Rohit Ranjan and Supreme Court
Rohit Ranjan and Supreme Court  Twitter
ಸುದ್ದಿಗಳು

ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ ಪ್ರಸಾರ: ಬಂಧನದ ಭೀತಿ ನಡುವೆ ಸುಪ್ರೀಂ ಮೊರೆ ಹೋದ ಝೀ ಹಿಂದೂಸ್ತಾನ್ ನಿರೂಪಕ

Bar & Bench

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢ ಪೊಲೀಸರು ಕ್ರಮಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಝೀ ಹಿಂದೂಸ್ತಾನ್ ನಿರೂಪಕ ರೋಹಿತ್ ರಂಜನ್ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆ ಕೆ ಮಹೇಶ್ವರಿ ಅವರಿದ್ದ ರಜಾಕಾಲೀನ ಪೀಠವು ನಾಳೆ ಅರ್ಜಿಯ ವಿಚಾರಣೆಗೆ ಒಪ್ಪಿಗೆ ಸೂಚಿಸಿದೆ. "ಈ ವ್ಯಕ್ತಿಯನ್ನು (ರೋಹಿತ್‌ ರಂಜನ್‌) ನಿನ್ನೆ ನೋಯ್ಡಾ ಪೊಲೀಸರು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಅವರು ತಮ್ಮ ಕಾರ್ಯಕ್ರಮವೊಂದರಲ್ಲಿ ತಪ್ಪೆಸಗಿದ್ದಾರೆ. ಈಗ ಛತ್ತೀಸ್‌ಗಢ ಪೊಲೀಸರು ಅವರನ್ನು ಬಂಧಿಸಲು ಬಯಸಿದ್ದಾರೆ" ಎಂದು ರಂಜನ್ ಪರವಾಗಿ ಹಾಜರಾದ ಹಿರಿಯ ನ್ಯಾಯವಾದಿ ಸಿದ್ಧಾರ್ಥ್ ಲೂತ್ರಾ ಹೇಳಿದರು. ಆಗ ನಾಳೆ ಪ್ರಕರಣದ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ತಿಳಿಸಿತು.

ಉದಯಪುರದಲ್ಲಿ ಹತ್ಯೆಯಾದ ಟೈಲರ್ ಕನ್ಹಯ್ಯಾ ಲಾಲ್ ತೇಜಿ ಹಂತಕರನ್ನು ಕ್ಷಮಿಸಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಝೀ ನ್ಯೂಸ್ ಕಾರ್ಯಕ್ರಮದಲ್ಲಿ ಆರೋಪಿಸಿತ್ತು. ಆದರೆ ವಾಸ್ತವದಲ್ಲಿ ಕೇರಳದ ವಯನಾಡ್‌ ಕ್ಷೇತ್ರದ ಕಾಂಗ್ರೆಸ್‌ ಕಚೇರಿ ಧ್ವಂಸಗೊಳಿಸಿದವರನ್ನು ಕ್ಷಮಿಸಬೇಕು ಎಂದು ರಾಹುಲ್‌ ಹೇಳಿದ್ದರೆ ವಿನಾ ಉದಯಪುರ ಹಂತಕರನ್ನಲ್ಲ. ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಕ್ಕೆ ಬಳಿಕ ಚಾನೆಲ್‌ ಕ್ಷಮೆ ಯಾಚಿಸಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢದಲ್ಲಿ ದೂರು ದಾಖಲಾಗಿತ್ತು. ಛತ್ತೀಸ್‌ಗಢ ಪೊಲೀಸರು ನಿನ್ನೆ ಮುಂಜಾನೆ 5.30ಕ್ಕೆ ರೋಹಿತ್‌ ರಂಜನ್‌ ಅವರನ್ನು ಬಂಧಿಸಲು ಬಂದರೂ ಉತ್ತರ ಪ್ರದೇಶ ಪೊಲೀಸರು ರಂಜನ್‌ ರಕ್ಷಣೆಗೆ ಬಂದು ಅವರನ್ನು ಕರೆದೊಯ್ದಿದ್ದರು. ಇದಕ್ಕೂ ಮುನ್ನ ಘಟನೆ ಕುರಿತು ಉತ್ತರಪ್ರದೇಶ ಪೊಲೀಸರನ್ನು ಟ್ಯಾಗ್‌ ಮಾಡಿ ರಂಜನ್‌ ಟ್ವೀಟ್‌ ಮಾಡಿದ್ದರು ಎಂದು ವರದಿಯಾಗಿದೆ. ಜಾಮೀನು ನೀಡಬಹುದಾದ ಅಪರಾಧವನ್ನು ರಂಜನ್‌ ವಿರುದ್ಧ ಹೊರಿಸಿದ್ದ ಉತ್ತರಪ್ರದೇಶ ಪೊಲೀಸರು ಬಳಿಕ ಅವರನ್ನು ಬಿಡುಗಡೆ ಮಾಡಿದ್ದರು.