BBMP and Karnataka HC 
ಸುದ್ದಿಗಳು

ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವ ವೇಳೆ ಜಾರಿಯಲ್ಲಿರುವ ನಿಯಮ ಪಾಲಿಸಬೇಕು: ಹೈಕೋರ್ಟ್‌

ಬೆಂಗಳೂರಿನ ಮೆಜೆಸ್ಟಿಕ್‌ ಪ್ರದೇಶದಲ್ಲಿ ಹೆಚ್ಚುವರಿಯಾಗಿ 62,000 ಚದರ ಮೀಟರ್‌ ಮಹಡಿ ನಿರ್ಮಿಸಲು ಸಂಗಮ್‌ ಎಂಟರ್‌ಪ್ರೈಸಸ್‌ಗೆ ಅನುಮೋದನೆ ನೀಡುವಂತೆ ಬಿಬಿಎಂಪಿಗೆ ನಿರ್ದೇಶಿಸಿದ್ದ ಏಕಸದಸ್ಯ ಪೀಠದ ಆದೇಶ ಬದಿಗೆ ಸರಿಸಿದ ವಿಭಾಗೀಯ ಪೀಠ.

Bar & Bench

ಕಟ್ಟಡ ನಿರ್ಮಾಣ ಮಂಜೂರಾತಿ ನೀಡುವ ದಿನಕ್ಕೆ ಯಾವ ನಿಯಮ ಅಥವಾ ನೀತಿ ಜಾರಿಯಲ್ಲಿರುತ್ತದೋ ಅದರ ಅನುಸಾರ ಒಪ್ಪಿಗೆ ನೀಡಬೇಕೆ ವಿನಾ ಅರ್ಜಿ ಹಾಕುವ ಸಂದರ್ಭದಲ್ಲಿ ಜಾರಿಯಲ್ಲಿದ್ದ ನಿಯಮದ ಅನುಸಾರ ಅನುಮತಿ ನೀಡುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶಿಸಿದೆ.

ಬೆಂಗಳೂರಿನ ಮೆಜೆಸ್ಟಿಕ್‌ ಪ್ರದೇಶದಲ್ಲಿ ಹೆಚ್ಚುವರಿಯಾಗಿ 62,000 ಚದರ ಮೀಟರ್‌ ಮಹಡಿ ನಿರ್ಮಿಸಲು ಸಂಗಮ್‌ ಎಂಟರ್‌ಪ್ರೈಸಸ್‌ಗೆ ಅನುಮೋದನೆ ನೀಡುವಂತೆ ಬಿಬಿಎಂಪಿಗೆ (ಈಗ ಗ್ರೇಟ್‌ ಬೆಂಗಳೂರು ಪ್ರಾಧಿಕಾರ) ನಿರ್ದೇಶಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠ ಬದಿಗೆ ಸರಿಸಿದೆ.

ಹೌರಾ ನಗರಸಭೆ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ತಿಳಿಸಿರುವಂತೆ ಅನುಮತಿ ನೀಡುವ ದಿನಕ್ಕೆ ಚಾಲ್ತಿಯಲ್ಲಿರುವ ನಿಯಮಗಳ ಅನ್ವಯ ಒಪ್ಪಿಗೆ ಪ್ರಮಾಣ ಪತ್ರ ನೀಡಬೇಕೆ ವಿನಾ ಅರ್ಜಿ ಹಾಕುವ ದಿನ ಇದ್ದ ನಿಯಮಗಳ ಅನ್ವಯ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಸಂಗಮ್‌ ಎಂಟರ್‌ಪ್ರೈಸಸ್‌ 22.02.2017ರಂದು ಅಗ್ನಿಶಾಮಕ ಇಲಾಖೆಗೆ ನಿರಾಕ್ಷೇಪಣಾ ಪತ್ರಕ್ಕೆ ಮನವಿ ಸಲ್ಲಿಸಿದೆ.  ಆದರೆ, ಅಂದಿಗಾಗಲೇ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯಿದೆ (ಕೆಟಿಸಿಪಿ) ಸೆಕ್ಷನ್‌ 14ಬಿಗೆ ತಿದ್ದುಪಡಿ ಮಾಡಿ, ನಿಯಮಗಳನ್ನು ಹೊರಡಿಸಲಾಗಿದೆ. ಹೊಸ ನಿಯಮಗಳ ಅನ್ವಯ ಸೆಟ್‌ಬ್ಯಾಕ್‌ ವಿನಾಯಿತಿಯನ್ನು ಶೇ. 25ಕ್ಕೆ ಮಿತಿಗೊಳಿಸಲಾಗಿದೆ. ಸುಧಾರಿತ ಯೋಜನೆಯು ಆ ನಿಯಮಗಳಿಗೆ ಅನುಗುಣವಾಗಿಲ್ಲ ಎಂಬುದು ಒಪ್ಪಿತ ವಿಚಾರವಾಗಿದೆ. ಹೀಗಾಗಿ, ಪರಿಷ್ಕೃತ ಯೋಜನೆಯ ಅನ್ವಯ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡುವಂತೆ ನಿರ್ದೇಶಿಸಲಾಗದು. ಆದ್ದರಿಂದ, ಸಂಗಮ್‌ ಎಂಟರ್‌ಪ್ರೈಸಸ್‌ 22.02.2017ರ ಟಿಡಿಆರ್‌ ಸರ್ಟಿಫಿಕೇಟ್‌ ಬಳಕೆ ಮಾಡಿಕೊಳ್ಳಲು ಪರಿಷ್ಕೃತ ಯೋಜನೆಗೆ ಅನುಮತಿಸುವಂತೆ ಬಿಬಿಎಂಪಿಗೆ ನಿರ್ದೇಶಿಸಿರುವ ಆದೇಶವು ಊರ್ಜಿತವಾಗುವುದಿಲ್ಲ ಎಂದು ವಿಭಾಗೀಯ ಪೀಠ  ಆದೇಶಿಸಿದೆ.

