Karnataka HC, Anti Corruption Bureau and Justice H P Sandesh
Karnataka HC, Anti Corruption Bureau and Justice H P Sandesh 
ಸುದ್ದಿಗಳು

[ಲಂಚ ಪ್ರಕರಣ] ಉಪ ತಹಶೀಲ್ದಾರ್‌ಗೆ ಡಿಫಾಲ್ಟ್‌ ಜಾಮೀನು; ಎಸಿಬಿಗೆ ನಾಚಿಕೆಯಾಗಬೇಕು ಎಂದ ಹೈಕೋರ್ಟ್‌

Siddesh M S

ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಲಂಚ ಪ್ರಕರಣದಲ್ಲಿನ ಆರೋಪಿ ಉಪ ತಹಶೀಲ್ದಾರ್‌ ಪಿ ಎಸ್‌ ಮಹೇಶ್‌ ಬಂಧನವಾಗಿ 60 ದಿನಗಳು ಕಳೆದರೂ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಅವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರಿಗೆ ಗುರುವಾರ ವಿಚಾರಣಾಧೀನ ನ್ಯಾಯಾಲಯದಲ್ಲಿ ಡೀಫಾಲ್ಟ್‌ ಜಾಮೀನು ದೊರೆತಿದೆ. ಹೀಗಾಗಿ, ಕರ್ನಾಟಕ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಹೇಶ್‌ ಪರ ವಕೀಲರು ಹಿಂಪಡೆದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಅವರ ನೇತೃತ್ವದ ಪೀಠವು ಅರ್ಜಿದಾರರ ವಕೀಲ ಬಿ ಎಲ್‌ ನಾಗೇಶ್‌ ಅವರ ವಾದವನ್ನು ಆಲಿಸಿ, ಅರ್ಜಿ ಹಿಂಪಡೆಯಲು ಅನುಮತಿಸಿದರು.

ಇದಕ್ಕೂ ಮುನ್ನ, ಬೆಳಗ್ಗೆ ನಡೆದಿದ್ದ ವಿಚಾರಣೆಯಲ್ಲಿ ನ್ಯಾಯಮೂರ್ತಿ ಸಂದೇಶ್‌ ಅವರು ಎಸಿಬಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಒಂದು ಹಂತದಲ್ಲಿ ಎಸಿಬಿ ರಚಿಸಿರುವ ಉದ್ದೇಶವೇನು? ಭ್ರಷ್ಟಚಾರ ನಿಯಂತ್ರಣ ಮಾಡಲೋ? ಅಥವಾ ಭ್ರಷ್ಟಾಚಾರ ಎಸಗುವವರಿಗೆ ಬೆಂಬಲ ನೀಡಲೋ? ನಿಮಗೆ (ಎಸಿಬಿ) ನಾಚಿಕೆಯಾಗಬೇಕು ಎಂದು ಮೌಖಿಕವಾಗಿ ಛೀಮಾರಿ ಹಾಕಿದರು.

ವಿಚಾರಣೆ ಆರಂಭವಾಗುತ್ತಿದ್ದಂತೆ ಎಸಿಬಿ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಎನ್‌ ಮನಮೋಹನ್‌ ಅವರನ್ನು ಕುರಿತು ನ್ಯಾ. ಸಂದೇಶ್‌ ಅವರು “ಎಸಿಬಿ ಪ್ರಾಮಾಣಿಕತೆ ಕುರಿತು ವಾದ ಮಂಡಿಸಿದಿರಲ್ಲಾ, ಆರೋಪ ಪಟ್ಟಿ ಸಲ್ಲಿಸದೇ ಪರೋಕ್ಷವಾಗಿ ಆರೋಪಿಗೆ ಏಕೆ ಬೆಂಬಲ ನೀಡಿದಿರಿ? 60 ದಿನಗಳಾದರೂ ನೀವೇಕೆ ಆರೋಪ ಪಟ್ಟಿ ಸಲ್ಲಿಸಿಲ್ಲ? ಆರೋಪ ಪಟ್ಟಿ ಸಲ್ಲಿಸಲು ಕಾಲಮಿತಿ ಏನು?” ಎಂದು ಗುಡುಗಿದರು.

