಗ್, ಪ್ರಾಧ್ಯಾಪಕರು ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್, ವೆಲ್ಲೂರು, ತಮಿಳುನಾಡು

(v) ಡಾ. ಜೆ.ವಿ. ಪೀಟರ್, ನಿರ್ದೇಶಕರು, ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್, ವೆಲ್ಲೂರು, ತಮಿಳುನಾಡು;

(vi) ಡಾ. ನರೇಶ್ ತ್ರೆಹನ್‌, ಗುರುಗ್ರಾಮದ ಮೆದಾಂತಾ ಆಸ್ಪತ್ರೆ ಮತ್ತು ಹೃದಯ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರು ;

(vii) ಡಾ. ರಾಹುಲ್ ಪಂಡಿತ್, ನಿರ್ದೇಶಕರು ಕ್ರಿಟಿಕಲ್ ಕೇರ್ ಮೆಡಿಸಿನ್ ಮತ್ತು ಐಸಿಯು, ಫೋರ್ಟಿಸ್ ಆಸ್ಪತ್ರೆ, ಮುಲುಂದ್ (ಮುಂಬೈ,) ಮತ್ತು ಕಲ್ಯಾಣ್ (ಮಹಾರಾಷ್ಟ್ರ) ನಿರ್ದೇಶಕರು;

(viii) ಡಾ.ಸೌಮಿತ್ರ ರಾವತ್, ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯ ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಯಕೃತ್‌ ಕಸಿ ವಿಭಾಗದ ಅಧ್ಯಕ್ಷ ಮತ್ತು ಮುಖ್ಯಸ್ಥ

(ix) ಡಾ.ಶಿವ ಕುಮಾರ್ ಸರಿನ್, ದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸೈನ್ಸ್‌ ನಿರ್ದೇಶಕರು

(x) ಡಾ. ಜರೀರ್ ಎಫ್ ಉಡ್ವಾಡಿಯಾ, ಹೃದಯ ತಜ್ಞರು, ಹಿಂದೂಜಾ ಆಸ್ಪತ್ರೆ, ಬ್ರೀಚ್ ಕ್ಯಾಂಡಿ ಆಸ್ಪತ್ರೆ ಮತ್ತು ಪಾರ್ಸಿ ಜನರಲ್ ಆಸ್ಪತ್ರೆ, ಮುಂಬೈ;

(xi) ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರ (ಮಾಜಿ ಅಧಿಕಾರಿ);

(xii) ರಾಷ್ಟ್ರೀಯ ಕಾರ್ಯಪಡೆಯ ಸಂಚಾಲಕರಾಗಿರುವವರು ಕೇಂದ್ರ ಸರ್ಕಾರದ ಸಂಪುಟ ಕಾರ್ಯದರ್ಶಿಯಾಗಿರಬೇಕು. ಅಗತ್ಯವಿದ್ದಾಗ ನಿಯೋಜಿಸಲು ಹೆಚ್ಚುವರಿ ಕಾರ್ಯದರ್ಶಿ ಹುದ್ದೆಗಿಂತಲೂ ಕೆಳಗಿರದ ಅಧಿಕಾರಿಯನ್ನು ಸಂಪುಟ ಕಾರ್ಯದರ್ಶಿ ನೇಮಕ ಮಾಡಬಹುದು.

ನೀತಿ ಆಯೋಗದ ಸದಸ್ಯ, ಮಾನವ ವ್ಯವಹಾರ ಸಚಿವಾಲಯ, ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿಗಳು, ಏಮ್ಸ್‌ ನಿರ್ದೇಶಕ, ಐಸಿಎಂಆರ್‌ ಮಹಾ ನಿರ್ದೇಶಕ, ಆರೋಗ್ಯ ಸೇವೆ ಇಲಾಖೆ ಹಾಗೂ ನ್ಯಾಷನಲ್‌ ಇನ್ಫರ್ಮ್ಯಾಟಿಕ್ಸ್ ಕೇಂದ್ರದ ಮಹಾನಿರ್ದೇಶಕರು, ಸಿ ಡಾಕ್‌ ಮುಖ್ಯಸ್ಥರು ಸೇರಿದಂತೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲವನ್ನು ಸಲಹೆ ಮತ್ತು ಮಾಹಿತಿಗೆ ಬಳಸಿಕೊಳ್ಳಲು ನ್ಯಾಯಾಲಯ ಸ್ವಾತಂತ್ರ್ಯ ನೀಡಿದೆ.

