CM Basavaraja Bommai 
ಸುದ್ದಿಗಳು

ಬಜೆಟ್‌: ವಕೀಲರಿಗೆ ಆರೋಗ್ಯ ಸೌಲಭ್ಯ ಯೋಜನೆ ರೂಪಿಸಲು ಸರ್ಕಾರದಿಂದ ಶೇ. 50ರಷ್ಟು ಮೊತ್ತ ನೀಡಿಕೆಗೆ ಅನುಮೋದನೆ

ಹಿಂದಿನ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಹೊಸದಾಗಿ 83 ನ್ಯಾಯಾಲಯಗಳನ್ನು ಪ್ರಾರಂಭಿಸಲಾಗಿದೆ ಎಂದು ಆಯವ್ಯಯದಲ್ಲಿ ತಿಳಿಸಲಾಗಿದೆ.                  

Bar & Bench

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಮಂಡಿಸಿದ ಆಯವ್ಯಯದಲ್ಲಿ ರಾಜ್ಯದ ವಕೀಲರಿಗೆ ಆರೋಗ್ಯ ಸೌಲಭ್ಯ ಕಾರ್ಯಕ್ರಮ ರೂಪಿಸಲು 100 ಕೋಟಿ ರೂಪಾಯಿ ಕಾರ್ಪಸ್‌ ಫಂಡ್‌ ರಚಿಸಲು ರಾಜ್ಯ ಸರ್ಕಾರದಿಂದ ಶೇ. 50ರಷ್ಟು ಮೊತ್ತ ನೀಡಲು ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

ನ್ಯಾಯಾಂಗ ಕಟ್ಟಡಗಳ ಯೋಜನೆ ಅಡಿಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 580 ಕೋಟಿ ರೂಪಾಯಿ ವೆಚ್ಚ ಭರಿಸಿದ್ದು, ಇದರಲ್ಲಿ ರಾಜ್ಯದ ಪಾಲು 397 ಕೋಟಿ ರೂಪಾಯಿಗಳಾಗಿವೆ. ಈ ಅವಧಿಯಲ್ಲಿ 39 ನ್ಯಾಯಾಂಗ ಕಟ್ಟಡಗಳನ್ನು ಪೂರ್ಣಗೊಳಿಸಲಾಗಿದೆ. ಹಿಂದಿನ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಹೊಸದಾಗಿ 83 ನ್ಯಾಯಾಲಯಗಳನ್ನು ಪ್ರಾರಂಭಿಸಲಾಗಿದೆ ಎಂದು ಆಯವ್ಯಯದಲ್ಲಿ ತಿಳಿಸಲಾಗಿದೆ.

ಕಾರಾಗೃಹದಲ್ಲಿನ ಬಂಧಿಗಳ ಅಭ್ಯುದಯಕ್ಕಾಗಿ ಬಂದೀಖಾನೆ ಅಭಿವೃದ್ಧಿ ಮಂಡಳಿಯನ್ನು ರಚಿಸಲಾಗಿದ್ದು, ಬಂಧಿಗಳ ಜೀವನ ಸುಧಾರಣೆ ಮತ್ತು ಶಿಕ್ಷೆಯ ಅವಧಿಯ ನಂತರ ಪುನರ್ವಸತಿಗೆ ಸಶಕ್ತೀಕರಣಗೊಳಿಸಲು ಅಗತ್ಯ ಕೌಶಲ್ಯಗಳನ್ನು ಹೆಚ್ಚಿಸುವ ಯೋಜನೆಗಳನ್ನು ರೂಪಿಸಲಾಗಿದೆ. ಬಂಧಿಗಳಿಗೆ ನೀಡುವ ಕೂಲಿ ದರಗಳನ್ನು ಕನಿಷ್ಠ ವೇತನ ಕಾಯಿದೆ ಅನ್ವಯ ಹೆಚ್ಚಿಸಲು ಕ್ರಮವಹಿಸಲಾಗಿರುತ್ತದೆ ಎಂದು ವಿವರಿಸಲಾಗಿದೆ.

ವಿಜಯಪುರ, ಬೀದರ್‌, ಮಂಗಳೂರು ಮತ್ತು ಬೆಂಗಳೂರು ಕೇಂದ್ರ ಕಾರಾಗೃಹ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಕಾರಾಗೃಹ ಸಾಮರ್ಥ್ಯ 4,000ರಷ್ಟು ಹೆಚ್ಚಾಗಿರುತ್ತದೆ. ಅಲ್ಲದೇ, ರಾಜ್ಯದ ಉಳಿದ ಕಾರಾಗೃಹಗಳಲ್ಲಿಯೂ ಸಹ 1,465 ಬಂಧಿಗಳ ಸಾಮರ್ಥ್ಯ ಹೆಚ್ಚಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.