Karnataka High Court 
ಸುದ್ದಿಗಳು

ಸಹೋದರನ ಕೊಲೆ ಪ್ರಕರಣ: ಡಾ.ರೇಣುಕಾ ಪ್ರಸಾದ್‌ ಸೇರಿ 6 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಹೈಕೋರ್ಟ್‌

ಕೊಲೆ ಮತ್ತು ಒಳಸಂಚಿಗೆ ರೇಣುಕಾ ಪ್ರಸಾದ್‌ ಅವರೇ ಮುಖ್ಯ ಕಾರಣವಾಗಿದ್ದಾರೆ. ಹೀಗಾಗಿ, ಅವರು ಮೃತ ರಾಮಕೃಷ್ಣ ಅವರ ಪತ್ನಿಗೆ 10 ಲಕ್ಷ ರೂಪಾಯಿ ಪರಿಹಾರ ಪಾವತಿಸಬೇಕು ಎಂದು ನಿರ್ದೇಶಿಸಿದೆ.

Bar & Bench

ದಶಕದ ಹಿಂದೆ ನಡೆದಿದ್ದ, ದಕ್ಷಿಣ ಕನ್ನಡ ಜಿಲ್ಲೆಯ ಕೆವಿಜಿ ಪಾಲಿಟೆಕ್ನಿಕ್‌ ಕಾಲೇಜಿನ ಪ್ರಾಂಶುಪಾಲರಾಗಿದ್ದ ಎ ಎಸ್‌ ರಾಮಕೃಷ್ಣ ಅವರ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವ ಮೃತರ ಸಹೋದರನಾದ ಡಾ.ರೇಣುಕಾ ಪ್ರಸಾದ್‌ ಸೇರಿದಂತೆ 6 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕರ್ನಾಟಕ ಹೈಕೋರ್ಟ್‌ ಗುರುವಾರ ಆದೇಶಿಸಿದೆ.

ಪ್ರಕರಣದಲ್ಲಿ ರೇಣುಕಾ ಪ್ರಸಾದ್‌ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಪುತ್ತೂರಿನ 5ನೇ ಹೆಚ್ಚುವರಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಮತ್ತು ಜಿ ಬಸವರಾಜ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಪ್ರಕರಣದ ಒಟ್ಟು ಏಳು ಮಂದಿ ಆರೋಪಿಗಳ ಪೈಕಿ ಡಾ.ರೇಣುಕಾ ಪ್ರಸಾದ್‌, ಮನೋಜ್‌ ರೈ, ಎಚ್‌ ಆರ್ ನಾಗೇಶ್‌, ವಾಮನ ಪೂಜಾರಿ, ಶರಣ್‌ ಪೂಜಾರಿ  ಮತ್ತು ಶಂಕರ  ಅವರನ್ನು ಮೃತ ಎ ಎಸ್‌ ರಾಮಕೃಷ್ಣ ಅವರ ಹತ್ಯೆ ಮತ್ತು ಕೊಲೆಗೆ ಒಳಸಂಚು ರೂಪಿಸಿದ ಪ್ರಕರಣದಲ್ಲಿ ದೋಷಿಗಳು ಎಂದು ತೀರ್ಮಾನಿಸಿ 2023ರ ಸೆಪ್ಟೆಂಬರ್‌ 27ರಂದು ಹೈಕೋರ್ಟ್‌ ಆದೇಶಿಸಿತ್ತು. ಗುರುವಾರ ಶಿಕ್ಷೆ ವಿಧಿಸುವ ಕುರಿತು ದೋಷಿಗಳ ವಾದ ಆಲಿಸಿದ ಹೈಕೋರ್ಟ್‌, ಕೊಲೆ ಮತ್ತು ಅಪರಾಧಿಕ ಒಳಸಂಚು ಅಪರಾಧಕ್ಕೆ ಎಲ್ಲಾ ಆರು ಮಂದಿ ದೋಷಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 20 ಸಾವಿರ ರೂಪಾಯಿ ದಂಡ ವಿಧಿಸಿದೆ.

ಅಲ್ಲದೆ, ಕೊಲೆ ಮತ್ತು ಒಳಸಂಚಿಗೆ ರೇಣುಕಾ ಪ್ರಸಾದ್‌ ಅವರೇ ಮುಖ್ಯ ಕಾರಣವಾಗಿದ್ದಾರೆ. ಹೀಗಾಗಿ, ಅವರು ಮೃತ ರಾಮಕೃಷ್ಣ ಅವರ ಪತ್ನಿಗೆ 10 ಲಕ್ಷ ರೂಪಾಯಿ ಪರಿಹಾರ ಪಾವತಿಸಬೇಕು ಎಂದು ನಿರ್ದೇಶಿಸಿರುವ ಪೀಠವು ತಲೆ ಮರೆಸಿಕೊಂಡಿರುವ ಐದನೇ ಆರೋಪಿ ಶರಣ್‌ ಪೂಜಾರಿ ಬಂಧನಕ್ಕೆ ವಾರೆಂಟ್‌ ಹೊರಡಿಸುವಂತೆ ಪುತ್ತೂರು ಸತ್ರ ನ್ಯಾಯಾಲಯಕ್ಕೆ ಸೂಚಿಸಿದೆ.

