ಲಂಚ ಪ್ರಕರಣದಲ್ಲಿ ಬಂಧಿತರಾಗಿ ಅಮಾನತುಗೊಂಡಿರುವ ಬೆಂಗಳೂರು ನಗರದ ಹಿಂದಿನ ಜಿಲ್ಲಾಧಿಕಾರಿ ಜೆ ಮಂಜುನಾಥ್ ಅವರ ಜಾಮೀನು ಮನವಿಯ ವಿಚಾರಣೆಯನ್ನು ಬುಧವಾರ ನಡೆಸಿದ ಕರ್ನಾಟಕ ಹೈಕೋರ್ಟ್ ಆಕ್ಷೇಪಣೆ ಸಲ್ಲಿಸಲು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ನಿರ್ದೇಶಿಸಿದೆ.
ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರಾದ ಪ್ರತೀಕ್ ಚಂದ್ರಮೌಳಿ ಮತ್ತು ಕೀರ್ತನಾ ನಾಗರಾಜ್ ಅವರು ಪ್ರಕರಣದ ಕುರಿತು ಪೀಠಕ್ಕೆ ವಿವರಿಸಿದರು. ಇದನ್ನು ಆಲಿಸಿದ ಪೀಠವು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಎನ್ ಮನಮೋಹನ್ ಅವರಿಗೆ ಆಕ್ಷೇಪಣೆ ಸಲ್ಲಿಸಲು ಆದೇಶಿಸಿ, ವಿಚಾರಣೆಯನ್ನು ಜುಲೈ 28ಕ್ಕೆ ಮುಂದೂಡಿತು.
ಬಾಹ್ಯ ಸಂಗತಿಗಳು ಮತ್ತು ಲಂಚ ಪ್ರಕರಣದಲ್ಲಿ ಎರಡನೇ ಆರೋಪಿ ಮಹೇಶ್ ಅವರ ಜಾಮೀನು ಮನವಿಯ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಆಧರಿಸಿ, ಹೆಚ್ಚುವರಿ ವರದಿ ಸಲ್ಲಿಸಿ ತನಿಖಾಧಿಕಾರಿಯು ತಮ್ಮನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಇದು ನ್ಯಾಯಸಮ್ಮತವಲ್ಲ ಎಂದಿದ್ದು ಪ್ರಕರಣದ ವ್ಯಾಪ್ತಿ ಮೀರಿದ್ದಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ. ಪ್ರಥಮ ಮಾಹಿತಿ ವರದಿಯಲ್ಲಿ ಮಂಜುನಾಥ್ ಅವರ ವಿರುದ್ಧ ಯಾವುದೇ ಆರೋಪವಿಲ್ಲ. ಲಂಚ ಸ್ವೀಕಾರ ಪ್ರಕರಣದಲ್ಲಿ ಯಾವುದೇ ರೀತಿಯಲ್ಲೂ ಅವರು ಭಾಗಿಯಾಗಿಲ್ಲ ಎಂದೂ ಜಾಮೀನು ಮನವಿಯಲ್ಲಿ ವಿವರಿಸಲಾಗಿದೆ.
ಈಚೆಗೆ ಸೆಷನ್ಸ್ ನ್ಯಾಯಾಲಯವು ಮಂಜುನಾಥ್ ಅವರ ಜಾಮೀನು ಮನವಿ ತಿರಸ್ಕರಿಸಿತ್ತು. ಜುಲೈ 4ರಂದು ಬಂಧಿಸಲ್ಪಟ್ಟ ಮಂಜುನಾಥ್ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಆನೇಕಲ್ ತಾಲ್ಲೂಕಿನ ಕೂಡ್ಲು ಗ್ರಾಮದ 38ಗುಂಟೆ ಜಮೀನು ಒಡೆತನಕ್ಕೆ ಸಂಬಂಧಿಸಿದಂತೆ ಅನುಕೂಲಕರ ಆದೇಶ ಮಾಡಲು ಅಜಂ ಪಾಷಾ ಎಂಬುವರಿಂದ 5 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಪ ತಹಶೀಲ್ದಾರ್ ಆಗಿದ್ದ ಮಹೇಶ್ ಮತ್ತು ನ್ಯಾಯಾಲಯ ವಿಭಾಗದ ಸಹಾಯಕ ಚೇತನ್ ಕುಮಾರ್ ಅಲಿಯಾಸ್ ಚಂದ್ರ ಅವರನ್ನು ಮೇ 21ರಂದು ಎಸಿಬಿ ಬಂಧಿಸಿತ್ತು. ಈ ಪ್ರಕರಣದಲ್ಲಿ ಮಂಜುನಾಥ್ ಮೂರನೇ ಆರೋಪಿಯಾಗಿದ್ದಾರೆ.