ಕಾರ್ಯಪಡೆಯ ಗುರಿಗಳು

  • ವೈದ್ಯಕೀಯ ಆಮ್ಲಜನಕದ ಅಗತ್ಯತೆ, ಲಭ್ಯತೆ ಹಾಗೂ ವಿತರಣೆ ಆಧಾರದ ಮೇಲೆ ಪರಾಮರ್ಶೆ ನಡೆಸಿ ಇಡೀ ದೇಶಕ್ಕೆ ಅನುಗುಣವಾಗಿ ಶಿಫಾರಸು ಮಾಡುವುದು

  • ವೈಜ್ಞಾನಿಕ, ತರ್ಕಬದ್ಧ ಮತ್ತು ನ್ಯಾಯಯುತ ಆಧಾರದ ಮೇಲೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವೈದ್ಯಕೀಯ ಆಮ್ಲಜನಕ ಹಂಚಿಕೆ ವಿಧಾನವನ್ನು ರೂಪಿಸುವುದು ಮತ್ತು ಸೂತ್ರೀಕರಿಸುವುದು;

  • ಸಾಂಕ್ರಾಮಿಕ ಸಮಯದಲ್ಲಿ ಉದ್ಭವಿಸುವ ಪ್ರಸ್ತುತ ಮತ್ತು ಯೋಜಿತ ಬೇಡಿಕೆಗಳ ಆಧಾರದ ಮೇಲೆ ಲಭ್ಯವಿರುವ ಆಮ್ಲಜನಕ ಪೂರೈಕೆ ಹೆಚ್ಚಿಸಲು ಶಿಫಾರಸು ಮಾಡುವುದು;

  • ಸಾಂಕ್ರಾಮಿಕ ರೋಗದ ಹಂತ ಮತ್ತು ಪ್ರಭಾವದ ಆಧಾರದ ಮೇಲೆ ಆಮ್ಲಜನಕ ಹಂಚಿಕೆಗಳ ನಿಯಮಿತ ಪರಿಶೀಲನೆ ಮತ್ತು ಪರಿಷ್ಕರಣೆಗಾಗಿ ಶಿಫಾರಸು ಮಾಡುವುದು;

  • ಕೇಂದ್ರ ಸರ್ಕಾರವು ನಿಗದಿ ಮಾಡಿದ ಹಂಚಿಕೆ ಸಂಬಂಧಪಟ್ಟ ರಾಜ್ಯ / ಕೇಂದ್ರಾಡಳಿತ ಪ್ರದೇಶವನ್ನು ತಲುಪುತ್ತದೆಯೇ ಇತ್ಯಾದಿ ವಿಚಾರಗಳನ್ನು ಪರಿಶೀಲಿಸುವುದು.

  • ಅಗತ್ಯ ಔಷಧಗಳ ಲಭ್ಯತೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಪರಿಶೀಲಸಿ ಅವುಗಳ ಬಗ್ಗೆ ಸಲಹೆ ನೀಡುವುದು

  • ಪ್ರಸ್ತುತ ಮತ್ತು ಭವಿಷ್ಯದ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಮಾಡಿಕೊಳ್ಳಬೇಕಾದ ತಯಾರಿಯನ್ನು ರೂಪಿಸುವುದು

  • ಗ್ರಾಮೀಣ ಪ್ರದೇಶಗಳಿಗೆ ತಜ್ಞ ವೈದ್ಯರನ್ನು ಒದಗಿಸುವ ಸಲುವಾಗಿ ಮಾನವ ಶಕ್ತಿ ಹೊಂದಿಸಬೇಕಿದ್ದು ಅದಕ್ಕಾಗಿ ತಂತ್ರಜ್ಞಾನದ ಬಳಕೆಯನ್ನು ಸುಲಭಗೊಳಿಸುವುದು;

  • ಸೂಕ್ತ ಪ್ರೋತ್ಸಾಹಕಗಳನ್ನು ನಿರೂಪಿಸುವ ಮೂಲಕ ತರಬೇತಿ ಪಡೆದ ವೈದ್ಯರು, ದಾದಿಯರು ಮತ್ತು ಅರೆ-ವೈದ್ಯಕೀಯ ಸಿಬ್ಬಂದಿಗಳ ಲಭ್ಯತೆ ಹೆಚ್ಚಿಸಲು ಬೇಕಾದ ಕ್ರಮ ಕೈಗೊಳ್ಳುವುದು;

  • ಪುರಾವೆ ಆಧಾರಿತ ಸಂಶೋಧನೆಯನ್ನುಉತ್ತೇಜಿಸುವುದು ಇತ್ಯಾದಿ ಅಂಶಗಳನ್ನು ಕಾರ್ಯಪಡೆ ನಿರ್ವಹಿಸಬೇಕಿದೆ.