ಸುಪ್ರೀಂ ಕೋರ್ಟ್‌ಗೆ ನಾಲ್ವರು ನ್ಯಾಯಮೂರ್ತಿಗಳನ್ನು ನೇಮಿಸಲು ಒಪ್ಪಿಗೆ ಕೋರಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಯು ಯು ಲಲಿತ್ ಅವರು ಕಳುಹಿಸಿರುವ ಪತ್ರಕ್ಕೆ ಸುಪ್ರೀಂ ಕೋರ್ಟ್ ಕೊಲಿಜಿಯಂನ ಇಬ್ಬರು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್‌ಗೆ ನಾಲ್ವರು ಹೊಸ ನ್ಯಾಯಮೂರ್ತಿಗಳ ನೇಮಕಕ್ಕೆ ಒಪ್ಪಿಗೆ ಕೋರಿ ಹಿಂದೆಂದೂ ನಡೆದಿರದ ರೀತಿಯಲ್ಲಿ ಕೊಲಿಜಿಯಂನ ತಮ್ಮ ಸಹ ನ್ಯಾಯಮೂರ್ತಿಗಳಿಗೆ ಸಿಜೆಐ ಪತ್ರಬರೆದಿದ್ದರು ಎಂದು ವರದಿಯಾಗಿತ್ತು.
ಪದೋನ್ನತಿಗಾಗಿ ಈ ಕೆಳಗಿನ ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತು:
ನ್ಯಾ. ರವಿಶಂಕರ್ ಝಾ (ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ)
ನ್ಯಾ. ಸಂಜಯ್ ಕರೋಲ್ (ಪಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ)
ನ್ಯಾ. ಪಿ ವಿ ಸಂಜಯ್ ಕುಮಾರ್ (ಮಣಿಪುರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ)
ಹಿರಿಯ ನ್ಯಾಯವಾದಿ ಕೆ ವಿ ವಿಶ್ವನಾಥನ್.
ರೂಢಿಯಂತೆ ಪದೋನ್ನತಿಗಾಗಿ ಹೆಸರುಗಳನ್ನು ಚರ್ಚಿಸಲು ಕೊಲಿಜಿಯಂ ಭೌತಿಕ ಸಭೆಗಳನ್ನು ನಡೆಸಿ ಐವರು ನ್ಯಾಯಮೂರ್ತಿಗಳ ಒಪ್ಪಿಗೆ ಕೋರಲಾಗುತ್ತದೆ.
ಪತ್ರದ ಪ್ರಸರಣಕ್ಕೆ ಸಂಬಂಧಿಸಿದಂತೆ ಈ ಇಬ್ಬರು ನ್ಯಾಯಮೂರ್ತಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆಯೇ ವಿನಾ ಕೊಲಿಜಿಯಂ ಚರ್ಚೆ ಪ್ರಕಾರವೇ ಅಭ್ಯರ್ಥಿಗಳ ಆಯ್ಕೆ ನಡೆದಿರುವುದರಿಂದ ಪದೋನ್ನತಿ ಬಗ್ಗೆ ಅಲ್ಲ ಎಂದು ಮೂಲಗಳು ʼಬಾರ್ ಅಂಡ್ ಬೆಂಚ್ʼಗೆ ಸ್ಪಷ್ಟಪಡಿಸಿವೆ.
ಸಿಜೆಐ ಅವರು ಅಕ್ಟೋಬರ್ 1ರಂದು ಕೊಲಿಜಿಯಂನ ಎಲ್ಲಾ ನ್ಯಾಯಮೂರ್ತಿಗಳಿಗೆ ಪತ್ರ ಕಳುಹಿಸಿದ್ದರು. ಬಳಿಕ ಇಬ್ಬರು ನ್ಯಾಯಮೂರ್ತಿಗಳು ಸಮ್ಮತಿ ನೀಡಲು ನಿರಾಕರಿಸಿದರು ಎಂದು ಮೂಲವೊಂದು ತಿಳಿಸಿದೆ.
“ಇದು ಈ ಹಿಂದೆಂದೂ ನಡೆದಿರದಂತಹ ಕ್ರಮ. ನ್ಯಾಯಮೂರ್ತಿಗಳ ಪದೋನ್ನತಿ ಮಾಡದಿರಲು ಕಾರಣಗಳು, ಅವರ ಅರ್ಹತೆ ಮತ್ತು ನ್ಯೂನತೆಗಳನ್ನು ಬರವಣಿಗೆಯಲ್ಲಿ ವ್ಯಕ್ತಪಡಿಸುವುದು ಸೂಕ್ತವಲ್ಲ. ಇದನ್ನು ಪ್ರಕ್ರಿಯೆಯ ವಿಷಯವಾಗಿಯೂ ನಿರಾಕರಿಸಲಾಗಿದೆ. ಪ್ರಕ್ರಿಯೆಯ ಗಂಭೀರತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲಾಗದು” ಎಂದು ಬೆಳವಣಿಗೆಗಳನ್ನು ಹತ್ತಿರದಿಂದ ಬಲ್ಲ ಮೂಲಗಳು ತಿಳಿಸಿವೆ.
ಸುಪ್ರೀಂ ಕೋರ್ಟ್ ನೇಮಕಕ್ಕೆ ಶಿಫಾರಸು ಮಾಡಬೇಕಾದ ಹೆಸರುಗಳನ್ನು ದೃಢೀಕರಿಸಲು ಕೊಲಿಜಿಯಂ ಸೆಪ್ಟೆಂಬರ್ 30ರಂದು ಸಭೆ ನಡೆಸಬೇಕಿತ್ತು. ಆದರೆ, ಎರಡನೇ ಹಿರಿಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಅಂದು ರಾತ್ರಿ 9:10ರವರೆಗೆ ಪ್ರಕರಣಗಳ ವಿಚಾರಣೆ ನಡೆಸಿದ್ದರಿಂದ ಸಭೆ ಸೇರಲಾಗಲಿಲ್ಲ.