ಸುದ್ದಿಗಳು

ಸೇತುವೆ, ರಸ್ತೆ ನಿರ್ಮಾಣ, ಮೆಟ್ರೊ ರೈಲು ಸಂಪರ್ಕ ಕಲ್ಪಿಸುವುದು ಮಾತ್ರ ಅಭಿವೃದ್ಧಿಯಲ್ಲ: ನ್ಯಾ. ಓಕಾ

“ಬಡವರಿಗೆ ಒಂದು ಮನೆ, ಅವರ ಮಕ್ಕಳಿಗೆ ಕೈಗೆಟುಕವ ದರದಲ್ಲಿ ಉತ್ತಮ ಶಿಕ್ಷಣ ಹಾಗೂ ವೈದ್ಯಕೀಯ ಸೌಲಭ್ಯ ಸಿಗುವಂತಾವುದೇ ನಿಜವಾದ ಅಭಿವೃದ್ಧಿ” ಎಂದ ನ್ಯಾ. ಓಕಾ.

Bar & Bench

“ಸೇತುವೆ, ರಸ್ತೆಗಳ ನಿರ್ಮಾಣ ಅಥವಾ ಮೆಟ್ರೊ ರೈಲುಗಳ ಸಂಪರ್ಕ ಕಲ್ಪಿಸುವುದು ಮಾತ್ರ ಅಭಿವೃದ್ಧಿ ಎಂಬಂತಹ ತಪ್ಪು ಅಭಿಪ್ರಾಯ ನಮ್ಮಲ್ಲಿದೆ” ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ‌ ಅಭಿಪ್ರಾಯಪಟ್ಟರು.

ಬೆಂಗಳೂರಿನಲ್ಲಿ ಶನಿವಾರ ಹೈಕೋರ್ಟ್‌ನ ಹಿರಿಯ ವಕೀಲ ಡಿ ಎಲ್‌ ಎನ್‌ ರಾವ್ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗಿದ್ದ ‘ಪರಿಸರ ನ್ಯಾಯವನ್ನು ನಿಶ್ಚಿತಗೊಳಿಸುವ ಹಾದಿಗಳು’ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

“ಬಡವರಿಗೆ ಒಂದು ಮನೆ, ಅವರ ಮಕ್ಕಳಿಗೆ ಕೈಗೆಟುಕವ ದರದಲ್ಲಿ ಉತ್ತಮ ಶಿಕ್ಷಣ ಹಾಗೂ ವೈದ್ಯಕೀಯ ಸೌಲಭ್ಯ ಸಿಗುವಂತಾವುದೇ ನಿಜವಾದ ಅಭಿವೃದ್ಧಿ” ಎಂದು ಹೇಳಿದರು.

“ಧಾರ್ಮಿಕ ಉತ್ಸವಗಳ ನೆಪದಲ್ಲಿ ರಾತ್ರಿ 10 ಗಂಟೆಯ ನಂತರವೂ ಉಲ್ಲಾಸದಿಂದ ಸಡಗರ ವ್ಯಕ್ತಪಡಿಸುವ ಜನರು ಶಬ್ದಮಾಲಿನ್ಯ ಉಂಟುಮಾಡುವುದರ ಜೊತೆಗೆ ಬೆದರಿಕೆ ಹುಟ್ಟಿಸುತ್ತಿದ್ದಾರೆ” ಎಂದರು. 

“ಇಂದು ಎಲ್ಲೆಡೆ ವಾಹನಗಳ ಸಮಸ್ಯೆ ಭಾರಿ ಪ್ರಮಾಣದಲ್ಲಿ ಕಂಡು ಬರುತ್ತಿದೆ. ಒಂದೆಡೆ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ವೇಗದ ನಗರೀಕರಣದಿಂದ ಪರಿಸರ ಕಲುಷಿತಗೊಳ್ಳುತ್ತಿದೆ” ಎಂದರು.

‘ಬೆಂಗಳೂರು ಹಸಿರಿನ ನಗರಿ ಎಂದು ಕೇಳುತ್ತಿದ್ದೆವು. ಆದರೆ, ಈಗ ಬೆಂಗಳೂರಿನ ಪರಿಸರ ಗಮನಾರ್ಹವಾಗಿ ಕ್ಷೀಣಿಸುತ್ತಿದೆ. ನೀರಿನ ಕೊರತೆ ತೀವ್ರವಾಗಿ ಕಾಡುತ್ತಿದೆ. ಕೆರೆ, ನೆಲದಾಳದಲ್ಲಿನ ನೀರು ಬತ್ತಿ ಹೋಗುತ್ತಿದೆ. ಕೃಷಿಕರು ಕಂಗಲಾಗುತ್ತಿದ್ದಾರೆ” ಎಂದರು.

“ಈಗ ನೀರು, ಗಾಳಿ ವ್ಯಾಪಕವಾಗಿ ಕಲುಷಿತಗೊಳ್ಳುತ್ತಿದ್ದು, ಪರಿಸರದ ಕಾನೂನುಗಳ ಅನುಷ್ಠಾನ ಅಂದುಕೊಂಡಂತೆ ಸಾಧ್ಯವಾಗುತ್ತಿಲ್ಲ. ಪರಿಸರ ನ್ಯಾಯವನ್ನು ಪ್ರಾಥಮಿಕ ಶಿಕ್ಷಣ ಹಂತದಲ್ಲೇ ಮಕ್ಕಳಿಗೆ ಕಲಿಸುವಂತಾದರೆ ಮುಂದೆ ಅದೊಂದು ಅಭಿಯಾನವಾಗಿ ಪರಿಸರದ ಉಳಿವಿಗೆ ಎಡೆ ಮಾಡಿಕೊಡುತ್ತದೆ. ಬೇರೆ ಕಾನೂನುಗಳ ಜೊತೆಗೆ ಇದೂ ಒಂದು ಅವಿಭಾಜ್ಯ ಅಂಗವಾಗಬೇಕು” ಎಂದರು.

“ಪರಿಸರ ಸಂರಕ್ಷಣೆಗಾಗಿ ಕೋರ್ಟ್‌ಗಳ ಮೆಟ್ಟಿಲೇರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಹೋರಾಡುವ ಉತ್ಸಾಹಿಗಳನ್ನು ಅಭಿವೃದ್ಧಿ ವಿರೋಧಿಗಳೆಂದು ಬ್ರ್ಯಾಂಡ್ ಮಾಡಲಾಗುತ್ತಿರುವುದು ಸರಿಯಲ್ಲ ಎಂದೂ ನ್ಯಾ. ಓಕಾ ಹೇಳಿದರು.

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಎಸ್ ಸುನಿಲ್‌ ದತ್‌ ಯಾದವ್‌ ಮತ್ತು ಡಿ ಎಲ್‌ ಎನ್‌ ರಾವ್ ಮಾತನಾಡಿದರು. ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಅನಂತ ರಾಮನಾಥ ಹೆಗಡೆ, ಸಿ ಎಂ ಪೂಣಚ್ಚ, ವಿಜಯಕುಮಾರ ಎ.ಪಾಟೀಲ್, ಶಿವಶಂಕರ ಅಮರಣ್ಣವರ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ, ಹಿರಿಯ ವಕೀಲರು, ಪರಿಸರ ಹೋರಾಟಗಾರರು ಉಪಸ್ಥಿತರಿದ್ದರು.