Yogesh Gowda Facebook
ಸುದ್ದಿಗಳು

ಶಾಸಕ ವಿನಯ್‌ ಜೊತೆ ಜಿ.ಪಂ ಸಭೆಯಲ್ಲಿ ಗಲಾಟೆ ಬಳಿಕ ಸಹೋದರ ಯೋಗೀಶ್‌ ಹತ್ಯೆ: ಅಣ್ಣ ಗುರುನಾಥ ಗೌಡರಿಂದ ಸಾಕ್ಷಿ ದಾಖಲು

ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2016ರ ಜೂನ್‌ 15ರಂದು ಯೋಗೀಶ್‌ಗೌಡ ಗೌಡರ್ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ. 

Bar & Bench

ಕಾಂಗ್ರೆಸ್‌ ಶಾಸಕ ವಿನಯ್ ಕುಲಕರ್ಣಿ ಮತ್ತು ನನ್ನ ತಮ್ಮ ಯೋಗೀಶ್‌ ಗೌಡರ್‌ ನಡುವೆ ಒಂದು ಬಾರಿ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಗಲಾಟೆ ನಡೆದಿತ್ತು. ತದನಂತರದ ದಿನಗಳಲ್ಲಿ ನನ್ನ ತಮ್ಮನ ಕೊಲೆಯಾಯ್ತು ಎಂದು ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್‌ಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ಮೃತನ ಅಣ್ಣ ಗುರುನಾಥ ಗೌಡ ವಿಚಾರಣಾ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದಾರೆ.

ಯೋಗೀಶ್‌ಗೌಡ ಗೌಡರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ವಿಶೇಷ ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅಕ್ಟೋಬರ್‌ 1ರಿಂದ ಪುನರಾರಂಭಿಸಿದ್ದಾರೆ. ಈತನಕ ಗುರುನಾಥ ಗೌಡ ಭಾಗಶಃ ಸಾಕ್ಷಿ ನುಡಿದಿದ್ದು, ವಿಚಾರಣೆಯನ್ನು ಶುಕ್ರವಾರಕ್ಕೆ (ಅಕ್ಟೋಬರ್‌ 4) ಮುಂದೂಡಲಾಗಿದೆ.

ವಿಚಾರಣೆಯ ಮೊದಲ ದಿನ ಗುರುನಾಥ ಗೌಡ ಅವರು ಶಾಸಕ ವಿನಯ್‌ ಕಲಕರ್ಣಿ ಮತ್ತು ನನ್ನ ತಮ್ಮನಿಗೆ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಒಮ್ಮೆ ಭಾರಿ ವಾಗ್ವಾದ ನಡೆದಿತ್ತು. ತದನಂತರದ ದಿನಗಳಲ್ಲಿ ನನ್ನ ತಮ್ಮನ ಕೊಲೆಯಾಗಿತ್ತು ಎಂದು ಸಾಕ್ಷಿ ನುಡಿದಿದ್ದಾರೆ.

ಪ್ರಕರಣದಲ್ಲಿ ಒಟ್ಟು 21 ಆರೋಪಿಗಳಿದ್ದು, 17ನೇ ಆರೋಪಿ ಶಿವಾನಂದ ಶ್ರೀಶೈಲ ಬಿರಾದಾರ (ಯೋಗೀಶ್‌ ಗೌಡರ್‌ ಕೊಲೆಗೂ ಮುನ್ನ ಮೊದಲನೇ ಆರೋಪಿ ಬಸವರಾಜ ಮುತ್ತಗಿಗೆ ದೇಸಿ ರಿವಾಲ್ವರ್‌ ಅನ್ನು ವಿನಯ ಕುಲಕರ್ಣಿ ಹೇಳಿದ್ದಾರೆ ಎಂದು ತನ್ನ ಅನುಯಾಯಿಗಳ ಮೂಲಕ ಕಳುಹಿಸಿಕೊಟ್ಟಿದ್ದರು ಎಂಬ ಆರೋಪವನ್ನು ಹೊತ್ತಿರುವಾತ) ಮಾಫಿ ಸಾಕ್ಷಿ ಆಗಿದ್ದಾರೆ. ವಿನಯ ಕುಲಕರ್ಣಿ 15ನೇ ಆರೋಪಿಯಾಗಿದ್ದಾರೆ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅಪರಾಧ ಪ್ರಕ್ರಿಯಾ ದಂಡ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 230 ಮತ್ತು 231ರ ಅನುಸಾರ ಮರು ವಿಚಾರಣೆಯನ್ನು ನಿಗದಿಪಡಿಸಿ 2024ರ ಜೂನ್‌ 28ರಂದು ಆದೇಶಿಸಿತ್ತು. ಆದರೆ, ಕೆಲವು ಆರೋಪಿಗಳು ತಾಂತ್ರಿಕ ಕಾರಣ ಮುಂದೊಡ್ಡಿ, ಹೊಸ ವಿಚಾರಣೆ ಅಥವಾ ಮುಂದುವರಿಕೆಗೆ ಆಕ್ಷೇಪಿಸಿದ್ದರು. ವಿಶೇಷ ನ್ಯಾಯಾಲಯ ಈ ತಕರಾರನ್ನು ಮಾನ್ಯ ಮಾಡಲು ನಿರಾಕರಿಸಿತ್ತು.

ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಕದ ತಟ್ಟಿದ್ದರು. ಹೈಕೋರ್ಟ್‌ನಲ್ಲಿ ಆರೋಪಿಗಳ ಪರ ವಕೀಲರ ವಾದವನ್ನು ತಿರಸ್ಕರಿಸಿದ್ದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಅರ್ಜಿ ವಜಾ ಮಾಡಿತ್ತು. ಈ ಮೊದಲು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ಪೀಠ ನೀಡಿರುವ ಆದೇಶದ ಅನುಸಾರವೇ ವಿಚಾರಣೆ ಮುಂದುವರಿಯಬೇಕು ಎಂದು ಆದೇಶಿಸಿತ್ತು.

ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2016ರ ಜೂನ್‌ 15ರಂದು ಯೋಗೀಶ್‌ಗೌಡ ಗೌಡರ್ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ. ವಿನಯ ಕುಲಕರ್ಣಿ ಪರ ಹಿರಿಯ ವಕೀಲ ಸಿ ವಿ ನಾಗೇಶ್‌, ಸಿಬಿಐ ಪರ ಗಂಗಾಧರ ಶೆಟ್ಟಿ ಪ್ರತಿನಿಧಿಸುತ್ತಿದ್ದಾರೆ.