Bullet Train and Bombay High Court 
ಸುದ್ದಿಗಳು

[ಭೂಸ್ವಾಧೀನ ಪ್ರಕರಣ] ಬುಲೆಟ್ ಟ್ರೈನ್ ರಾಷ್ಟ್ರೀಯ ಮಹತ್ವದ ಯೋಜನೆ ಎಂದ ಬಾಂಬೆ ಹೈಕೋರ್ಟ್‌; ಗೊದ್ರೆಜ್ ಮನವಿ ತಿರಸ್ಕೃತ

ಯೋಜನೆಗೆ ರಾಷ್ಟ್ರೀಯ ಪ್ರಾಮುಖ್ಯತೆ ಇದ್ದು, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ಕಂಡುಬಂದಿಲ್ಲ ಎಂದಿದೆ ವಿಭಾಗೀಯ ಪೀಠ.

Bar & Bench

ಮುಂಬೈ-ಅಹಮದಾಬಾದ್ ಬುಲೆಟ್ ಟ್ರೈನ್ ಯೋಜನೆಗಾಗಿ ತನಗೆ ಸೇರಿದ ಭೂಮಿ ಸ್ವಾಧೀನ ಪಡೆಸಿಕೊಳ್ಳುವುದನ್ನು ಪ್ರಶ್ನಿಸಿ ʼಗೊದ್ರೆಜ್ ಅಂಡ್‌ ಬಾಯ್ಸ್‌ ಕಂಪೆನಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ [ಗೋದ್ರೇಜ್ & ಬಾಯ್ಸ್ ಮ್ಯಾನುಫ್ಯಾಕ್ಚರಿಂಗ್ ಕಂ ಲಿಮಿಟೆಡ್ ಮತ್ತು ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಯೋಜನೆಗೆ ರಾಷ್ಟ್ರೀಯ ಪ್ರಾಮುಖ್ಯತೆ ಇದ್ದು, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ಕಂಡುಬಂದಿಲ್ಲಎಂದು ನ್ಯಾಯಮೂರ್ತಿಗಳಾದ ಆರ್.ಡಿ.ಧನುಕಾ ಮತ್ತು ಎಂ.ಎಂ.ಸಥಯೆ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

“ನಮ್ಮ ದೃಷ್ಟಿಯಲ್ಲಿ ರಿಟ್‌ ಅಧಿಕಾರ ವ್ಯಾಪ್ತಿಯಲ್ಲಿ ನ್ಯಾಯಾಲಯಕ್ಕೆ ವಿವೇಚನಾಧಿಕಾರವಿದ್ದು ಆಸ್ತಿ ಸ್ವಾಧೀನಪಡಿಸಿಕೊಳ್ಳುವಾಗ ಪಾಲಿಸಬೇಕಾದ ಕಾರ್ಯವಿಧಾನದಲ್ಲಿ ಕೆಲ ಅಕ್ರಮಗಳಿವೆ ಎಂದ ಮಾತ್ರಕ್ಕೆ ನ್ಯಾಯಾಲಯ ವಿವೇಚನಾಧಿಕಾರ ಚಲಾಯಿಸಲು ಸಾಧ್ಯವಿಲ್ಲ. ರೈಲು ಯೋಜನೆಯು ರಾಷ್ಟ್ರೀಯ ಪ್ರಾಮುಖ್ಯತೆಯ ಮೂಲಸೌಕರ್ಯ ಮತ್ತು ಸಾರ್ವಜನಿಕ ಯೋಜನೆಯಾಗಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ.

ಖಾಸಗಿ ಹಿತಾಸಕ್ತಿಗಿಂತ ವ್ಯಾಪಕವಾದ ಸಾರ್ವಜನಿಕ ಹಿತಾಸಕ್ತಿ ಮೇಲುಗೈ ಸಾಧಿಸುತ್ತದೆ ಎಂದಿರುವ ನ್ಯಾಯಾಲಯವು, ಇದು ಈ ದೇಶದ ಕನಸಿನ ಯೋಜನೆಯಾಗಿದ್ದು, ಇಂತಹ ಪ್ರಥಮ ಯೋಜನೆಯಾಗಿದೆ ಎಂದಿದೆ.

ಗೋದ್ರೇಜ್ ಅಂಡ್‌ ಬಾಯ್ಸ್ ಕಂಪೆನಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ನವ್ರೋಜ್ ಸೀರ್ವಾಯ್ ಅರ್ಜಿಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶಿಸಿದರೆ ಕಂಪೆನಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅನುಕೂಲವಾಗುತ್ತದೆ ಎಂದರು. ಆದರೆ ಹೈಕೋರ್ಟ್‌ ಈ ಮನವಿ ನಿರಾಕರಿಸಿತು.

ಕಂಪೆನಿಗೆ ₹ 264 ಕೋಟಿ ನೀಡಿ ಅದಕ್ಕೆ ಸೇರಿದ ಭೂಮಿ ಸ್ವಾಧೀನಪಡಿಸಿಕೊಳ್ಳಲು ಜಿಲ್ಲಾಧಿಕಾರಿಯು 2022ರಲ್ಲಿ ನೀಡಿದ್ದ ಪರಿಹಾರ ಆದೇಶವನ್ನು ಕಂಪೆನಿ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಭೂಸ್ವಾಧೀನಕ್ಕಾಗಿ 2019 ರಲ್ಲಿ ಪ್ರಾರಂಭಿಸಲಾದ ಸಂಪೂರ್ಣ ಪ್ರಕ್ರಿಯೆಗಳು 2020ರಲ್ಲಿ ಕೊನೆಗೊಂಡಿದ್ದು ಅಧಿಕಾರಿ ನೀಡಿದ ಪರಿಹಾರ ಅನೂರ್ಜಿತವಾಗುತ್ತದೆ ಎಂದು ಕಂಪೆನಿ ಹೇಳಿತ್ತು.

ನ್ಯಾಯಯುತ ಪರಿಹಾರ ಪಡೆಯುವ ಹಕ್ಕು ಹಾಗೂ ಭೂಸ್ವಾಧೀನ, ಪುನರ್ವಸತಿ ಮತ್ತು ಪುನರಾಶ್ರಯದಲ್ಲಿನ ಪಾರದರ್ಶಕತೆ ಕಾಯಿದೆಗೆ ಮಾಡಲಾದ ತಿದ್ದುಪಡಿಯನ್ನು ಕಂಪೆನಿ ಪ್ರಶ್ನಿಸಿತ್ತು. ಈ ತಿದ್ದುಪಡಿಯಿಂದಾಗಿ ತಜ್ಞರು ನಡೆಸುವ ಸಾಮಾಜಿಕ ಪರಿಣಾಮದ ಮೌಲ್ಯಮಾಪನದಿಂದ ಬುಲೆಟ್‌ ರೈಲು ಯೋಜನೆಯನ್ನು ಹೊರಗಿಡುವುದಕ್ಕೆ ಅವಕಾಶವಾಗಿತ್ತು.

ರಾಜ್ಯ ಭೂಸ್ವಾಧೀನ ಪ್ರಾಧಿಕಾರದ ಪರವಾಗಿ ಮಾಜಿ ಅಡ್ವೊಕೇಟ್‌ ಜನರಲ್‌ ಅಶುತೋಷ್‌ ಕುಂಭಕೋಣಿ ಹಾಗೂ ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅನಿಲ್‌ ಸಿಂಗ್‌ ವಾದ ಮಂಡಿಸಿದ್ದರು.