Justice AS Bopanna , Justice BR gavai and Justice Dipankar Datta 
ಸುದ್ದಿಗಳು

ತೀಸ್ತಾಗೆ ಜಾಮೀನು ನಿರಾಕರಣೆ ಆದೇಶಕ್ಕೆ 7 ದಿನಗಳ ತಡೆ ನೀಡಿದ ಸುಪ್ರೀಂ ಕೋರ್ಟ್‌: ಶನಿವಾರ ರಾತ್ರಿ ವಿಚಾರಣೆ ವೇಳೆ ಆದೇಶ

ಹೈಕೋರ್ಟ್ ಆದೇಶ ಪ್ರಶ್ನಿಸಲು ಸೆಟಲ್ವಾಡ್ ಅವರಿಗೆ ಕೆಲ ದಿನ ಜಾಮೀನು ನೀಡಿದರೆ ʼಸ್ವರ್ಗ ಬಿದ್ದು ಹೋಗುತ್ತದೆಯೇʼ ಎಂದು ನ್ಯಾ. ಬಿ ಆರ್ ಗವಾಯಿ ಅವರು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪ್ರಶ್ನಿಸಿದರು.

Bar & Bench

ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ್‌ ಅವರಿಗೆ ನಿಯಮಿತ ಜಾಮೀನು ನಿರಾಕರಿಸಿದ ಗುಜರಾತ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಶನಿವಾರ ತಡೆಯಾಜ್ಞೆ ನೀಡಿದೆ [ತೀಸ್ತಾ ಸೆಟಲ್‌ವಾಡ್‌ ಮತ್ತು ಗುಜರಾತ್‌ ಸರ್ಕಾರ ನಡುವಣ ಪ್ರಕರಣ].

ಶನಿವಾರ ನಡೆದ ಎರಡನೇ ವಿಶೇಷ ವಿಚಾರಣೆ ವೇಳೆ, ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಎ ಎಸ್ ಬೋಪಣ್ಣ ಹಾಗೂ ದೀಪಂಕರ್ ದತ್ತಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ಸೆಟಲ್‌ವಾಡ್‌ ಅವರಿಗೆ ಏಳು ದಿನಗಳ ಮಧ್ಯಂತರ ಜಾಮೀನು ನೀಡುವಂತೆ ಸೂಚಿಸಿತು.

ಈ ಮಧ್ಯೆ, ಹೈಕೋರ್ಟ್ ಆದೇಶದ ವಿರುದ್ಧ ಸೆಟಲ್‌ವಾಡ್‌ ಸಲ್ಲಿಸಿದ ಮೇಲ್ಮನವಿಯನ್ನು ವಿಚಾರಣೆಗಾಗಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಮುಂದೆ ಇಡಲು ಸೂಚಿಸಲಾಯಿತು.

“… (ಹೈಕೋರ್ಟ್‌ನ) ಏಕ ಸದಸ್ಯ ಪೀಠ ಕನಿಷ್ಠವಾದರೂ ಸ್ವಲ್ಪ ರಕ್ಷಣೆ ನೀಡಬೇಕಿತ್ತು. ಏಕೆಂದರೆ ಅರ್ಜಿದಾರರಿಗೆ ಈ ನ್ಯಾಯಾಲಯದ ಮುಂದೆ ಆದೇಶ ಪ್ರಶ್ನಿಸಲು ಸಾಕಷ್ಟು ಸಮಯಾವಕಾಶ ಬೇಕಿದೆ. ಈ ದೃಷ್ಟಿಯಿಂದ ನಾವು (ಹೈಕೋರ್ಟ್‌ ಆದೇಶಕ್ಕೆ) ಒಂದು ವಾರ ತಡೆ ನೀಡುತ್ತಿದ್ದೇವೆ. ಸೂಕ್ತ ಪೀಠದ ಮುಂದೆ (ತೀಸ್ತಾ ಅವರ) ಅರ್ಜಿ ಪಟ್ಟಿ ಮಾಡಲು ಸಿಜೆಐ ಅವರಿಂದ (ಸುಪ್ರೀಂ ಕೋರ್ಟ್‌) ರಿಜಿಸ್ಟ್ರಿ ಆದೇಶಗಳನ್ನು ಪಡೆಯಬೇಕು” ಎಂದು ನ್ಯಾಯಾಲಯ ಆದೇಶಿಸಿತು.