ಚಿಕಿತ್ಸೆ ಕಲ್ಪಿಸಲು ಸೂಚನೆ: ಇದೇ ವೇಳೆ ರೇಣುಕಾ ಪ್ರಸಾದ್‌ ಪರ ವಕೀಲರು, ತಮ್ಮ ಕಕ್ಷಿದಾರರಿಗೆ ಸದ್ಯ 63 ವರ್ಷ. ಪ್ರಕರಣದಲ್ಲಿ ದೋಷಿಯಾಗಿ ನ್ಯಾಯಾಲಯ ತೀರ್ಮಾನಿಸಿದ ನಂತರ ಅವರು ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ಅಧಿಕ ರಕ್ತದೊತ್ತಡ, ನಿದ್ರೆಯ ಅಸ್ವಸ್ಥತೆ ಸೇರಿದಂತೆ ಇನ್ನಿತರ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಅವರಿಗೆ ಜೈಲಿನಲ್ಲಿ ಸೂಕ್ತ ಚಿಕಿತ್ಸೆ ಕಲ್ಪಿಸಲು ಆದೇಶಿಸಬೇಕು ಎಂದು ಕೋರಿದರು. ಈ ಮನವಿ ಪರಿಗಣಿಸಿದ ನ್ಯಾಯಾಲಯವು ರೇಣುಕಾ ಪ್ರಸಾದ್‌ಗೆ ಸೂಕ್ತ ಚಿಕಿತ್ಸೆ ಕಲ್ಪಿಸುವಂತೆ ಮಂಗಳೂರು ಜೈಲು ಅಧೀಕ್ಷಕರಿಗೆ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: ಕುರುಂಜಿ ವೆಂಕಟರಮಣ ಗೌಡ ಅವರು ಕೆವಿಜಿ ಅಕಾಡೆಮಿ ಆಫ್‌ ಲಿಬರಲ್‌ ಎಜುಕೇಷನ್‌ ಸ್ಪ್ಲಿಂಟರ್‌ ಇನ್‌ಸ್ಟಿಟ್ಯೂಷನ್ಸ್‌ ಸ್ಥಾಪಿಸಿದ್ದರು. ವಯಸ್ಸಾದ ಮತ್ತು ಅನಾರೋಗ್ಯದ ಹಿನ್ನೆಲೆಯಲ್ಲಿ ಶೈಕ್ಷಣಿಕ ಸಂಸ್ಥೆಗಳ ನಿರ್ವಹಣೆ ಹೊಣೆಯನ್ನು ಹಿರಿಯ ಪುತ್ರ ಕೆ ವಿ ಚಿದಾನಂದ ಮತ್ತು ಕಿರಿಯ ಪುತ್ರ ರೇಣುಕಾ ಪ್ರಸಾದ್‌ಗೆ ವಿಭಜನೆ ಮಾಡಿ ಕೊಟ್ಟಿದ್ದರು. ಮತ್ತೊಬ್ಬ ಪುತ್ರ ಎ ಎಸ್‌ ರಾಮಕೃಷ್ಣ ಅವರು ಕೆವಿಜಿ ಪಾಲಿಟೆಕ್ನಿಕ್‌ ಕಾಲೇಜು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಆಸ್ತಿ ಹಾಗೂ ಶೈಕ್ಷಣಿಕ ಸಂಸ್ಥೆ ಹೊಣೆಗಾರಿಕೆ ವಿಭಜನೆ ವಿಚಾರವಾಗಿ ರಾಮಕೃಷ್ಣ ಬಗ್ಗೆ ಮನಸ್ತಾಪ ಹೊಂದಿದ್ದ ರೇಣುಕಾ ಪ್ರಸಾದ್‌, ಕೊಲೆ ಸುಪಾರಿ ನೀಡಿದ್ದರು. 2011ರ ಏಪ್ರಿಲ್‌ 28ರಂದು ಬೆಳಗ್ಗೆ 7.45ರಂದು ರಾಮಕೃಷ್ಣ ಅವರ ಮೇಲೆ ಆರೋಪಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿದ್ದರು. ಆರೋಪಿಗಳನ್ನು ಖುಲಾಸೆಗೊಳಿಸಿ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 2016ರ ಅಕ್ಟೋಬರ್‌ 21ರಂದು ಆದೇಶಿಸಿತ್ತು. ಈ ಆದೇಶ ರದ್ದು ಕೋರಿ ಸರ್ಕಾಠವು 2017ರಲ್ಲಿ ಹೈಕೋರ್ಟ್‌ಗೆ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿತ್ತು.

ರಾಜ್ಯ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಪಿ ತೇಜೇಸ್‌ ವಾದ ಮಂಡಿಸಿದ್ದರು.