Supreme Court
Supreme Court 
ಸುದ್ದಿಗಳು

ಜನ್ಮದಿನ ಕುರಿತು ತಪ್ಪು ಮಾಹಿತಿ: ಶಾಸಕತ್ವದಿಂದ ಆಜಂ ಖಾನ್ ಪುತ್ರನ ಅನರ್ಹತೆ ಎತ್ತಿಹಿಡಿದ ಸುಪ್ರೀಂ

Bar & Bench

ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಆಜಂ ಖಾನ್‌ ಅವರ ಪುತ್ರ ಅಬ್ದುಲ್ಲಾ ಅಜಂ ಖಾನ್ ಅವರು ಅಧಿಕೃತ ದಾಖಲೆಗಳಲ್ಲಿ ಒದಗಿಸಿದ ಜನ್ಮ ದಿನಾಂಕದಲ್ಲಿ ವ್ಯತ್ಯಾಸ ಕಂಡು ಬಂದಿರುವ ಹಿನ್ನೆಲೆಯಲ್ಲಿ ಅವರನ್ನು ಶಾಸಕತ್ವದಿಂದ ಅನರ್ಹಗೊಳಿಸಿದ ಅಲಾಹಾಬಾದ್‌ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ ಸೋಮವಾರ ಎತ್ತಿಹಿಡಿದಿದೆ [ಅಬ್ದುಲ್ಲಾ ಅಜಂ ಖಾನ್ ಮತ್ತು ನವಾಬ್ ಕಾಜಿಮ್ ಅಲಿ ಖಾನ್ ನಡುವಣ ಪ್ರಕರಣ].

ಶಾಲಾ ದಾಖಲೆಗಳಲ್ಲಿ ಅಬ್ದುಲ್ಲಾ ಅವರ ಜನ್ಮದಿನವನ್ನು ಜನವರಿ 1, 1993 ಎಂದು ಸ್ಪಷ್ಟವಾಗಿ ನಮೂದಾಗಿದೆ. ಆದರೆ ತಮ್ಮ ಜನ್ಮದಿನ ಸೆಪ್ಟೆಂಬರ್ 30, 1990 ಎಂದು ಖಾನ್‌ ಅವರು ವಾದಿಸಿದ್ದಾರೆ. ಮೇಲ್ಮನವಿದಾರರು ನಂತರ ಶಾಲಾ ದಾಖಲಾತಿ ರದ್ದುಗೊಳಿಸಿದರು ಎಂದ ಮಾತ್ರಕ್ಕೆ ಅದು ಸಾಕ್ಷ್ಯದ ಮೌಲ್ಯ ಕಳೆದುಕೊಳ್ಳುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಅಜಯ್ ರಾಸ್ತೋಗಿ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ತಿಳಿಸಿತು.

ಸಂವಿಧಾನದ 173 (ಬಿ) ವಿಧಿಯ ಪ್ರಕಾರ ಚುನಾವಣೆಗೆ ಸ್ಪರ್ಧಿಸಲು ಅಬ್ದುಲ್ಲಾ ಅವರಿಗೆ 25 ವರ್ಷ ಆಗಿಲ್ಲ ಎಂಬ ಕಾರಣಕ್ಕಾಗಿ  ಶಾಸಕತ್ವದಿಂದ ಅಬ್ದುಲ್ಲಾ ಅಜಂ ಖಾನ್ ಅವರನ್ನು ಅನರ್ಹಗೊಳಿಸಿದ್ದ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

ಜನ್ಮ ದಿನಾಂಕವನ್ನು ತಿದ್ದಿರುವ ವಂಚನೆ ಮತ್ತು ಫೋರ್ಜರಿ ಪ್ರಕರಣದ ಅಡಿ ಅಬ್ದುಲ್ಲಾ ಆಜಂ ಖಾನ್‌ ಹಾಗೂ ಅವರ ತಂದೆ ಸಮಾಜವಾದಿ ಪಕ್ಷದ ಮುಖಂಡ ಆಜಂ ಖಾನ್‌ ಮತ್ತು ಅವರ ಪತ್ನಿ ತಜೀನ್‌ ಫಾತ್ಮಾ ಅವರನ್ನು 2020ರ ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು.