Allahabad HC, Cow
Allahabad HC, Cow 
ಸುದ್ದಿಗಳು

ಗೋವಿಗೆ ಮೂಲಭೂತ ಹಕ್ಕು ಕಲ್ಪಿಸಿ, ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು: ಅಲಾಹಾಬಾದ್‌ ಹೈಕೋರ್ಟ್‌

Bar & Bench

ಉತ್ತರ ಪ್ರದೇಶದಲ್ಲಿ ಗೋವಧೆ ನಿಯಂತ್ರಣ ಕಾಯಿದೆ ಅಡಿ ಬಂಧಿತನಾಗಿರುವ ಆರೋಪಿ ಜಾವೇದ್‌ಗೆ ಬುಧವಾರ ಜಾಮೀನು ನಿರಾಕರಿಸಿರುವ ಅಲಾಹಾಬಾದ್‌ ಹೈಕೋರ್ಟ್‌, ಗೋವು ಭಾರತದ ಸಂಸ್ಕೃತಿಯ ಭಾಗವಾಗಿದೆ. ಅದನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂದು ಹೇಳಿದೆ.

ಗೋವಿಗೆ ಮೂಲಭೂತ ಹಕ್ಕು ಕಲ್ಪಿಸುವ ಸಂಬಂಧ ಕೇಂದ್ರ ಸರ್ಕಾರವು ಸಂಸತ್‌ನಲ್ಲಿ ಮಸೂದೆ ಮಂಡಿಸಬೇಕು ಎಂದಿರುವ ನ್ಯಾಯಮೂರ್ತಿ ಶೇಖರ್‌ ಕುಮಾರ್‌ ಯಾದವ್‌ ನೇತೃತ್ವದ ಏಕಸದಸ್ಯ ಪೀಠವು ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು. ಗೋವಿಗೆ ಸಮಸ್ಯೆ ಉಂಟು ಮಾಡುವವರಿಗೆ ಶಿಕ್ಷೆ ವಿಧಿಸುವ ಸಂಬಂಧ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದಿದ್ದಾರೆ.

“ಗೋ ಸಂರಕ್ಷಣೆ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಗೋವು ಭಾರತದ ಸಂಸ್ಕೃತಿಯಾಗಿದ್ದು, ಧರ್ಮ ಮೀರಿ ದೇಶದಲ್ಲಿ ವಾಸಿಸುತ್ತಿರುವ ಎಲ್ಲರೂ ಸಂಸ್ಕೃತಿ ಉಳಿಸುವ ಕೆಲಸ ಮಾಡಬೇಕು” ಎಂದು ನ್ಯಾಯಾಲಯ ಹೇಳಿದೆ.

“ಗೋವಿಗೆ ಒಳಿತಾದಾಗ ಮಾತ್ರ ದೇಶಕ್ಕೆ ಒಳಿತಾಗಲಿದೆ” ಎಂದು ಜಾಮೀನು ನಿರಾಕರಣೆ ಆದೇಶದಲ್ಲಿ ನ್ಯಾಯಮೂರ್ತಿ ಹೇಳಿದ್ದಾರೆ. ಗೋವಧೆ ನಿಯಂತ್ರಣ ಕಾಯಿದೆಯ ಸೆಕ್ಷನ್‌ 3, 5 ಮತ್ತು 8ರ ಅಡಿ ಆರೋಪಿಯ ವಿರುದ್ಧ ದೂರು ದಾಖಲಿಸಲಾಗಿದೆ.

ವಿಭಿನ್ನ ಧರ್ಮಕ್ಕೆ ಸೇರಿದ ಎಲ್ಲರೂ ನೆಲೆಸಿರುವ ವಿಶ್ವದ ಏಕೈಕ ರಾಷ್ಟ್ರ ಭಾರತ. ಪ್ರತಿಯೊಬ್ಬರು ಒಂದೊಂದು ದೇವರನ್ನು ಪೂಜಿಸಬಹುದು. ಆದರೆ ದೇಶದ ದೃಷ್ಟಿಯಿಂದ ಅವರೆಲ್ಲರ ಆಲೋಚನೆ ಒಂದೇ ರೀತಿಯಾಗಿರುತ್ತದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. “ದೇಶವನ್ನು ಒಗ್ಗೂಡಿಸಲು ಮತ್ತು ನಂಬಿಕೆಯನ್ನು ಬೆಂಬಲಿಸುವ ದೃಷ್ಟಿಯಿಂದ ಎಲ್ಲರೂ ಹೆಜ್ಜೆ ಇಟ್ಟರೆ ಕೆಲವರ ನಂಬಿಕೆಗಳು ದೇಶದ ಹಿತಾಸಕ್ತಿಗೆ ಪೂರಕವಾಗಿಲ್ಲ. ಈ ರೀತಿ ಮಾತನಾಡುವ ಮೂಲಕ ಅವರು ದೇಶವನ್ನು ದುರ್ಬಲಗೊಳಿಸುತ್ತಾರೆ… ಹೀಗಾಗಿ, ಅರ್ಜಿದಾರರ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ರುಜುವಾತಾಗಿವೆ” ಎಂದು ನ್ಯಾಯಾಲಯ ಹೇಳಿದೆ.

