Aneel Mussarat & Arnab Goswami  quora and facebook
ಸುದ್ದಿಗಳು

ಐಎಸ್ಐ ಸಹಚರ ಎಂದು ಕರೆದು ಅರ್ನಾಬ್ ಅವರಿಂದ ಉದ್ಯಮಿ ಮುಸ್ಸರತ್‌ ಮಾನಹಾನಿ: ಇಂಗ್ಲೆಂಡ್‌ ನ್ಯಾಯಾಲಯ

ಮುಸ್ಸರತ್ ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂದು ತೋರಿಸುವ ಯಾವುದೇ ಪುರಾವೆಗಳು ಜುಲೈ 2020 ರಲ್ಲಿ ಪ್ರಸಾರವಾದ ರಿಪಬ್ಲಿಕ್ ಭಾರತ್ ಕಾರ್ಯಕ್ರಮದಲ್ಲಿ ಇರಲಿಲ್ಲ ಎಂದು ನ್ಯಾಯಾಲಯ ಗಮನಿಸಿದೆ.

Bar & Bench

ಜುಲೈ 2020ರಲ್ಲಿ ಪ್ರಸಾರವಾದ ಕಾರ್ಯಕ್ರಮವೊಂದರಲ್ಲಿ ರಿಪಬ್ಲಿಕ್‌ ಟಿವಿಯ ಮುಖ್ಯ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರು ಉದ್ಯಮಿ ಅನೀಲ್ ಮುಸ್ಸರತ್ ಅವರನ್ನು ಐಎಸ್‌ಐ ಸಹಚರ ಎಂದು ಕರೆದು ಮಾನಹಾನಿ ಮಾಡಿದ್ದಾರೆ ಎಂಬುದಾಗಿ ಬ್ರಿಟನ್‌ ನ್ಯಾಯಾಲಯವೊಂದು ಇತ್ತೀಚೆಗೆ ಹೇಳಿದೆ [ಮುಸ್ಸರತ್ ಮತ್ತು ವರ್ಲ್ಡ್ ವ್ಯೂ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್ ನಡುವಣ ಪ್ರಕರಣ].

ಕಾರ್ಯಕ್ರಮದಲ್ಲಿ ಮುಸ್ಸರತ್‌ ಅವರ ವಿರುದ್ಧ ಗಂಭೀರ ಆರೋಪ ಮಾಡಲಾಗಿದ್ದು, ಈ ಕುರಿತು ಮುಸ್ಸರತ್‌ ಅವರ ಹೇಳಿಕೆಗಳು ಅತಿರಂಜಿತವಾಗಿಯೂ ಇಲ್ಲ ಅವಾಸ್ತವಿಕವಾಗಿಯೂ ಇಲ್ಲ ಎಂದು ಲಂಡನ್‌ನಲ್ಲಿರುವ ರಾಯಲ್ ಕೋರ್ಟ್ಸ್ ಆಫ್ ಜಸ್ಟಿಸ್‌ನ ಡೆಪ್ಯೂಟಿ ಮಾಸ್ಟರ್ ಟೂಗುಡ್ ಕ್ಯೂಸಿ ಹೇಳಿದ್ದಾರೆ.

ಅರ್ನಾಬ್‌ ಅವರಿಗೆ ವಿಚಾರಣೆಯ ಬಗ್ಗೆ ಸೂಚನೆ ನೀಡಿದ್ದರೂ ಅವರಿಂದ ಯಾವುದೇ ಪ್ರತಿಕ್ರಿಯೆ ದೊರೆಯದ ಕಾರಣ, ಅವರ ಅನುಪಸ್ಥಿತಿಯಲ್ಲಿ ನ್ಯಾಯಾಲಯ ತೀರ್ಪು ನೀಡಿತು.

ಮುಸ್ಸರತ್ ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂದು ತೋರಿಸುವ ಯಾವುದೇ ಪುರಾವೆಗಳು ಜುಲೈ 2020 ರಲ್ಲಿ ಪ್ರಸಾರವಾದ ರಿಪಬ್ಲಿಕ್ ಭಾರತ್ ಕಾರ್ಯಕ್ರಮದಲ್ಲಿ ಇರಲಿಲ್ಲ ಎಂದು ನ್ಯಾಯಾಲಯ ಗಮನಿಸಿದೆ. ಆ ಮೂಲಕ ಮುಸ್ಸರತ್‌ ಅವರಿಗೆ ಮಾನಹಾನಿ ಮತ್ತು ನ್ಯಾಯಾಲಯದ ವೆಚ್ಚವನ್ನು ಸೇರಿಸಿ ಒಟ್ಟು £47,500 ಪರಿಹಾರ ನೀಡಬೇಕೆಂದು ಸೂಚಿಸಿದೆ.