ಆಗ ಮನಮೋಹನ್‌ ಅವರು “ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರಬೇಕಿತ್ತು. ಹಾಗಾಗಿ, ಆರೋಪ ಪಟ್ಟಿ ಸಲ್ಲಿಸಲಾಗಿಲ್ಲ” ಎಂದು ಸಮಜಾಯಿಷಿ ನೀಡಲು ಮುಂದಾದರು.

ಇದರಿಂದ ಕೆರಳಿದ ನ್ಯಾ. ಸಂದೇಶ್‌ ಅವರು “ಮೊದಲಿಗೆ ಆರೋಪ ಪಟ್ಟಿ ಸಲ್ಲಿಸಿ, ಸಿಆರ್‌ಪಿಸಿ ಸೆಕ್ಷನ್‌ 173(8) ಅನ್ನು ಬಳಕೆ ಮಾಡುವ ಮೂಲಕ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಬಹುದಿತ್ತಲ್ಲವೇ? ಇದು, ಆರೋಪಿಯು ನ್ಯಾಯಾಲಯದ ವ್ಯಾಪ್ತಿಯಿಂದ ಪಾರಾಗಲು ಸಹಕರಿಸುವುದಲ್ಲದೆ ಮತ್ತೇನು? ನಿಮ್ಮ (ಎಸಿಬಿ) ಸಂಸ್ಥೆಯು ಅತ್ಯಂತ ಪ್ರಾಮಾಣಿಕವಾಗಿದೆ ಎಂದು ನೀವು ವಾದ ಮಂಡಿಸಿದ್ದೀರಿ. ಆರೋಪ ಪಟ್ಟಿ ಸಲ್ಲಿಸದೇ ಪರೋಕ್ಷವಾಗಿ ನೀವೇಕೆ ಆರೋಪಿಗೆ ಬೆಂಬಲ ನೀಡುತ್ತಿದ್ದೀರಿ?” ಎಂದರು.

ಈ ಸಂದರ್ಭದಲ್ಲಿ ಮನಮೋಹನ್‌ ಅವರು ಜಾಮೀನು ಮನವಿ ಕುರಿತು ನಿರ್ಧರಿಸುವಂತೆ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್‌ ಆದೇಶ ಮಾಡಿರುವುದನ್ನು ಉಲ್ಲೇಖಿಸಿದರು.

ಇದಕ್ಕೆ ನ್ಯಾ. ಸಂದೇಶ್‌ ಅವರು “ಸುಪ್ರೀಂ ಕೋರ್ಟ್‌ ಆದೇಶ ನನ್ನ ಬಳಿ ಇದೆ. ಜಾಮೀನು ಮನವಿಯನ್ನು ವಿಲೇವಾರಿ ಮಾಡುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶ ಮಾಡಿದೆ. ಪ್ರಕರಣದಲ್ಲಿ ನೀವೇಕೆ ಆರೋಪ ಪಟ್ಟಿ ಸಲ್ಲಿಸಿಲ್ಲ? ಇದರರ್ಥ ನೀವು ಅವರ (ಆರೋಪಿ) ಜೊತೆ ಕೈಜೋಡಿಸಿದ್ದೀರಿ. ಹೌದಲ್ಲವೇ? ಆರೋಪ ಪಟ್ಟಿಯನ್ನು 60 ದಿನಗಳ ಒಳಗೆ ಸಲ್ಲಿಸಬೇಕು ಎಂಬುದು ನಿಮಗೆ ತಿಳಿದಿದೆಯೋ, ಇಲ್ಲವೋ? ಹೀಗಿರುವಾಗ, ನೀವೇಕೆ ಆರೋಪ ಪಟ್ಟಿ ಸಲ್ಲಿಸಿಲ್ಲ? ಆರೋಪಿಯು ಪರೋಕ್ಷವಾಗಿ ಬಚಾವಾಗಲು ಇದು ನೆರವಾಗುವ ರೀತಿಯಲ್ಲವೇ? ಎಸಿಬಿಯ ಗುರಿ ಏನು? ಆರೋಪ ಪಟ್ಟಿ ಸಲ್ಲಿಸಿದ ಬಳಿಕವೂ, ಎಫ್‌ಎಸ್‌ಎಲ್‌ ವರದಿ ಸಲ್ಲಿಸಬಹುದಲ್ಲವೇ? ಎಸಿಬಿ ರಚಿಸಿರುವ ಉದ್ದೇಶವೇನು? ಭ್ರಷ್ಟಚಾರ ನಿಯಂತ್ರಣ ಮಾಡಲೋ? ಅಥವಾ ಭ್ರಷ್ಟಾಚಾರ ಎಸಗುವವರಿಗೆ ಬೆಂಬಲ ನೀಡಲೋ? ನಿಮಗೆ ನಾಚಿಕೆಯಾಗಬೇಕು. ಹೌದಲ್ಲವೇ?” ಎಂದು ಆಕ್ರೋಶದಿಂದ ನುಡಿದರು.

