CM Siddaramaiah and Bengaluru City Civil Court 
ಸುದ್ದಿಗಳು

ಸಿಎಂ ಸಿದ್ದರಾಮಯ್ಯ ವಿರುದ್ಧದ ಲಂಚ ಪ್ರಕರಣ: ಜನಪ್ರತಿನಿಧಿಗಳ ನ್ಯಾಯಾಲಯದಿಂದ ತನಿಖಾಧಿಕಾರಿಗೆ ಶೋಕಾಸ್‌ ನೋಟಿಸ್‌ ಜಾರಿ

ನ್ಯಾಯಾಲಯದ ಆದೇಶದ ಬಗ್ಗೆ ತಮಗೆ ತಿಳಿಸಲಾಗಿಲ್ಲ ಎಂದು ತನಿಖಾಧಿಕಾರಿ ತಿಪ್ಪೇಸ್ವಾಮಿ ಎಚ್‌ ಜೆ ಹೇಳಿದ್ದಾರೆ. ಸಂವಹನ ಸಮಸ್ಯೆಯಿಂದ ನ್ಯಾಯಾಲಯದ ಆದೇಶ ಪಾಲಿಸಲಾಗಿಲ್ಲ ಎಂದು ಇನ್ನೊಮ್ಮೆ ಹೇಳಿದ್ದಾರೆ ಎಂದಿರುವ ನ್ಯಾಯಾಲಯ.

Bar & Bench

ಮೈಸೂರಿನ ವಿವೇಕ್‌ ಹೋಟೆಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಎಲ್‌ ವಿವೇಕಾನಂದ ಅಲಿಯಾಸ್‌ ಕಿಂಗ್ಸ್‌ ಕೋರ್ಟ್‌ ವಿವೇಕ್‌ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಟ್ಯಂತರ ರೂಪಾಯಿ ಲಂಚ ಪಡೆದು ಬೆಂಗಳೂರು ಟರ್ಫ್‌ ಕ್ಲಬ್‌ ಲಿಮಿಟೆಡ್‌ನ (ಬಿಟಿಸಿಎಲ್‌) ಸ್ಟ್ಯುವರ್ಡ್‌ ಆಗಿ ನಾಮನಿರ್ದೇಶನ ಮಾಡಿದ್ದಾರೆ ಎಂಬ ಆರೋಪ ಸಂಬಂಧ ನ್ಯಾಯಾಲಯದ ಆದೇಶ ಪಾಲಿಸಲು ವಿಫಲವಾಗಿರುವ ತನಿಖಾಧಿಕಾರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಈಚೆಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿದೆ.

ಲೋಕಾಯುಕ್ತ ಪೊಲೀಸರ ಅಂತಿಮ ವರದಿಗೆ ಆಕ್ಷೇಪಿಸಿ, ದೂರುದಾರ ಬೆಂಗಳೂರಿನ ಬಿಜೆಪಿ ಮುಖಂಡ ಎನ್‌ ಆರ್‌ ರಮೇಶ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್‌ ಗಜಾನನ ಭಟ್ ನಡೆಸಿದರು.

“ತನಿಖಾಧಿಕಾರಿ ಎಚ್‌ ಜೆ ತಿಪ್ಪೇಸ್ವಾಮಿ ಅವರಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಬೇಕು. ಕಾನೂನಿನ ಅನ್ವಯ ನಡೆದುಕೊಳ್ಳಲು ತನಿಖಾಧಿಕಾರಿಗೆ ಸೂಚಿಸಲು ಆದೇಶದ ಪ್ರತಿಯನ್ನು ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿಗೆ ಕಳುಹಿಸಬೇಕು. ವಸ್ತುಸ್ಥಿತಿ ವರದಿಯ ನಿರೀಕ್ಷೆಯಲಿದ್ದು, ವಿಚಾರಣೆಯನ್ನು 12.09.2024ಕ್ಕೆ ಮುಂದೂಡಲಾಗಿದೆ” ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.