ಈ ಹಿನ್ನೆಲೆಯಲ್ಲಿ ಆರೋಪಿಗೆ ಜಾಮೀನು ನಿರಾಕರಿಸಲಾಗಿದ್ದು, ಒಂದೊಮ್ಮೆ ಜಾಮೀನು ನೀಡಿದರೆ ಶಾಂತಿಭಂಗಕ್ಕೆ ಸಾಮರಸ್ಯ ಕದಡುವಿಕೆಗೆ ಕಾರಣವಾಗಲಿದೆ ಎಂದು ನ್ಯಾಯಾಲಯ ಹೇಳಿದೆ.

“ಆರೋಪಿ ಮೊದಲ ಬಾರಿಗೆ ಅಪರಾಧ ಎಸಗಿಲ್ಲ. ಹಿಂದೆಯೂ ಅವರು ಗೋವಧೆ ಮಾಡಿದ್ದಾರೆ. ಇದು ಸಮಾಜದಲ್ಲಿ ಶಾಂತಿಭಂಗ ಉಂಟು ಮಾಡಿದ್ದು, ಅವರಿಗೆ ಜಾಮೀನು ನೀಡಿದರೆ ಅವರು ಮತ್ತದೇ ಕೆಲಸ ಮಾಡುವ ಮೂಲಕ ಸಾಮರಸ್ಯ ಕದಡಲಿದ್ದಾರೆ. ಹೀಗಾಗಿ, ಆರೋಪಿಯ ಜಾಮೀನು ಮನವಿಯು ಆಧಾರರಹಿತವಾಗಿದ್ದು, ವಜಾಕ್ಕೆ ಅರ್ಹವಾಗಿದೆ. ಆದ್ದರಿಂದ ಜಾಮೀನು ಮನವಿ ವಜಾ ಮಾಡಲಾಗಿದೆ” ಎಂದು ಪೀಠ ಹೇಳಿದೆ.

ರಾಜ್ಯದಲ್ಲಿ ಗೋಶಾಲೆಗಳ ಕಾರ್ಯಾಚರಣೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿರುವ ನ್ಯಾಯಾಲಯವು ಗೋರಕ್ಷಣೆ ಮತ್ತು ಬೆಂಬಲದ ಬಗ್ಗೆ ಮಾತನಾಡುವವರೂ ಗೋ ಭಕ್ಷಣೆಗೆ ಇಳಿದಿದ್ದಾರೆ ಎಂದಿದೆ. “ರಾಜ್ಯ ಸರ್ಕಾರ ಗೋವುಗಳ ರಕ್ಷಣೆಗೆ ಗೋಶಾಲೆ ನಿರ್ಮಿಸುತ್ತದೆ. ಗೋವುಗಳನ್ನು ಸಂರಕ್ಷಣೆ ಮಾಡಬೇಕಾದವರು ಅದನ್ನು ಮಾಡುತ್ತಿಲ್ಲ. ಅದೇ ರೀತಿ ಗೋವುಗಳ ಸಂರಕ್ಷಣೆ ಹೆಸರಿನಲ್ಲಿ ಖಾಸಗಿ ಗೋಶಾಲೆಗಳು ಸಾರ್ವಜನಿಕರಿಂದ ದೇಣಿಗೆ ಮತ್ತು ಸರ್ಕಾರದಿಂದ ಸಹಾಯ ಪಡೆದು ಕೆಲವರು ತಮ್ಮ ಹಿತಾಸಕ್ತಿಗೆ ಅದನ್ನು ಬಳಸಿಕೊಳ್ಳುತ್ತಿದ್ದಾರೆ” ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.