ಸಂಗಮ್‌ ಎಂಟರ್‌ಪ್ರೈಸಸ್‌ 2015ರ ಏಪ್ರಿಲ್‌ 18ರ ಟಿಡಿಆರ್‌ ಬಳಕೆ ಮಾಡಿ ಸಮೀಪದ ಧನ್ವಂತರಿ ಮತ್ತು ಸುಬೇದಾರ್‌ ಛತ್ರ ರಸ್ತೆಗಳಲ್ಲಿ ತನ್ನ ಕಟ್ಟಡಕ್ಕೆ ಹೆಚ್ಚುವರಿ ಮಹಡಿಗಳನ್ನು ಸೇರ್ಪಡೆ ಮಾಡಲು ಮುಂದಾಗಿತ್ತು. ಕಟ್ಟಡದ ಎತ್ತರವನ್ನು 15 ಮೀಟರ್‌ಗಳಿಂದ 29.6 ಮೀಟರ್‌ಗೆ ಹೆಚ್ಚಿಸಲು ಪರಿಷ್ಕೃತ ಪ್ರಸ್ತಾವ ಸಲ್ಲಿಸಿತ್ತು. ಇದಕ್ಕೆ ಸಂಗಮ್‌ ಎಂಟರ್‌ಪ್ರೈಸಸ್‌ 2009ರಲ್ಲಿ ಬಿಬಿಎಂಪಿ ಹೊರಡಿಸಿದ್ದ ಸುತ್ತೋಲೆ ಮತ್ತು ತಾನು ಖರೀದಿಸಿದ್ದ ಟಿಡಿಆರ್‌ ಸರ್ಟಿಫಿಕೇಟ್‌ಗಳನ್ನು ಬಳಸಲು ಮುಂದಾಗಿತ್ತು.

ಬಿಬಿಎಂಪಿ ಪರ ವಕೀಲರು “ಸಂಗಮ್‌ ಎಂಟರ್‌ಪ್ರೈಸಸ್‌ 2017ರ ಫೆಬ್ರವರಿ 22ರಂದು ಪರಿಷ್ಕೃತ ಯೋಜನೆಗೆ ಅಗ್ನಿಶಾಮಕ ಸೇವೆಗಳ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಕೋರುವ ವೇಳೆಗೆ ಕೆಟಿಸಿಪಿ ಕಾಯಿದೆಯ ಸೆಕ್ಷನ್‌ 14ಬಿ ಗೆ ತಿದ್ದುಪಡಿ ಮಾಡಲಾಗಿತ್ತು. ಆನಂತರ ನಿಯಮಗಳಲ್ಲೂ ಪರಿಷ್ಕರಣೆ ಮಾಡಲಾಗಿದ್ದು, ಈ ನಿಯಮಗಳ ಅಡಿ ವಿನಾಯಿತಿಯನ್ನು ಶೇ.25ಕ್ಕೆ ಇಳಿಸಲಾಗಿತ್ತು” ಎಂದು ವಾದಿಸಿದ್ದರು.

ಸಂಗಮ್‌ ಎಂಟರ್‌ಪ್ರೈಸಸ್‌ ಪರ ವಕೀಲರು “2014ರ ಮಾರ್ಚ್‌ 28ರಂದು ಬಿಬಿಎಂಪಿಗೆ ಅರ್ಜಿ ಹಾಕಿರುವುದರಿಂದ ಅಂದು ಜಾರಿಯಲ್ಲಿದ್ದ ನಿಯಮದ ಅನ್ವಯ ಪರಿಷ್ಕೃತ ಯೋಜನೆಗೆ ಒಪ್ಪಿಗೆ ನೀಡಬೇಕು” ಎಂದು ವಾದಿಸಿದ್ದರು.