ಸರ್ವೋಚ್ಚ ನ್ಯಾಯಾಲಯ 
ಸುದ್ದಿಗಳು

ನಿರಪರಾಧಿ ಎಂದು ಸಾಬೀತುಪಡಿಸುವಂತೆ ವಿಚಾರಣೆ ವೇಳೆ ಆರೋಪಿಗೆ ಬಿಹಾರ ಪೊಲೀಸರ ತಾಕೀತು: ಆಘಾತ ವ್ಯಕ್ತಪಡಿಸಿದ ಸುಪ್ರೀಂ

"ಪೊಲೀಸರ ವರ್ತನೆ ಆಘಾತಕಾರಿಯಾಗಿದೆ. ಆರೋಪಿ ತನ್ನೆದುರು ಹಾಜರಾಗಿ ತನ್ನ ನಿರಪರಾಧಿತ್ವವನ್ನು ಸಾಬೀತುಪಡಿಸಬೇಕು ಎಂಬ ಭಾವನೆಯಲ್ಲಿ ಪೊಲೀಸ್ ಅಧಿಕಾರಿ ಇದ್ದಂತಿದೆ" ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ.

Bar & Bench

ಕ್ರಿಮಿನಲ್ ಪ್ರಕರಣದ ಆರೋಪಿಯು ವಿಚಾರಣೆಯ ಸಮಯದಲ್ಲಿ ತನ್ನ ನಿರಪರಾಧಿತ್ವ ಸಾಬೀತುಪಡಿಸಬೇಕೆಂದು ಬಿಹಾರ ಪೊಲೀಸರು ಒತ್ತಾಯಿಸಿದ್ದಕ್ಕೆ ಸುಪ್ರೀಂ ಕೋರ್ಟ್ ಗುರುವಾರ ಆಕ್ಷೇಪ ವ್ಯಕ್ತಪಡಿಸಿದೆ (ಮೊಹಮ್ಮದ್ ತೌಹಿದ್ ಮತ್ತು ಬಿಹಾರ ಸರ್ಕಾರ ನಡುವಣ ಪ್ರಕರಣ).

ಅಂತಹ ನಡೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಹೇಳಿದೆ.

"ಪೊಲೀಸರ ವರ್ತನೆ ಆಘಾತಕಾರಿಯಾಗಿದೆ. ಆರೋಪಿ ತನ್ನೆದುರು ಹಾಜರಾಗಿ ತನ್ನ ನಿರಪರಾಧಿತ್ವವನ್ನು ಸಾಬೀತುಪಡಿಸಬೇಕು ಎಂಬ ಭಾವನೆಯಲ್ಲಿ ಪೊಲೀಸ್ ಅಧಿಕಾರಿ ಇದ್ದಂತಿದೆ" ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ.

ಕೊಲೆ ಯತ್ನದ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡುವ ತನ್ನ ಹಿಂದಿನ ಆದೇಶವನ್ನು ಇದೇ ವೇಳೆ ನ್ಯಾಯಾಲಯ ಅಖೈರುಗೊಳಿಸಿತು.

ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್

ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ ಪಾಟ್ನಾ ಹೈಕೋರ್ಟ್ 2023ರ ಅಕ್ಟೋಬರ್ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

ಮೇಲ್ಮನವಿಗೆ ಸಂಬಂಧಿಸಿದಂತೆ ಡಿಸೆಂಬರ್ 6ರಂದು ನೋಟಿಸ್‌ ನೀಡಿದ್ದ ನ್ಯಾಯಾಲಯ ಮೇಲ್ಮನವಿದಾರನಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿತ್ತು.

ಆರೋಪಿ ಕಸ್ಟಡಿಯಲ್ಲೇ ಇರಬೇಕು ಎಂದು ಬಿಹಾರ ಪೊಲೀಸರು ಪ್ರತಿ ಅಫಿಡವಿಟ್‌ ಸಲ್ಲಿಸಿದ್ದರು. ಆ ಅಫಿಡವಿಟ್‌ನಲ್ಲಿ ಆರೋಪಿ ವಿಚಾರಣೆಯಲ್ಲಿ ತಾನು ನಿರಪರಾಧಿ ಎಂದು ಹೇಳಿದ್ದು ಅದನ್ನು ಬೆಂಬಲಿಸುವಂತಹ ಸಾಕ್ಷ್ಯಗಳನ್ನು ಹಾಜರುಪಡಿಸಿಲ್ಲ ಎಂದು ಪೊಲೀಸರು ದೂರಿದ್ದರು.

ಈ ಅಫಿಡವಿಟ್‌ನಿಂದ ತೃಪ್ತವಾಗದ ಪೀಠ ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪುರಸ್ಕರಿಸಿತು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Md Tauhid vs State of Bihar.pdf
Preview