ಅಂತಿಮವಾಗಿ ಪೀಠವು “60 ದಿನಗಳಾದರೂ ಎಸಿಬಿ ತನಿಖಾಧಿಕಾರಿ ಏಕೆ ಆರೋಪ ಪಟ್ಟಿ ಸಲ್ಲಿಸಿಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಪೊಲೀಸ್‌ ಮಹಾನಿರ್ದೇಶಕರಿಗೆ ಆದೇಶಿಸುತ್ತೇನೆ” ಎಂದು ಹೇಳಿತು. ಅಲ್ಲದೇ, ವಕಾಲತ್ತಿಗೆ ಸಹಿ ಹಾಕಿರುವ ಅರ್ಜಿದಾರರನ್ನು ಕರೆತರುವಂತೆ ಅರ್ಜಿದಾರರ ಪರ ವಕೀಲ ಬಿ ಎಲ್‌ ನಾಗೇಶ್‌ ಅವರಿಗೆ ಸೂಚಿಸಿ, ವಿಚಾರಣೆಯನ್ನು ಮುಂದೂಡಿತ್ತು. ಪ್ರಕರಣ ಸಂಜೆ ವಿಚಾರಣೆಗೆ ಬಂದಾಗ, ವಕೀಲ ನಾಗೇಶ್‌ ಅವರು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯವು ಆರೋಪಿ ಮಹೇಶ್‌ ಅವರಿಗೆ ಡಿಫಾಲ್ಟ್‌ ಜಾಮೀನು ಮಂಜೂರು ಮಾಡಿದೆ. ಹೀಗಾಗಿ, ಅರ್ಜಿ ಹಿಂಪಡೆಯಲು ಅನುಮತಿಸಬೇಕು ಎಂದು ಕೋರಿದರು. ಇದಕ್ಕೆ ನ್ಯಾಯಾಲಯ ಒಪ್ಪಿತು.

ಪ್ರಕರಣದ ಹಿನ್ನೆಲೆ: ಆನೇಕಲ್‌ ತಾಲ್ಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನು ಒಡೆತನಕ್ಕೆ ಸಂಬಂಧಿಸಿದಂತೆ ಅನುಕೂಲಕರ ಆದೇಶ ಮಾಡಲು ಅಜಂ ಪಾಷಾ ಎಂಬುವರಿಂದ 5 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಪ ತಹಶೀಲ್ದಾರ್‌ ಆಗಿದ್ದ ಮಹೇಶ್‌ ಮತ್ತು ನ್ಯಾಯಾಲಯ ವಿಭಾಗದ ಸಹಾಯಕ ಚೇತನ್‌ ಕುಮಾರ್‌ ಅಲಿಯಾಸ್‌ ಚಂದ್ರ ಅವರನ್ನು ಮೇ 21ರಂದು ಎಸಿಬಿ ಬಂಧಿಸಿತ್ತು. ಮಹೇಶ್‌ ಮತ್ತು ಚಂದ್ರು ಬಂಧನವಾಗಿ ಇಂದಿಗೆ ಸರಿಯಾಗಿ ಎರಡು ತಿಂಗಳಾಗಿದೆ. ಕಾನೂನಿನ ಅನ್ವಯ ಈ ವೇಳೆಗಾಗಲೇ ಎಸಿಬಿಯು ಆರೋಪ ಪಟ್ಟಿ ಸಲ್ಲಿಸಬೇಕಿತ್ತು. ಹೀಗಾದ ಹಿನ್ನೆಲೆಯಲ್ಲಿ , ಅವರಿಗೆ ಜಾಮೀನು ದೊರೆತಿದೆ.