B S Yediyurappa and Karnataka HC 
ಸುದ್ದಿಗಳು

[ಪೋಕ್ಸೋ] ನಿರ್ದಿಷ್ಟ ವಿಷಯವಾಗಿ ವಾದಿಸದ ಬಿಎಸ್‌ವೈ ಪರ ವಕೀಲರು; ಅರ್ಜಿ ಪುರಸ್ಕರಿಸುವ ಸಾಧ್ಯತೆ ಕ್ಷೀಣ: ಹೈಕೋರ್ಟ್‌

ವಿಚಾರಣಾಧೀನ ನ್ಯಾಯಾಲಯ ಸಂಜ್ಞೇ ಪರಿಗಣಿಸಿದ್ದನ್ನು ಮೊದಲ ಬಾರಿಗೆ ಪ್ರಶ್ನಿಸಿದ್ದ ಅರ್ಜಿಯಲ್ಲಿ ದೂರು, ಎಫ್‌ಐಆರ್‌, ಆರೋಪ ಪಟ್ಟಿ, ತನಿಖೆಯನ್ನು ಬಿಎಸ್‌ವೈ ಪ್ರಶ್ನಿಸಿದ್ದರು. ಅಲ್ಲಿ ಬಿಎಸ್‌ವೈಗೆ ಹಿನ್ನಡೆಯಾಗಿದೆ ಎಂದ ಪ್ರೊ. ರವಿವರ್ಮ ಕುಮಾರ್.

Bar & Bench

“ಪೋಕ್ಸೊ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿ ನಾಯಕ ಬಿ ಎಸ್‌ ಯಡಿಯೂರಪ್ಪ ಅವರ ಪರ ಹಿರಿಯ ವಕೀಲರು ನಿರ್ದಿಷ್ಟ ವಿಚಾರಕ್ಕೆ ಸಂಬಂಧಿಸಿದಂತೆ ವಾದಿಸಿಲ್ಲ. ಹೀಗಾಗಿ, ಅರ್ಜಿ ಪುರಸ್ಕರಿಸುವ ಪ್ರಶ್ನೆ ಉದ್ಭವಿಸದು” ಎಂದು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಮೌಖಿಕವಾಗಿ ಹೇಳಿದೆ.

ಪೋಕ್ಸೊ ಪ್ರಕರಣದಲ್ಲಿ ವಿಚಾರಣಾಧೀನ ನ್ಯಾಯಾಲಯ ಸಂಜ್ಞೇ ಪರಿಗಣಿಸಿರುವುದನ್ನು ಎರಡನೇ ಬಾರಿಗೆ ಪ್ರಶ್ನಿಸಿ ಮೊದಲ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಇತರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ಏಕಸದಸ್ಯ ಪೀಠ ನಡೆಸಿತು.

Justice M I Arun

ಪ್ರಾಸಿಕ್ಯೂಷನ್‌ ಪರವಾಗಿ ವಾದಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್‌ ಅವರು “ವಿಚಾರಣಾಧೀನ ನ್ಯಾಯಾಲಯ ಸಂಜ್ಞೇ ಪರಿಗಣಿಸಿದ್ದನ್ನು ಮೊದಲ ಬಾರಿಗೆ ಪ್ರಶ್ನಿಸಿದ್ದ ಅರ್ಜಿಯಲ್ಲಿ ದೂರು, ಎಫ್‌ಐಆರ್‌, ಆರೋಪ ಪಟ್ಟಿ, ತನಿಖೆಯನ್ನು ನಿರ್ದಿಷ್ಟವಾಗಿ ಬಿಎಸ್‌ವೈ ಪ್ರಶ್ನಿಸಿದ್ದರು. ಅಲ್ಲಿ ಬಿಎಸ್‌ವೈಗೆ ಹಿನ್ನಡೆಯಾಗಿದೆ. ಸಂಜ್ಞೇ ಪರಿಗಣಿಸಿದ್ದ ಕೋರಿಕೆಯನ್ನು ಮಾತ್ರ ನ್ಯಾಯಾಲಯ ಎತ್ತಿ ಹಿಡಿದಿತ್ತು. ಈ ವಿಚಾರವಾಗಿ ಮಾತ್ರ ವಾದಿಸಬೇಕಿದೆ” ಎಂದರು.

ಆಗ ಪೀಠವು “ಹೇಳಿಕೆ ಮತ್ತು ಪ್ರತಿ ಹೇಳಿಕೆಯನ್ನು ನ್ಯಾಯಾಲಯ ಪರಿಗಣಿಸಬೇಕಿತ್ತು ಎಂಬ ವಿಚಾರದ ಸುತ್ತ ನಿನ್ನೆ ಸಿ ವಿ ನಾಗೇಶ್‌ ಅವರು ವಾದಿಸಿದ್ದಾರೆ. ಇತರೆ ವಿಚಾರಗಳ ಕುರಿತು ಅವರು ವಾದಿಸಿಲ್ಲ. ಕೃತ್ಯ ನಡೆದ ಸ್ಥಳದಲ್ಲಿ ಹಾಜರಿದ್ದವರು ಮತ್ತು ಸಂತ್ರಸ್ತೆಯ ಹೇಳಿಕೆಯ ಸುತ್ತ ಅವರು ವಾದಿಸಿದ್ದಾರೆ. ಈ ಹಿಂದೆ ಸಂಜ್ಞೇ ಪರಿಗಣಿಸಿರುವುದನ್ನು ಪ್ರಶ್ನಿಸಿದ್ದಾಗ ಆ ವಿಚಾರಗಳನ್ನು ಸಮನ್ವಯ ಪೀಠ ಪರಿಗಣಿಸಿ, ಬಿಎಸ್‌ವೈ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದೆ. ಅದು ಅಂತಿಮಗೊಂಡಿದ್ದು, ಅದನ್ನು ಬಿಎಸ್‌ವೈ ಪ್ರಶ್ನಿಸಿಲ್ಲ. ಎರಡನೇ ಬಾರಿ ಸಂಜ್ಞೇ ಪರಿಗಣಿಸುವಾಗ ವಿಚಾರಣಾಧೀನ ನ್ಯಾಯಾಲಯ ವಿವೇಚನೆ ಬಳಸಿದೆಯೋ ಇಲ್ಲವೋ ಎಂಬುದೂ ಸೇರಿ ಬೇರಾವುದೇ ವಿಚಾರದ ಕುರಿತು ವಾದಿಸಿಲ್ಲ. ಹೀಗಿರುವಾಗ ನಿಮ್ಮ ಅರ್ಜಿಯನ್ನು ಪುರಸ್ಕರಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ಇದಕ್ಕೆ ಉತ್ತರಿಸಲು ನಿಮ್ಮ ಹಿರಿಯ ವಕೀಲರನ್ನು (ಸಿ ವಿ ನಾಗೇಶ್‌) ಕರೆತನ್ನಿ" ಎಂದು ವಕೀಲ ಸ್ವಾಮಿನಿ ಗಣೇಶ್‌ ಅವರನ್ನು ಕುರಿತು ನ್ಯಾಯಾಲಯ ಹೇಳಿತು.

ಈ ಹಿನ್ನೆಲೆಯಲ್ಲಿ ಪೀಠವು ವಿಚಾರಣೆಯನ್ನು ಅಕ್ಟೋಬರ್‌ 23ಕ್ಕೆ ಮುಂದೂಡಿತು.