“ದೂರುದಾರ ಮತ್ತು ಅವರ ವಕೀಲರು ಹಾಜರಿದ್ದು, ಕಾನೂನಿನ ಅನ್ವಯ ತನಿಖಾಧಿಕಾರಿಯು ಹೆಚ್ಚಿನ ತನಿಖೆ ನಡೆಸಿ ಹೊಸದಾಗಿ ಆರು ತಿಂಗಳ ಒಳಗಾಗಿ ತನಿಖೆ ನಡೆಸಿ, ಅಂತಿಮ ವರದಿ ಸಲ್ಲಿಸಬೇಕು ಎಂದು ಆದೇಶವಾಗಿದ್ದರೂ ತನಿಖಾಧಿಕಾರಿಯು ಯಾವುದೇ ವರದಿ ಅಥವಾ ಕೋರಿಕೆ ಸಲ್ಲಿಸಿಲ್ಲ. ವರದಿ ಸಲ್ಲಿಸಲು ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಲೋಕಾಯುಕ್ತ ವಿಶೇಷ ಸರ್ಕಾರಿ ಅಭಿಯೋಜಕರು ಹೇಳಿದ್ದಾರೆ. ಆನಂತರ ಹಾಜರಾದ ಎಸ್‌ಪಿಪಿಯು ನ್ಯಾಯಾಲಯವು ವೈಯಕ್ತಿಕವಾಗಿ ಲೋಕಾಯುಕ್ತಕ್ಕೆ ತಿಳಿಸದ ಹಿನ್ನೆಲೆಯಲ್ಲಿ ತನಿಖೆಯನ್ನೇ ನಡೆಸಿಲ್ಲ ಎಂದು ಹೇಳಿದ್ದಾರೆ” ಎಂದು ಆದೇಶದಲ್ಲಿ ದಾಖಲಿಸಲಾಗಿದೆ.

“ಹಾಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ನ್ಯಾಯಾಲಯವು 16.12.2022ರಂದು ಖಾಸಗಿ ದೂರು ದಾಖಲಿಸಿಕೊಂಡು, ತನಿಖಾಧಿಕಾರಿಗೆ ವಸ್ತುಸ್ಥಿತಿ ವರದಿ ಸಲ್ಲಿಸಲು ಆದೇಶಿಸಿತ್ತು. ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಕೈಬಿಡಲಾಗಿದೆ ಎಂದು ಉಲ್ಲೇಖಿಸಿ ತನಿಖಾಧಿಕಾರಿಯು ವಸ್ತುಸ್ಥಿತಿ ವರದಿ ಸಲ್ಲಿಸಿದ್ದಾರೆ. 07.06.2023ರಂದು ಸಲ್ಲಿಕೆ ಮಾಡಿರುವ ವಸ್ತುಸ್ಥಿತಿ ವರದಿಯನ್ನು ದೂರುದಾರರು ಪ್ರಶ್ನಿಸಿದ್ದು, ಇದರ ವಿಚಾರಣೆ ನಡೆಸಿದ್ದ ನ್ಯಾಯಾಲಯವು ತನಿಖಾ ಸಂಸ್ಥೆಯು ನಡೆಸಿರುವ ತನಿಖೆಯು ಕಾನೂನಿನ ಪ್ರಕಾರವಿಲ್ಲ ಎಂದು 21.02.2024ರಂದು ಆದೇಶಿಸಿದೆ” ಎಂದು ಹೇಳಲಾಗಿದೆ.

“ಹೀಗಾಗಿ, ಮತ್ತೊಮ್ಮೆ ತನಿಖೆ ನಡೆಸಿ, ಹೊಸದಾಗಿ ವರದಿ ಸಲ್ಲಿಸಲು ನ್ಯಾಯಾಲಯ ಆದೇಶಿಸಿದೆ. ಅದಾಗ್ಯೂ, ತನಿಖಾ ಸಂಸ್ಥೆಯು ತನಿಖೆ ನಡೆಸುವುದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಮತ್ತು ಹೊಸ ವರದಿಯನ್ನು ಸಲ್ಲಿಸಿಲ್ಲ. ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಬೇಕು ಎಂದು ನ್ಯಾಯಾಲಯ ಆದೇಶ ಮಾಡಿಲ್ಲ. ತನಿಖಾ ಸಂಸ್ಥೆಯು ಸಲ್ಲಿಸಿರುವ ಪ್ರಾಥಮಿಕ ವರದಿಯು ಕಾನೂನಿಗೆ ಅನುಗುಣವಾಗಿಲ್ಲ ಎಂದು ಅದನ್ನು ಬದಿಗೆ ಸರಿಸಲಾಗಿದೆ ಎಂಬುದನ್ನು ಗಮನದಲ್ಲಿಕೊಟ್ಟುಕೊಳ್ಳಬೇಕು” ಎಂದಿದೆ.