ಗೋಧ್ರಾ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಸರ್ಕಾರದಲ್ಲಿ ಅಂದು ಉನ್ನತ ಸ್ಥಾನದಲ್ಲಿದ್ದವರನ್ನು ಸಿಲುಕಿಸಲು ದಾಖಲೆಗಳನ್ನು ಸೃಷ್ಟಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಹೋರಾಟಗಾರ್ತಿ ಸೆಟಲ್‌ವಾಡ್‌ ಅವರ ಜಾಮೀನು ಅರ್ಜಿಯನ್ನು ಶನಿವಾರ ಬೆಳಿಗ್ಗೆ ವಜಾಗೊಳಿಸಿದ್ದ ನ್ಯಾ. ನಿರ್ಜರ್‌ ದೇಸಾಯಿ ಅವರಿದ್ದ ಗುಜರಾತ್‌ ಹೈಕೋರ್ಟ್‌ ಏಕಸದಸ್ಯ ಪೀಠ ಕೂಡಲೇ ವಿಶೇಷ ತನಿಖಾ ತಂಡದೆದುರು ಶರಣಾಗುವಂತೆ ಆದೇಶಿಸಿತ್ತು. ಇದರ ಬೆನ್ನಿಗೇ ತೀಸ್ತಾ ಅವರು ಮಧ್ಯಂತರ ಜಾಮೀನು ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

Justices Abhay S Oka and Prashant Kumar Mishra with SC

ಆದರೆ ಸಂಜೆ 6.30ರ ಸುಮಾರಿಗೆ (ಮೊದಲ ವಿಶೇಷ) ವಿಚಾರಣೆ ಆರಂಭಿಸಿದ ನ್ಯಾಯಮೂರ್ತಿಗಳಾದ ಎ ಎಸ್ ಓಕಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠಕ್ಕೆ ಸೆಟಲ್‌ವಾಡ್‌ ಅವರಿಗೆ ಮಧ್ಯಂತರ ಪರಿಹಾರ ನೀಡುವ ವಿಚಾರದಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಮನವಿ ವಿಚಾರಣೆಗೆ ವಿಸ್ತೃತ ಪೀಠ ರಚಿಸುವಂತೆ ತಿಳಿಸಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಅದು ಪ್ರಕರಣ ಉಲ್ಲೇಖಿಸಿತು.

“ಜಾಮೀನು ನೀಡುವ ವಿಚಾರದಲ್ಲಿ ನಮ್ಮ ನಡುವೆ ಅಭಿಪ್ರಾಯಭೇದವಿದೆ. ಹೀಗಾಗಿ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವಂತೆ ನಾವು ಮುಖ್ಯ ನ್ಯಾಯಮೂರ್ತಿಗಳನ್ನು ಕೇಳಿಕೊಳ್ಳುತ್ತೇವೆ” ಎಂದು ನ್ಯಾಯಮೂರ್ತಿಗಳು ಆದೇಶದಲ್ಲಿ ತಿಳಿಸಿದ್ದರು.

ತಕ್ಷಣವೇ ತೀಸ್ತಾ ಶರಣಾಗಬೇಕು ಎಂಬ ಷರತ್ತನ್ನು ಸಡಿಲಗೊಳಿಸುವ ಪರವಾಗಿ ನ್ಯಾ. ಓಕಾ ಇದ್ದರು. ಷರತ್ತು ಸಡಿಲಗೊಳಿಸಿದರೆ ಸ್ವರ್ಗ ಬಿದ್ಧುಹೋಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿ ಎಸ್‌ಜಿ ಮೆಹ್ತಾ ವಾದ ಮುಂದುವರೆಸಿದರು. ಅಲ್ಲದೆ ಈ ಹಂತದಲ್ಲಿ ಪರಿಹಾರ ನೀಡದಿರಲು ನ್ಯಾ. ಮಿಶ್ರಾ ಅವರು ಒಲವು ತೋರದೇ ಇದ್ದುದರಿಂದ ವಿಸ್ತೃತ ಪೀಠದೆದುರು ಮನವಿ ಮಂಡಿಸಲು ನಿರ್ಧರಿಸಲಾಯಿತು.

ತೀಸ್ತಾ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ ಯು ಸಿಂಗ್‌ ಅವರು ಪ್ರಕರಣವನ್ನು ಕೂಡಲೇ ಪಟ್ಟಿ ಮಾಡಬೇಕು ಸಾಧ್ಯವಾದರೆ ನಾಳೆಯೇ ವಿಚಾರಣೆ ನಡೆಸಬೇಕು ಎಂದು ವಿನಂತಿಸಿದರು. ಇದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರಿಗೆ ಇರುವ ವಿಶೇಷಾಧಿಕಾರ ಎಂದ ಪೀಠ ತುರ್ತಾಗಿ ಪ್ರಕರಣ ಪಟ್ಟಿ ಮಾಡುವಂತೆ ತಿಳಿಸಿತು.

