Yaduveer Wadiyar and Karnataka HC 
ಸುದ್ದಿಗಳು

ಮೈಸೂರು-ಕೊಡಗು ಸಂಸದ ಯದುವೀರ್‌ ಒಡೆಯರ್‌ ಆಯ್ಕೆ ಅಸಿಂಧು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ

ತಮ್ಮ ನಾಮಪತ್ರ ತಿರಸ್ಕರಿಸಿದ್ದ ಅಂದಿನ ಚುನಾವಣಾಧಿಕಾರಿ ಆದೇಶ ಬದಿಗೆ ಸರಿಸಬೇಕು. ಯದುವೀರ್‌ ಆಯ್ಕೆ ಅಸಿಂಧುಗೊಳಿಸಿ, ಹೊಸದಾಗಿ ಚುನಾವಣೆ ನಡೆಸಲು ಆದೇಶಿಸಬೇಕು ಎಂದು ಕೋರಿರುವ ಬಿಎಸ್‌ಪಿ ಅಭ್ಯರ್ಥಿ ಅಕಾಂಕ್ಷಿ ರೇವತಿ.

Bar & Bench

ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಆಯ್ಕೆ ಅಸಿಂಧುಗೊಳಿ, ಮರು ಚುನಾವಣೆ ನಡೆಸಲು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಈಚೆಗೆ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಾಗಿದೆ.

ಸಕಾರಣವಿಲ್ಲದೇ ತನ್ನ ನಾಮಪತ್ರ ತಿರಸ್ಕರಿಸಿದ್ದ ಚುನಾವಣಾಧಿಕಾರಿ ಕ್ರಮವನ್ನು ಪ್ರಶ್ನಿಸಿ ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ಅಭ್ಯರ್ಥಿ ಆಕಾಂಕ್ಷಿ ರೇವತಿ ರಾಜ್ ಅಲಿಯಾಸ್ ಭೀಮಪುತ್ರಿ ರೇವತಿ ರಾಜ್ ಚುನಾವಣಾ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ ಚುನಾವಣಾ ಆಯೋಗ, ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಇತರೆ ಪರಾಜಿತ ಅಭ್ಯರ್ಥಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

2024ರ ಏಪ್ರಿಲ್ 4ರಂದು ಆಯೋಗಕ್ಕೆ ನಾಮಪತ್ರ ಸಲ್ಲಿಸಲಾಗಿತ್ತು. ಆದರೆ, ನಾಮಪತ್ರದ ಕಲಂ 7, 7(ಎ), 7(ಎ)(ಬಿ) ಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಲ್ಲ. ಆದ ಕಾರಣ ಏಪ್ರಿಲ್ 5ರ ಬೆಳಿಗ್ಗೆ 11 ಗಂಟೆಯ ಒಳಗಾಗಿ ಸರಿಯಾಗಿ ಭರ್ತಿ ಮಾಡಿ ನಾಮಪತ್ರ ಸಲ್ಲಿಸಬೇಕು ಎಂದು ಚುನಾವಣಾಧಿಕಾರಿ ಸೂಚಿಸಿದ್ದರು. ಸೂಕ್ತ ಸಮಯದಲ್ಲಿ ನಾಮಪತ್ರ ಸಲ್ಲಿದ್ದರೂ ತಮ್ಮ ನಾಮಪತ್ರ ತಿರಸ್ಕರಿಸಲಾಗಿದೆ. ಈ ಸಂಬಂಧ ರಾಜ್ಯ ಮಖ್ಯ ಚುನಾವಣಾ ಆಯುಕ್ತರಿಗೆ ಪತ್ರದ ಮೂಲಕ ದೂರು ಸಲ್ಲಿಸಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ತಮ್ಮ ನಾಮಪತ್ರ ತಿರಸ್ಕರಿಸಿದ್ದ ಅಂದಿನ ಚುನಾವಣಾಧಿಕಾರಿ/ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ ಅವರ ಆದೇಶವನ್ನು ಬದಿಗೆ ಸರಿಸಬೇಕು. ಯದುವೀರ್‌ ಆಯ್ಕೆ ಅಸಿಂಧುಗೊಳಿಸಿ, ಭಾರತೀಯ ಚುನಾವಣಾ ಆಯೋಗ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಹೊಸದಾಗಿ ಚುನಾವಣೆ ನಡೆಸಲು ಆದೇಶಿಸಬೇಕು ಎಂದು ಕೋರಲಾಗಿದೆ.