“ತನಿಖಾಧಿಕಾರಿ ತಿಪ್ಪೇಸ್ವಾಮಿ ಎಚ್‌ ಜೆ ಅವರು ನ್ಯಾಯಾಲಯದ ಮುಂದೆ ಹಾಜರಾಗಿ, ನ್ಯಾಯಾಲಯದ ಆದೇಶದ ಬಗ್ಗೆ ತಮಗೆ ತಿಳಿಸಲಾಗಿಲ್ಲ ಎಂದಿದ್ದಾರೆ. ಸಂವಹನ ಸಮಸ್ಯೆಯಿಂದ ನ್ಯಾಯಾಲಯದ ಆದೇಶವನ್ನು ಪಾಲಿಸಲಾಗಿಲ್ಲ ಎಂದು ಇನ್ನೊಮ್ಮೆ ಹೇಳಿದ್ದಾರೆ. ಹೀಗಾಗಿ, ತಿಪ್ಪೇಸ್ವಾಮಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: 2014ರ ಜುಲೈ 28ರಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ವಿವೇಕಾನಂದ ಅವರಿಂದ 1,30,00,000 ರೂಪಾಯಿಗಳನ್ನು ಚೆಕ್‌ ಮೂಲಕ ಸ್ವೀಕರಿಸಿರುವುದು ಅವರೇ ಲೋಕಾಯುಕ್ತಕ್ಕೆ ಸಲ್ಲಿಸಿರುವ ಫಾರ್ಮ್‌ 4ರಲ್ಲಿ ಸ್ಪಷ್ಟವಾಗಿದೆ. ಇದಕ್ಕೆ ಪ್ರತಿಯಾಗಿ ವಿವೇಕಾನಂದ ಅವರನ್ನು ಬೆಂಗಳೂರು ಟರ್ಫ್‌ ಕ್ಲಬ್‌ ಲಿಮಿಟೆಡ್‌ನ (ಬಿಟಿಸಿಎಲ್‌) ಸ್ಟ್ಯುವರ್ಡ್‌ ಆಗಿ ನಾಮನಿರ್ದೇಶನ ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ.

ಹಣ ಪಡೆದು ವಿವೇಕಾನಂದ ಅವರನ್ನು ಬಿಟಿಸಿಎಲ್‌ನ ಸ್ಟ್ಯುವರ್ಡ್‌ ಮತ್ತು ನಿರ್ವಹಣಾ ಸಂಸ್ಥೆಯ ಸದಸ್ಯರನ್ನಾಗಿ ಸಿದ್ದರಾಮಯ್ಯ ಅವರ ಆಶೀರ್ವಾದದಿಂದ ನೇಮಕ ಮಾಡಲಾಗಿದೆ. ಹಣಕಾಸಿನ ಲಾಭ ಮಾಡಿಕೊಂಡು ಸಿದ್ದರಾಮಯ್ಯ ಅವರು ವಿವೇಕಾನಂದ ಅವರಿಗೆ ಲಾಭದಾಯಕ ಹುದ್ದೆ ಕಲ್ಪಿಸಿದ್ದಾರೆ. ಇದಕ್ಕೆ ನಿರ್ಬಂಧವಿದ್ದು, ಸಿದ್ದರಾಮಯ್ಯ ಅವರ ವಿರುದ್ಧ ಭ್ರಷ್ಟಾಚಾರ ನಿಷೇಧ ಕಾಯಿದೆ ಸೆಕ್ಷನ್‌ಗಳಾದ 7, 8, 13(1)(ಡಿ) ಮತ್ತು 13(2) ಮತ್ತು ಅಕ್ರಮ ಹಣ ವರ್ಗಾವಣೆ ಕಾಯಿದೆ ಸೆಕ್ಷನ್‌ 3 ಮತ್ತು 4ರ ಅಡಿ ಸಂಜ್ಞೇ ಪರಿಗಣಿಸುವಂತೆ ಕೋರಿ ರಮೇಶ್‌ ಅವರು ಖಾಸಗಿ ದೂರು ದಾಖಲಿಸಿದ್ದರು.