ಕೆಲ ಗಂಟೆಗಳ ಬಳಿಕ ಪ್ರಕರಣದ ವಿಚಾರಣೆಗೆ ತ್ರಿಸದಸ್ಯ ಪೀಠ ರಚನೆಯಾಯಿತು. ರಾತ್ರಿ ಒಂಬತ್ತರ ಸುಮಾರಿಗೆ ತ್ರಿಸದಸ್ಯ ಪೀಠ ವಿಚಾರಣೆ ಆರಂಭಿಸಿತು. ʼಸ್ವಾತಂತ್ರ್ಯʼಕ್ಕೆ ಸಂಬಂಧಿಸಿದ ಹೈಕೋರ್ಟ್‌ ತೀರ್ಪು ʼಅದೂ ಶನಿವಾರದಂದುʼ ಹೊರಬಿದ್ದಿದೆ ಎಂದು ನ್ಯಾ. ದತ್ತಾ ಅಭಿಪ್ರಾಯಪಟ್ಟರು. ಅಭಿಪ್ರಾಯ ಭೇದ ಉಂಟಾದಾಗ ನ್ಯಾಯಾಲಯ ಸ್ವಾತಂತ್ರ್ಯದ ಪರವಾಗಿ ನಿಲ್ಲುತ್ತದೆ ಎಂದು ನ್ಯಾಯಮೂರ್ತಿ ಗವಾಯಿ ಹೇಳಿದರು.

ಸೆಟಲ್‌ವಾಡ್‌ ಅವರ ಮನವಿಯನ್ನು ಆಲಿಸಿದ ನ್ಯಾಯಮೂರ್ತಿ ಗವಾಯಿ, “ಗುಜರಾತ್ ಗಲಭೆ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ನಿರ್ಬಂಧದಲ್ಲಿರಬೇಕು ಎಂದು ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ನೇತೃತ್ವದ ಪೀಠ ನೀಡಿದ್ದ ಹಿಂದಿನ ತೀರ್ಪು ಹೇಳಿದೆ ಎಂದರು.

ಸೆಟಲ್‌ವಾಡ್‌ ಅವರು ಕೇವಲ ಸಾಮಾನ್ಯ ಆರೋಪಿಯಾಗಿದ್ದು ಅವರು ಸುಪ್ರೀಂ ಕೋರ್ಟ್‌ನಿಂದ ವಿಶೇಷ ಗೌರವ ಏಕೆ ಪಡೆಯುತ್ತಿದ್ದಾರೆ ಎಂದು ಗುಜರಾತ್ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರಶ್ನಿಸಿದರು. ಆಗ ʼಹೈಕೋರ್ಟ್ ಆದೇಶ  ಪ್ರಶ್ನಿಸಲು ಸಾಮಾನ್ಯ ಆರೋಪಿಗೂ ಸಮಯಾವಕಾಶ ಇರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿತು. ʼಆಕೆ ಅಸಾಧಾರಣ ಪ್ರಜೆಯೇ?ʼ ಎಂದು ಮೆಹ್ತಾ ವಾದ ಮುಂದಿಟ್ಟರು.

ಇದಕ್ಕೆ ನ್ಯಾಯಮೂರ್ತಿ ಗವಾಯಿ, “ನೀವು ಪ್ರಬಲ ಸರ್ಕಾರದ ಪರ ವಾದ ಮಂಡಿಸುವ ಪ್ರಬಲ ವಕೀಲರು" ಎಂದು ಹೇಳಿದರು. ಈ ಹಂತದಲ್ಲಿ ಪ್ರತಿಕ್ರಿಯಿಸಿದ ಮೆಹ್ತಾ ʼಉತ್ತಮ ಸರ್ಕಾರವನ್ನು ಪ್ರತಿನಿಧಿಸುವ ಪ್ರಬಲ ಸಾಲಿಸಿಟರ್‌ ನಾನಲ್ಲ” ಎಂದರು.

ತನ್ನ 127 ಪುಟಗಳ ತೀರ್ಪಿನಲ್ಲಿ, ಗುಜರಾತ್ ಹೈಕೋರ್ಟ್ “ಸೆಟಲ್‌ವಾಡ್‌ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವುದರಿಂದ ದೇಶದಲ್ಲಿ ಕೋಮು ಧ್ರುವೀಕರಣ ಹೆಚ್ಚುತ್ತದೆ” ಎಂದು ಅಭಿಪ್ರಾಯಪಟ್ಟಿತ್ತು.

ಇತರೆ ಅವಲೋಕನಗಳ ಜೊತೆಗೆ "ಸೆಟಲ್‌ವಾಡ್‌ ಅವರು ಪದ್ಮಶ್ರೀ ಪುರಸ್ಕಾರ ಪಡೆಯಲು ಗೋಧ್ರಾ ಗಲಭೆ ಸಂತ್ರಸ್ತರನ್ನು ಏಣಿಯಾಗಿ ಬಳಸಿಕಂಡರು. ಸರ್ಕಾರವನ್ನು ಉರುಳಿಸುವ ಯತ್ನದಲ್ಲಿ ಅಂದಿನ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹೆಸರನ್ನು ಹಾಳುಗೆಡವಿದರು” ಎಂದು ನ್ಯಾಯಾಲಯ ಹೇಳಿತ್ತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Teesta_Atul_Setalvad_vs_State_of_Gujarat.pdf
Preview