ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತಕ್ಕೆ (ಕೆಎಸ್‌ಡಿಎಲ್) ಕಚ್ಚಾ ತೈಲ ಪೂರೈಸುವ ಗುತ್ತಿಗೆಯ ಕಾರ್ಯಾದೇಶ ನೀಡಲು ಲಂಚಕ್ಕೆ ಬೇಡಿಕೆಯಿಟ್ಟ ಆರೋಪ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಬಿಜೆಪಿ ಶಾಸಕ ಕೆ ಮಾಡಾಳು ವಿರೂಪಾಕ್ಷಪ್ಪ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ವಜಾ ಮಾಡಿದೆ. ಈ ಹಿನ್ನೆಲೆಯಲ್ಲಿ ವಿರೂಪಾಕ್ಷಪ್ಪ ಅವರಿಗೆ ಮತ್ತೆ ಬಂಧನ ಭೀತಿ ಎದುರಾಗಿದೆ.
ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ನಲ್ಲಿ ಮೊದಲ ಆರೋಪಿಯಾಗಿರುವ ಚನ್ನಗಿರಿಯ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿ, ಮಾರ್ಚ್ 17ರಂದು ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ಇಂದು ಪ್ರಕಟಿಸಿದೆ. ವಿಸ್ತೃತ ಆದೇಶವು ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ಮಾರ್ಚ್ 7ರಂದು ಮಾಡಾಳ್ ವಿರೂಪಾಕ್ಷಪ್ಪ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಐದು ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಸಲ್ಲಿಸಬೇಕು. ಆದೇಶವಾದ 48 ಗಂಟೆಗಳ ಒಳಗೆ ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು. ತನಿಖೆಗೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡಬೇಕು. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು ಎಂಬ ಷರತ್ತುಗಳನ್ನು ವಿಧಿಸಿತ್ತು. ಆನಂತರ ಮಾರ್ಚ್ 17ರಂದು ವಾದ-ಪ್ರತಿ ವಾದ ಆಲಿಸಿದ್ದ ನ್ಯಾಯಾಲಯವು ಆದೇಶ ಕಾಯ್ದಿರಿಸಿತ್ತು.
ಪ್ರಕರಣದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಪುತ್ರ ಪ್ರಶಾಂತ್ ಮಾಡಾಳ್ ಅವರ ವಿರುದ್ಧ ಭ್ರಷ್ಟಚಾರ ನಿಯಂತ್ರಣ ಕಾಯಿದೆ ಸೆಕ್ಷನ್ 7(ಎ), 7ಬಿ ಅಡಿ ಪ್ರಕರಣ ದಾಖಲಿಸಲಾಗಿದ್ದು, ಶಾಸಕ ವಿರೂಪಾಕ್ಷಪ್ಪ ಅವರನ್ನು ಮೊದಲ ಆರೋಪಿ, ಪುತ್ರ ಪ್ರಶಾಂತ್ ಅವರನ್ನು ಎರಡನೇ ಆರೋಪಿಯನ್ನಾಗಿಸಲಾಗಿದೆ. ಅಲ್ಲದೇ, ಸಿದ್ದೇಶ್, ನಿಕೋಲಸ್ ಮತ್ತು ಗಂಗಾಧರ್ ಎಂಬ ಮೂವರನ್ನೂ ಪ್ರಕರಣದಲ್ಲಿ ಆರೋಪಿಗಳನ್ನಾಗಿಸಲಾಗಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಶ್ರೇಯಸ್ ಕಶ್ಯಪ್ ಅವರು ಕೆ ಆರ್ ರಸ್ತೆಯಲ್ಲಿ ಕೆಮಿಕಲ್ಸ್ ಕಾರ್ಪೊರೇಶನ್ ಎಂಬ ಪಾಲುದಾರಿಕೆ ಕಂಪೆನಿ ಹೊಂದಿದ್ದು, ಅವರ ಪರಿಚಯಸ್ಥರಾದ ಟಿ ಎ ಎಸ್ ಮೂರ್ತಿ ಅವರು ಚಾಮರಾಜಪೇಟೆಯಲ್ಲಿ ಡೆಲಿಸಿಯಾ ಕೆಮಿಕಲ್ಸ್ ಎಂಬ ಪಾಲುದಾರಿಕೆ ಕಂಪೆನಿ ಹೊಂದಿದ್ದಾರೆ. ಈ ಕಂಪೆನಿಗಳು ಕೆಎಸ್‌ಡಿಎಲ್‌ಗೆ ರಾಸಾಯನಿಕ ಆಯಿಲ್ ಪೂರೈಸಲು 2023ರ ಜನವರಿಯಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿ ಯಶಸ್ವಿಯಾಗಿದ್ದವು. ಈ ಸಂಬಂಧ ಕಾರ್ಯಾದೇಶ ಮತ್ತು ಹಣ ಬಿಡುಗಡೆ ಮಾಡಿಸಲು ₹81 ಲಕ್ಷ ಲಂಚ ನೀಡುವಂತೆ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಪ್ರಶಾಂತ್ ಅವರು ಬೇಡಿಕೆ ಇಟ್ಟಿದ್ದಾರೆ ಎಂದು ಶ್ರೇಯಸ್ ಕಶ್ಯಪ್ ಬೆಂಗಳೂರಿನ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ದೂರು ನೀಡಿದ್ದರು.
ಕುಮಾರ ಪಾರ್ಕ್‌ನ ಕ್ರೆಸೆಂಟ್ ರಸ್ತೆಯಲ್ಲಿರುವ ಖಾಸಗಿ ಕಚೇರಿಗೆ ಗುರುವಾರ ಸಂಜೆ ಗುತ್ತಿಗೆದಾರ ₹40 ಲಕ್ಷ ಲಂಚದ ಹಣ ತಲುಪಿಸುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಪ್ರಶಾಂತ್ ಸೇರಿ ಐವರನ್ನು ಬಂಧಿಸಿದ್ದರು.